Asianet Suvarna News Asianet Suvarna News

ಮಂಗಳೂರು ಗೋಲಿಬಾರ್: ಕಮಿಷನರ್ ಸೇರಿ 176 ಪೊಲೀಸರಿಗೆ ನೋಟಿಸ್

ಮಂಗಳೂರು ನಗರ ಪೊಲೀಸ್‌ ಆಯುಕ್ತ ಡಾ. ಪಿ.ಎಸ್‌. ಹರ್ಷ ಮತ್ತು ಡಿಸಿಪಿ ಅರುಣಾಂಶಗಿರಿ ಸೇರಿದಂತೆ 176 ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿಗೆ ನೋಟಿಸ್‌ ಜಾರಿಗೊಳಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿಯೂ ಆಗಿರುವ ಮ್ಯಾಜಿಸ್ಟೀರಿಯಲ್‌ ತನಿಖಾಧಿಕಾರಿ ಜಗದೀಶ್‌ ತಿಳಿಸಿದ್ದಾರೆ.

 

Notice to 176 police men in related to mangalore golibar
Author
Bangalore, First Published Feb 20, 2020, 2:08 PM IST

ಮಂಗಳೂರು(ಫೆ.20): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಡಿ.19ರಂದು ನಡೆದ ಘರ್ಷಣೆ ಹಾಗೂ ಗೋಲಿಬಾರ್‌ ಘಟನೆಗೆ ಸಂಬಂಧಿಸಿ ವಿಚಾರಣೆಗೆ ಹಾಜರಾಗಲು ಮಂಗಳೂರು ನಗರ ಪೊಲೀಸ್‌ ಆಯುಕ್ತ ಡಾ. ಪಿ.ಎಸ್‌. ಹರ್ಷ ಮತ್ತು ಡಿಸಿಪಿ ಅರುಣಾಂಶಗಿರಿ ಸೇರಿದಂತೆ 176 ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿಗೆ ನೋಟಿಸ್‌ ಜಾರಿಗೊಳಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿಯೂ ಆಗಿರುವ ಮ್ಯಾಜಿಸ್ಟೀರಿಯಲ್‌ ತನಿಖಾಧಿಕಾರಿ ಜಗದೀಶ್‌ ತಿಳಿಸಿದ್ದಾರೆ.

ಮಂಗಳೂರಿನ ಮಿನಿ ವಿಧಾನಸೌಧದಲ್ಲಿರುವ ಮಂಗಳೂರು ಉಪವಿಭಾಗದ ಸಹಾಯಕ ಕಮಿಷನರ್‌ ಕೋರ್ಟ್‌ನಲ್ಲಿ ಬುಧವಾರ ಮ್ಯಾಜಿಸ್ಟ್ರೀಯಲ್‌ ವಿಚಾರಣೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮಂಗಳೂರು ಗೋಲಿಬಾರ್: ಇಲ್ಲಿವೆ ಕಲ್ಲೆಸೆದವರ ಫೋಟೋಸ್

