ಕಾಲಮಿತಿಯಲ್ಲಿ 8000 ಶಾಲಾ ಕೊಠಡಿ ನಿರ್ಮಾಣಕ್ಕೆಆಯಾಯ ಡಿಸಿ, ಜಿಪಂ ಸಿಇಒ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಶಿಕ್ಷಣ ಸಚಿವ ನಾಗೇಶ್‌ ಸೂಚನೆ ನೀಡಿದ್ದಾರೆ. 

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಸರ್ಕಾರ ‘ವಿವೇಕ’ ಯೋಜನೆಯಡಿ ಸರ್ಕಾರಿ ಶಾಲೆ, ಪಿಯು ಕಾಲೇಜುಗಳಿಗೆ ಮಂಜೂರು ಮಾಡಿರುವ 8,101 ಹೊಸ ಕೊಠಡಿಗಳ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಕೈಗೊಂಡು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬಿರುಕು ಬಿಟ್ಟ ಸರ್ಕಾರಿ ಶಾಲೆ; ಮನೆಯಲ್ಲೇ ಶಿಕ್ಷಕರ ಪಾಠ!

ಬುಧವಾರ ಹೊಸ ಕೊಠಡಿಗಳ ನಿರ್ಮಾಣ ಸೇರಿದಂತೆ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಂಬಂಧ ಎಲ್ಲ ಜಿಲ್ಲಾಧಿಕಾರಿಗಳು, ಸಿಇಒಗಳು ಮತ್ತು ಇಲಾಖೆಯ ಬಿಇಒ, ಡಿಡಿಪಿಐಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದ ಸಚಿವರು ಈ ಸಂಬಂಧ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಉತ್ತಮವಾಗಿದ್ದು, ಕೊಠಡಿಗಳು, ದುರಸ್ತಿ ಅಗತ್ಯ ನೋಡಿಕೊಂಡು ಆದ್ಯತೆ ಮೇರೆಗೆ ನೂತನ ಕೊಠಡಿಗಳು ನಿರ್ಮಾಣವಾಗಬೇಕು. ಕೊಠಡಿಗಳ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿ ವೇಳೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯ ಬಿದ್ದರೆ ಕಾಮಗಾರಿ ಮುಗಿಯುವವರೆಗೆ ವಿದ್ಯಾರ್ಥಿಗಳಿಗೆ ಪರ್ಯಾಯ ಕೊಠಡಿಗಳನ್ನು ವ್ಯವಸ್ಥೆ ಮಾಡಿಕೊಂಡು ತರಗತಿಗಳನ್ನು ನಡೆಸಬೇಕು. ಕಾಲಮಿತಿಯಲ್ಲಿ ಕೊಠಡಿಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು’ ಎಂದು ಸಚಿವರು ನಿರ್ದೇಶನ ನೀಡಿದರು.

ಮಕ್ಕಳು ಹೊರಹೋದ ಅರ್ಧ ತಾಸಲ್ಲಿ ಸರ್ಕಾರಿ ಶಾಲೆ ಚಾವಣಿ ಪದರ ಕುಸಿತ!

ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ಸರ್ಕಾರ ಆಯೋಜಿಸಿರುವ ‘ಮನೆ ಮನೆಯಲ್ಲಿ ಧ್ವಜಾರೋಹಣ’ ಅಭಿಯಾನವನ್ನು ಶಾಲೆ, ಕಾಲೇಜುಗಳಲ್ಲಿ ಯಶಸ್ವಿಗೊಳಿಸಲು ಈಗಾಗಲೇ ಅಗತ್ಯ ಮಾರ್ಗಸೂಚಿ ಹೊರಡಿಸಿದ್ದು ಅದರಂತೆ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್‌. ಸೆಲ್ವಕುಮಾರ್‌, ಆಯುಕ್ತ ಆರ್‌. ವಿಶಾಲ್‌, ರಾಜ್ಯ ಯೋಜನಾ ನಿರ್ದೇಶಕರಾದ ಬಿ.ಬಿ. ಕಾವೇರಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತರಾದ ಗರಿಮಾ ಪವಾರ್‌ ಉಪಸ್ಥಿತರಿದ್ದರು.