ಚಾಮರಾಜನಗರ: ಅಕ್ರಮ ಔಷಧಿ ನಾಪತ್ತೆ ಪ್ರಕರಣ, ಕೖಷಿ ಅಧಿಕಾರಿಗೆ ನೋಟೀಸ್
ನ.8ರಂದು ಸರ್ಕಾರ ವಿತರಣೆ ಮಾಡದ ಎಂ ಪವರ್ ಔಷಧಿ ಗೋದಾಮಿನಲ್ಲಿ ದಾಸ್ತಾನು ಮಾಡಿರುವ ಬಗ್ಗೆ ಹಾಗೂ ಪಾಳ್ಯ ಕಸಬಾ ಕೇಂದ್ರದ ಸವಲತ್ತುಗಳನ್ನು ಕೊಳ್ಳೇಗಾಲ ಕೇಂದ್ರದಲ್ಲಿ ದಾಸ್ತಾನು ಮಾಡಿರುವ ಕುರಿತು ಸವಿವರ ವರದಿಯನ್ನು ‘ಕನ್ನಡಪ್ರಭ’ ಪ್ರಕಟಿಸಿತ್ತು.
ಎನ್. ನಾಗೇಂದ್ರಸ್ವಾಮಿ
ಕೊಳ್ಳೇಗಾಲ(ನ.14): ಕೊಳ್ಳೇಗಾಲದ ಆರ್ ಎಂ ಸಿಯಲ್ಲಿರುವ ಕೃಷಿ ಇಲಾಖೆಯ ಗೋದಾಮಿನಲ್ಲಿ ಸರ್ಕಾರ ವಿತರಿಸಿದ ಎಂ ಪವರ್ ಎಂಬ ಹೆಸರಿನ ಔಷಧಿ ಅಕ್ರಮ ದಾಸ್ತಾನಿನ ಬಗ್ಗೆ ಸೂಕ್ತ ಉತ್ತರ ನೀಡುವಂತೆ ಕೃಷಿ ಅಧಿಕಾರಿ ನಾಗೇಂದ್ರ ಅವರಿಗೆ ಸಹಾಯಕ ನಿರ್ದೇಶಕಿ ಸುಂದ್ರಮ್ಮ ನೋಟೀಸ್ ಜಾರಿಗೊಳಿಸಿದ್ದಾರೆ. ಅಲ್ಲದೆ, ಎಂ ಪವರ್ ಔಷಧಿ ನಾಪತ್ತೆ ಬಗ್ಗೆಯೂ ಉತ್ತರ ನೀಡುವಂತೆ ಪ್ರತ್ಯೇಕ ನೊಟೀಸ್ ಜಾರಿಗೊಳಿಸಿದ್ದಾರೆ.
ನ.8ರಂದು ಸರ್ಕಾರ ವಿತರಣೆ ಮಾಡದ ಎಂ ಪವರ್ ಔಷಧಿ ಗೋದಾಮಿನಲ್ಲಿ ದಾಸ್ತಾನು ಮಾಡಿರುವ ಬಗ್ಗೆ ಹಾಗೂ ಪಾಳ್ಯ ಕಸಬಾ ಕೇಂದ್ರದ ಸವಲತ್ತುಗಳನ್ನು ಕೊಳ್ಳೇಗಾಲ ಕೇಂದ್ರದಲ್ಲಿ ದಾಸ್ತಾನು ಮಾಡಿರುವ ಕುರಿತು ಸವಿವರ ವರದಿಯನ್ನು ‘ಕನ್ನಡಪ್ರಭ’ ಪ್ರಕಟಿಸಿತ್ತು. ಪತ್ರಿಕೆ ವರದಿ ಬಳಿಕ ಕೃಷಿ ಅಧಿಕಾರಿ ನಾಗೇಂದ್ರ ಎಚ್ಚೆತ್ತು ಗೋದಾಮಿನಲ್ಲಿದ್ದ ಅಕ್ರಮ ದಾಸ್ತಾನು ಔಷಧಿಯನ್ನು ಬೇರೆಡೆಗೆ ಸಾಗಿಸಿದ್ದರು. ಇದರ ವಾಸ್ತವ ಅರಿತ ಕನ್ನಡಪ್ರಭ ನ.9ರಂದು ‘ಬೆಳ್ಳಂಬೆಳಗ್ಗೆ ಅಕ್ರಮ ದಾಸ್ತಾನು ಔಷಧಿ ನಾಪತ್ತೆ’ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿ ಇಲಾಖೆ ಗಮನ ಸೆಳೆದಿತ್ತು. ಇದನ್ನು ಮನಗಂಡ ಸಹಾಯಕ ನಿರ್ದೇಶಕಿ ಸುಂದ್ರಮ್ಮ, ಎಂ ಪವರ್ ಔಷಧಿ ದಾಸ್ತಾನು ಮತ್ತು ನಾಪತ್ತೆ ಕುರಿತು ‘ಕನ್ನಡಪ್ರಭ’ ವರದಿಗೆ ಉತ್ತರ ನೀಡುವಂತೆ ಲೆಕ್ಕ ಸಹಾಯಕರಿಗೆ ಶೋಕಾಸ್ ನೋಟೀಸ್ ಜಾರಿಗೊಳಿಸಿದ್ದರು. ಬಳಿಕ ಕೃಷಿ ಅಧಿಕಾರಿಗೂ ಎಂಪವರ್ ಔಷಧಿ ದಾಸ್ತಾನು ಮತ್ತು ನಾಪತ್ತೆ ಸಂಬಂಧ ಕಾರಣ ಕೇಳಿ, ಪ್ರತ್ಯೇಕವಾಗಿ ಎರಡು ನೋಟೀಸ್ ಜಾರಿಗೊಳಿಸಿದ್ದರು.
ಮದುವೆ ಭಾಗ್ಯಕ್ಕೆ ಮಲೆ ಮಹದೇಶ್ವರನ ಮೊರೆ ಹೋದ ಬ್ರಹ್ಮಚಾರಿಗಳು!
ಇನ್ನೂ ಉತ್ತರ ನೀಡದ ಕೃಷಿ ಅಧಿಕಾರಿ:
ಗೋದಾಮಿನಲ್ಲಿ ಅಕ್ರಮ ಔಷಧಿ ದಾಸ್ತಾನು ಮತ್ತು ನಾಪತ್ತೆ ಪ್ರಕರಣ ಹಾಗೂ ರೈತರಿಗೆ ವಿತರಿಸಬೇಕಾದ ಸವಲತ್ತುಗಳನ್ನು ನಿಯಮ ಉಲ್ಲಂಘಿಸಿ ದಾಸ್ತಾನು ಮಾಡಿದ ಬಗ್ಗೆ ಸಹಾಯಕ ನಿರ್ದೇಶಕರು ನೋಟೀಸ್ ನೀಡಿ ನಾಲ್ಕೈದು ದಿನ ಕಳೆದರೂ ಸಂಬಂಧಿಸಿದ ಕೃಷಿ ಅಧಿಕಾರಿ ಇನ್ನೂ ಉತ್ತರಿಸಿಲ್ಲ ಎನ್ನಲಾಗಿದೆ. ಅಕ್ರಮ ಔಷಧಿ ದಾಸ್ತಾನು ಮತ್ತು ನಾಪತ್ತೆ ಪ್ರಕರಣದಲ್ಲಿ ಗೊಂದಲಕ್ಕೀಡಾಗಿರುವ ಕೃಷಿ ಅಧಿಕಾರಿಯು ಇದಕ್ಕೂ ನನಗೂ ಸಂಬಂಧವೇ ಇಲ್ಲ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಅಕ್ರಮ ಔಷಧಿ ಇದ್ದ ವಾಸ್ತವ ಒಪ್ಪಿಕೊಂಡ ಲೆಕ್ಕ ಸಹಾಯಕ
ಕೃಷಿ ಇಲಾಖೆ ವಿತರಿಸಿದ ಎಂಪವರ್ ಔಷಧಿ ದಾಸ್ತಾನು ಮತ್ತು ನಾಪತ್ತೆ ಪ್ರಕರಣದಲ್ಲಿ ಲೆಕ್ಕ ಸಹಾಯಕರಿಗೆ ನೋಟೀಸ್ ನೀಡಲಾಗಿ ಅವರು, ಆರ್ ಎಂ ಸಿ ಕೇಂದ್ರದಲ್ಲಿರುವ ಗೋದಾಮಿನಲ್ಲಿ ಅಕ್ರಮ ಔಷಧಿ(ಎಂ ಪವರ್) ದಾಸ್ತಾನಾಗಿದ್ದು ನಿಜ, ಕೃಷಿ ಅಧಿಕಾರಿ ನಾಗೇಂದ್ರರ ಸ್ನೇಹಿತನೆಂದು ಹೇಳಿಕೊಂಡು