ಪೊಲೀಸ್‌ ಇಲಾಖೆಯಿಂದ ನಿಯುಕ್ತರಾಗಿರುವ ನೋಡಲ್‌ ಅಧಿಕಾರಿಯಾದ ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಬೆಳ್ಳಿಯಪ್ಪ ಅವರು ಪ್ರಕರಣದ ಬಗ್ಗೆ ಸಾಕ್ಷ್ಯ ಹೇಳಲು ಸಿದ್ಧರಿರುವ 176 ಪೊಲೀಸರ ಪಟ್ಟಿಯನ್ನು ನೀಡಿದ್ದಾರೆ. ಮುಂದಿನ ವಿಚಾರಣೆಯ ದಿನಾಂಕವನ್ನು ಫೆ.25ಕ್ಕೆ ನಿಗದಿಪಡಿಸಲಾಗಿದೆ. ಅಂದು 176 ಮಂದಿಯ ಪೈಕಿ 12 ಮಂದಿ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿಗೆ ಸಾಕ್ಷ್ಯ ಹೇಳಲು ಅವಕಾಶ ನೀಡಲಾಗುವುದು. ಉಳಿದವರಿಗೆ ಹಂತ ಹಂತವಾಗಿ ಸಾಕ್ಷ್ಯ ನೀಡಲು ಅವಕಾಶ ಮಾಡಲಾಗುವುದು. ಮಂಗಳೂರು ಪೊಲೀಸ್‌ ಆಯುಕ್ತ ಡಾ. ಪಿ.ಎಸ್‌. ಹರ್ಷ ಮತ್ತು ಡಿಸಿಪಿ ಅರುಣಾಂಶಗಿರಿ ಅವರ ಹೆಸರು ಕೂಡ ಪಟ್ಟಿಯಲ್ಲಿವೆ. ಅವರು ಖದ್ದು ಹಾಜರಾಗಿ ಹೇಳಿಕೆ ನೀಡಲು ನೋಟಿಸ್‌ ಜಾರಿಗೊಳಿಸಲಾಗುವುದು ಎಂದು ಜಗದೀಶ್‌ ತಿಳಿಸಿದ್ದಾರೆ.

ಮಂಗಳೂರು ಗಲಭೆ: 148 ಮಂದಿ ವಿರುದ್ಧ FIR

ಘಟನೆ ನಡೆದ ಸ್ಥಳಗಳನ್ನು ಡಿ.31ರಂದು ಮಹಜರು ಮಾಡಲಾಗಿದೆ. ಜ.7, ಫೆ.6, ಫೆ.13ರಂದು ಸಾರ್ವಜನಿಕರ ಲಿಖಿತ ಸಾಕ್ಷ್ಯ ಹೇಳಿಕೆ ಮತ್ತು ವಿಡಿಯೋ ದೃಶ್ಯಾವಳಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ 203 ಮಂದಿ ಸಾಕ್ಷ್ಯ ನುಡಿದಿದ್ದರು. ಪೊಲೀಸರು 50 ವಿಡಿಯೋಗಳಿರುವ ಪೆನ್‌ಡ್ರೈವ್‌ ನೀಡಿದ್ದಾರೆ. ಸಾರ್ವಜನಿಕರು ಕೂಡ 1 ವೀಡಿಯೋ ಸಿಡಿ ನೀಡಿದ್ದಾರೆ. ಬುಧವಾರ ಮಾಜಿ ಮೇಯರ್‌ ಕೆ. ಅಶ್ರಫ್‌ ಲಿಖಿತ ಸಾಕ್ಷ್ಯ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ಈವರೆಗೆ 204 ಸಾಕ್ಷ್ಯಗಳು ದಾಖಲಿಸಿಕೊಳ್ಳಲಾಗಿದೆ ಎಂದು ಜಗದೀಶ್‌ ತಿಳಿಸಿದರು.

ರಾಜ್ಯ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಸಾರ್ವಜನಿಕರು ಅಥವಾ ಪೊಲೀಸರು ಖದ್ದು ಸೆರೆ ಹಿಡಿದ ವೀಡಿಯೋ ದೃಶ್ಯಾವಳಿಯನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಸಿಸಿ ಟಿವಿಯ ದೃಶ್ಯಾವಳಿಯನ್ನೂ ನೀಡಬಹುದು. ಆದರೆ ಯಾವುದೇ ದೃಶ್ಯಾವಳಿಗಳು ಫಾರ್ವರ್ಡ್‌ ಆಗಿರಬಾರದು. ಯಾಕೆಂದರೆ ಅದರ ಮೂಲ ಎಲ್ಲಿಯದ್ದು ಎಂದು ಗುರುತು ಹಿಡಿಯಲಾಗದ ಕಾರಣ ಅದನ್ನು ತನಿಖೆಗೊಳಪಡಿಸಲು ಸಾಧ್ಯವಾಗದು ಎಂದು ಸ್ಪಷ್ಟಪಡಿಸಿದ ಜಗದೀಶ್‌, ಅಶ್ರಫ್‌ ಫಾರ್ವರ್ಡ್‌ ಮಾಡಲಾದ ವೀಡಿಯೋವಿರುವ ಸಿಡಿಯನ್ನು ನೀಡಿದ್ದರು. ಅದನ್ನು ತನಿಖೆಗೊಳಪಡಿಸಲಾಗದ ಕಾರಣ ವಾಪಸ್‌ ನೀಡಲಾಗಿದೆ ಎಂದರು.

