ಗದಗ: ಭೀಷ್ಮ ಕೆರೆ ಆವರಣದ 101 ಅಕ್ರಮ ಕಟ್ಟಡ ಮಾಲೀಕರಿಗೆ ನೊಟೀಸ್..!
* ಗದಗ-ಬೆಟಗೇರಿ ನಗರದ ಜನರ ಜೀವನಾಡಿ
* ವೈಜ್ಞಾನಿಕ ಸಮೀಕ್ಷೆ ನಡೆಸಿ ತೆರವುಗೊಳಿಸಿ ಕೆರೆ ಉಳಿಸಬೇಕಿದೆ
* ಹೈಕೋರ್ಟ್‌ಲ್ಲಿ ಪ್ರಕರಣ
ಶಿವಕುಮಾರ ಕುಷ್ಟಗಿ
ಗದಗ(ಜೂ.23): ನಗರದ ಹೃದಯ ಭಾಗದಲ್ಲಿರುವ ಅವಳಿ ನಗರದ ಜನರ ಜೀವನಾಡಿ, ಅಂತರ್ಜಲದ ಮೂಲವಾಗಿರುವ ಭೀಷ್ಮಕೆರೆ ವ್ಯಾಪಕವಾಗಿ ಒತ್ತುವರಿಯಾಗಿದ್ದು, ಅದು ಸಂಪೂರ್ಣ ತೆರವುಗೊಳ್ಳಬೇಕು ಎನ್ನುವ ಕೂಗಿಗೆ ಈಗ ಮಹತ್ವ ಬಂದಿದ್ದು, ಕೆರೆ ಸುತ್ತಲೂ ಇರುವ ಅಕ್ರಮ ಕಟ್ಟಡದಾರರಿಗೆ ನಗರಸಭೆ ನೊಟೀಸ್ ನೀಡಿದೆ.
ಭೀಷ್ಮ ಕೆರೆ ಮೂಲ ಆಸ್ತಿ ಮಾಲ್ಕಿ ಇದುವರೆಗೂ ರಾಜ್ಯಪಾಲರ ಹೆಸರಿನಲ್ಲಿದೆ. ಆ ದಾಖಲೆಯಲ್ಲಿ ಸರ್ವೆ ನಂಬರ್ 33, ಒಟ್ಟು ವಿಸ್ತೀರ್ಣ 103 ಎಕರೆ ಎಂದು ನಮೂದಾಗಿದೆ, ಆದರೆ ವಾಸ್ತವದಲ್ಲಿ ಕೆರೆ ಸದ್ಯ ಕೇವಲ 35 ಎಕರೆ ಮಾತ್ರ ಉಳಿದಿದ್ದು, ಸಾರ್ವಜನಿಕರು, ರಾಜಕೀಯ ನಾಯಕರ ಹಿಂಬಾಲಕರು, ಪ್ರಭಾವಿಗಳು ಸೇರಿದಂತೆ ಹಲವರು ಒತ್ತುವರಿ ಮಾಡಿಕೊಂಡಿದ್ದು, ಇವುಗಳನ್ನು ವೈಜ್ಞಾನಿಕ ಸಮೀಕ್ಷೆ ನಡೆಸಿ ತೆರವುಗೊಳಿಸಿ ಕೆರೆ ಉಳಿಸಬೇಕಿದೆ.
ಅಗ್ನಿಪಥ ಹೋರಾಟದ ಹಿಂದೆ ಕಾಂಗ್ರೆಸ್: ಸಚಿವ ಶ್ರೀರಾಮುಲು
ಹೈಕೋರ್ಟ್‌ಲ್ಲಿ ಪ್ರಕರಣ:
ಭೀಷ್ಮ ಕೆರೆ ಒತ್ತುವರಿ ವಿಷಯವಾಗಿ ತಾಲೂಕಿನ ಸಾರ್ವಜನಿಕರೊಬ್ಬರು ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂಖ್ಯೆ 28212/2019(ಜೆಎಂ-ಆರ್ ಇಎಸ್) ದಾಖಲಿಸಿದ್ದಾರೆ.
ಇದರ ಅನ್ವಯ ರಾಜ್ಯ ಉಚ್ಚ ನ್ಯಾಯಾಲಯ ಕಳೆದ ಮೂರುವರೆ ವರ್ಷದಿಂದ ಸುದೀರ್ಘ ವಿಚಾರಣೆ ನಡೆಸಿ ಕರ್ನಾಟಕ ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರಾಧಿಕಾರವು 11-2-2021ರಂದು ಗದಗ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸೂಚಿಸಿತ್ತು. ಆದರೆ ಕೊರೋನಾ ನೆಪ ಹೇಳಿ ಗದಗ ಜಿಲ್ಲಾಡಳಿತ ಮತ್ತು ಗದಗ ಬೆಟಗೇರಿ ನಗರಸಭೆ ನಿರ್ಲಕ್ಷ್ಯ ತೋರುತ್ತಲೇ ಬಂದಿದ್ದವು. ಇದೀಗ ನ್ಯಾಯಾಲಯದ ತೂಗುಗತ್ತಿ ತಪ್ಪಿಸಿಕೊಳ್ಳಲು ಅಕ್ರಮ ನಿವಾಸಿಗಳಿಗೆ ನೋಟಿಸ್ ನೀಡಿದೆ.
ಜಿದ್ದಾ ಜಿದ್ದಿನ ಘೋರ ಕಾಳಗದಲ್ಲಿ ಗೆದ್ದಿದ್ದು 'ಸಾವು': ಶ್ವಾನ, ಸರ್ಪದ ವಿಡಿಯೋ ವೈರಲ್..!
ಈ ಪ್ರಕರಣ ಜೂ.23 ರಂದು ವಿಚಾರಣೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಜೂ.14 ರಂದು ಗದಗ ಬೆಟಗೇರಿ ನಗರಸಭೆ ಕೆರೆಯ ಬಫರ್ ಜೋನ್ ಸೇರಿದಂತೆ ಒತ್ತುವರಿ ಎಂದು ಗುರುತಿಸಿರುವ ಎಲ್ಲ 101 ಜನರಿಗೆ ಅಂತಿಮ ನೊಟೀಸ್ ನೀಡಿದೆ.
ಈ ವಿಷಯವಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ಅದು ಗುರುವಾರ ಮತ್ತೊಮ್ಮೆ ವಿಚಾರಣೆಗೆ ಬರಲಿದೆ. ಕೆರೆ ಬಹಳಷ್ಟು ಪ್ರಭಾವಿಗಳು, ಪ್ರಮುಖರಿಂದಲೇ ಒತ್ತುವರಿಯಾಗಿದ್ದು, ಅವರೆಲ್ಲ ಬೇರೆ ಬೇರೆ ಮೂಲಗಳಿಂದ ಒತ್ತಡ ಹೇರುತ್ತಿದ್ದಾರೆ.
ನಜೀರ್ ಅಹ್ಮದ ಅಂಗಡಿ, ಸಾಮಾಜಿಕ ಹೋರಾಟಗಾರ, ಪ್ರಕರಣ ದಾಖಲಿಸಿದವರು.
ಕೆರೆ ಒತ್ತುವರಿ ಪ್ರಕರಣದ ವಿಷಯವಾಗಿ ನಗರಸಭೆಯ ಯಾವ ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾರೂ ಇದರ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದು, ಇದು ಕೂಡಾ ಹಲವು ಸಂಶಯಕ್ಕೆ ಕಾರಣವಾಗಿದೆ.