ಬಂದ ವ್ಯಕ್ತಿಯೊಬ್ಬ ಆ ಔಷಧಿ ಬಾಕ್ಸ್ ಗಳನ್ನು ನೀಡಿದ್ದನು. ಈ ವೇಳೆ ನನಗೆ ಕೃಷಿ ಅಧಿಕಾರಿಗಳೇ ದೂರವಾಣಿ ಕರೆ ಮಾಡಿ ಅದನ್ನು ತೆಗೆದುಕೊಳ್ಳಲು ಸೂಚಿಸಿದ್ದ ಹಿನ್ನೆಲೆ ಎಂಪವರ್ ಹೆಸರಿನ ಕೆಲವು ಔಷಧಿ ಬಾಕ್ಸ್ ಗಳನ್ನು ನಾನು ಪಡೆದು ಗೋದಾಮಿನಲ್ಲಿಟ್ಟಿದ್ದೆ. ಆದು ನ.7ರ ಸಂಜೆಯವರೆಗೂ ಇತ್ತು. ಸಾಯಂಕಾಲ 5ಗಂಟೆ ಸುಮಾರಿನಲ್ಲಿ ಗೋದಾಮಿನ ಬಾಗಿಲು ಹಾಕಿ ನಾನು ಮನೆಗೆ ತೆರಳಿದೆ, ಪುನಃ 8ರಂದು ಬೆಳಗ್ಗೆ 10-30ರ ಸುಮಾರು ಗೋದಾಮಿನ ಬೀಗ ತೆಗೆದುನೋಡಿದಾಗ ಎಂಪವರ್ ಔಷಧಿ ಕಾಣಿಸಲಿಲ್ಲ. ನನ್ನ ಹಾಗೂ ಲೋಕೇಶ್ ಎಂಬುವರ ಬಳಿ ಗೋದಾಮಿನ ಎರಡು ಕೀ ಗಳಿದ್ದವು. ಲೋಕೇಶ್ ಅವರಿಗೆ ಕೃಷಿ ಅಧಿಕಾರಿಗಳೇ ಬೀಗ ನೀಡಿದ್ದರು. 8 ರಂದು ಔಷಧಿ ಕಾಣಿಯಾಗಿರುವ ಬಗ್ಗೆ ಲೋಕೇಶ್ ರನ್ನು ವಿಚಾರಿಸಲಾಗಿ, ಅವರು ಕೃಷಿ ಅಧಿಕಾರಿಗಳು ಬೀಗ ತೆಗೆದುಕೊಂಡರು. ಈಗ ನನ್ನ ಬಳಿ ಕೀ ಇಲ್ಲ ಎಂದಿದ್ದಾರೆ. ಆದ್ದರಿಂದ ಔಷಧಿಗಳ ದಾಸ್ತಾನು ಹಾಗೂ ಕಾಣೆಯಾದ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಲೆಕ್ಕ ಸಹಾಯಕರು, ಸಹಾಯಕ ನಿರ್ದೇಶಕರ ನೋಟೀಸ್ ಗೆ ಉತ್ತರಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣದ ಸಂಬಂಧ ಮಾತನಾಡಿದ ಕೃಷಿ ನಿರ್ದೇಶಕಿ ಸುಂದ್ರಮ್ಮ, ಕೖಷಿ ಅಧಿಕಾರಿಗಳಿಂದ ಸಮರ್ಪಕ ಉತ್ತರ ಬಂದ ನಂತರ ವಾಸ್ತವ ವರದಿಯನ್ನು ಮುಂದಿನ ಕ್ರಮಕ್ಕಾಗಿ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗುವುದು. ಈ ಪ್ರಕರಣದಲ್ಲಿ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.