ಗಾಯಾಳು, ಇತರರಿಗೂ ಅವಕಾಶ:

ಈ ಘಟನೆಯಲ್ಲಿ ಅನೇಕ ಮಂದಿ ಗಾಯಗೊಂಡು ಚಿಕಿತ್ಸೆ ಪಡೆದು ಇದೀಗ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅಲ್ಲದೆ ಜೈಲು ಸೇರಿದ್ದ ಹಲವರು ಇದೀಗ ಜಾಮೀನು ಪಡೆದು ಹೊರ ಬಂದಿದ್ದಾರೆ. ಹೀಗೆ ಗಾಯಾಳು ಮತ್ತು ಜೈಲಿನಿಂದ ಬಿಡುಗಡೆಗೊಂಡವರು ಕೂಡ ಮುಂದಿನ ವಿಚಾರಣೆಯ ದಿನಗಳಲ್ಲಿ ಖುದ್ದು ಹಾಜರಾಗಿ ಹೇಳಿಕೆ ನೀಡಬಹುದು ಎಂದು ಜಗದೀಶ್‌ ತಿಳಿಸಿದರು.

ಫೆ.24ಕ್ಕೆ ಹೈಕೋರ್ಟ್‌ಗೆ ಮಾಹಿತಿ:

ಇದುವರೆಗೆ ಸಲ್ಲಿಕೆಯಾದ ಸಿಸಿ ಟಿವಿ ಫäಟೇಜ್‌ ಮತ್ತು ವೀಡಿಯೋದ ಸಿಡಿಗಳ ಸಂಖ್ಯೆ, ಸಾಕ್ಷ್ಯಗಳ ಹೇಳಿಕೆ ಇತ್ಯಾದಿಯ ಬಗ್ಗೆ ವಿವರವಾದ ಮಾಹಿತಿಯನ್ನು ಫೆ.24ರಂದು ಹೈಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ಜಗದೀಶ್‌ ಹೇಳಿದರು.

ಮಾರ್ಚ್ 23ಕ್ಕೆ ಹೈಕೋರ್ಟ್‌ಗೆ ಸಲ್ಲಿಕೆ:

ಪ್ರಕರಣದ ತನಿಖಾ ವರದಿಯನ್ನು ಮಾ.23ಕ್ಕೆ ಸಲ್ಲಿಸಲು ಹೈಕೋರ್ಟ್‌ ನಿರ್ದೇಶಿಸಿದೆ. ಅದರಂತೆ ಆ ದಿನ ವರದಿ ಸಲ್ಲಿಸಲು ಪ್ರಯತ್ನಿಸಲಾಗುವುದು. ಅದರೊಳಗೆ ವರದಿ ಸಲ್ಲಿಸಲು ಆಗದಿದ್ದರೆ, ಮುಂದಿನ ಬೆಳವಣಿಗೆಯನ್ನು ಗಮನಿಸಿ ಕಾಲಾವಧಿಯನ್ನು ವಿಸ್ತರಿಸುವ ಬಗ್ಗೆ ಹೈಕೋರ್ಟ್‌ಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪೊಲೀಸರ ವಿರುದ್ಧ ದೂರು-ಮಾಜಿ ಮೇಯರ್‌ ಅಶ್ರಫ್‌

ಬುಧವಾರ ಬೆಳಗ್ಗೆ 11 ಗಂಟೆಗೆ ಸಾಕ್ಷ್ಯ ನೀಡಲು ಕಾಲಾವಕಾಶ ನೀಡಲಾಗಿದ್ದರೂ ಮ್ಯಾಹ್ನ 12.40ರ ವರೆಗೆ ಯಾರೂ ಬಂದಿರಲಿಲ್ಲ. ಆ ಬಳಿಕ ಮಾಜಿ ಮೇಯರ್‌ ಅಶ್ರಫ್‌ ಲಿಖಿತ ಹೇಳಿಕೆ ನೀಡಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಡಿ.19ರ ಘಟನೆಗೆ ನಾನು ಪ್ರತ್ಯಕ್ಷ ಸಾಕ್ಷಿಯಾಗಿದ್ದೇನೆ. ಪರಿಸ್ಥಿತಿ ಕೈ ಮೀರಿದಾಗ ಕಮಿಷನರ್‌ ಹರ್ಷ ಅವರು ಖುದ್ದು ನನ್ನನ್ನು ಘಟನೆ ನಡೆದ ಸ್ಥಳಕ್ಕೆ ಬರುವಂತೆ ಸೂಚಿಸಿದ್ದರು. ಅಲ್ಲದೆ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ವಿನಂತಿಸಿದ್ದರು. ಅದರಂತೆ ನಾನು ಸ್ಥಳಕ್ಕೆ ತೆರಳಿ ಜನರನ್ನು ಸಮಾಧಾನಪಡಿಸುತ್ತಿರುವಾಗಲೇ ನನ್ನ ಮೇಲೆ ದಾಳಿಯಾಗಿದೆ. ಗಾಯಗೊಂಡ ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಪಡೆದು ಮರಳಿ ಬಂದರೂ ಕೂಡ ಆ ದಿನದ ಕಹಿ ಘಟನೆ ಇನ್ನೂ ಮರೆತಿಲ್ಲ. ಈಗಾಗಲೇ ಪ್ರಕರಣದ ಬಗ್ಗೆ ಹೈಕೋರ್ಟ್‌ ಮೆಟ್ಟಲೇರಿದ್ದೇನೆ. ಇಂದು ಕೂಡ ಪೊಲೀಸ್‌ ಆಯುಕ್ತ ಡಾ. ಹರ್ಷ, ಡಿಸಿಪಿ ಅರುಣಾಂಶಿಗಿರಿ, ಇನ್‌ಸ್ಪೆಕ್ಟರ್‌ಗಳಾದ ಶಾಂತರಾಮ ಕುಂದರ್‌, ಮುಹಮ್ಮದ್‌ ಶರೀಫ್‌ ಮತ್ತಿತರ ಪೊಲೀಸರು ನಡೆಸಿದ ದೌರ್ಜನ್ಯವನ್ನು ಲಿಖಿತ ದೂರಿನಲ್ಲಿ ತಿಳಿಸಿದ್ದೇನೆ. ಘಟನೆಯ ಬಗ್ಗೆ ಡಿ.28ರಂದು ಬಂದರ್‌ ಠಾಣೆಗೆ ರಿಜಿಸ್ಟರ್‌್ಡ ಅಂಚೆ ಮೂಲಕ ದೂರು ನೀಡಿದ್ದರೂ ಕೂಡಾ ಈವರೆಗೆ ಎಫ್‌ಐಆರ್‌ ದಾಖಲಾದ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ.

ಇಂದು 15 ಸಿಡಿಗಳನ್ನು ನೀಡಿದ್ದೆ. ಆದರೆ ಅದು ಫಾರ್ವರ್ಡ್‌ ದೃಶ್ಯಗಳ ವಿಡಿಯೋ ಸಿಡಿಗಳಾದ ಕಾರಣ ತನಿಖಾಧಿಕಾರಿ ಅದನ್ನು ಮರಳಿಸಿದ್ದಾರೆ. ಆದರೂ ಪೊಲೀಸರಿಂದ ನಮಗಾದ ಅನ್ಯಾಯದ ಬಗ್ಗೆ ಹೋರಾಟ ಮುಂದುವರಿಸಲಾಗುವುದು ಎಂದು ಅಶ್ರಫ್‌ ತಿಳಿಸಿದರು.

ಫೆಬ್ರವರಿ 20ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios