ಮಯೂರ ಹೆಗಡೆ

ಹುಬ್ಬಳ್ಳಿ(ನ.25): ದಿನಕ್ಕೆ ಆರೇಳು ಗಂಟೆಗಳ ಕಾಲ ಪಿಪಿಇ ಕಿಟ್‌ ಧರಿಸಿ ಕೋವಿಡ್‌ ಸೋಂಕಿತರ ಸೇವೆ ಮಾಡಿ ಗುಣಮುಖರಾಗುವಲ್ಲಿ ಶ್ರಮಿಸಿದ ಕಿಮ್ಸ್‌ನ ಕೊರೋನಾ ವಾರಿಯರ್ಸ್‌ಗಳಾದ ಸ್ಟಾಫ್‌ ನರ್ಸ್‌ಗಳಿಗೆ ಪ್ರೋತ್ಸಾಹಧನ ಇನ್ನೂ ಸಿಕ್ಕಿಲ್ಲ.

ಕೊರೋನಾ ಸೋಂಕಿತರ ಚಿಕಿತ್ಸೆಯಲ್ಲಿ ಫ್ರಂಟ್‌ಲೈನ್‌ನಲ್ಲಿ ನಿಂತು ಹೋರಾಡಿದವರು ನರ್ಸ್‌ಗಳು. ಒಳಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ಕಿಮ್ಸ್‌ನಲ್ಲಿರುವ ನರ್ಸ್‌ಗಳಿಗೆ ಸಿಗಬೇಕಾದ ಪ್ರೋತ್ಸಾಹಧನ ಕಳೆದ ಮೂರು ತಿಂಗಳಿಂದ ಮರೀಚಿಕೆಯಾಗೆ ಉಳಿದಿದೆ. ಆಸ್ಪತ್ರೆಯಲ್ಲಿ ಸಿ ಗ್ರುಪ್‌ನಲ್ಲಿ ಸೇವೆ ಸಲ್ಲಿಸುತ್ತಿರುವ 80 ಒಳಗುತ್ತಿಗೆ ಹಾಗೂ ಪಿಎಂಎಸ್‌ಎಸ್‌ವೈ ಅಡಿ (ಡಿ ಗ್ರುಪ್‌ ನೌಕರರು) ಸರಿಸುಮಾರು 90 ನೌಕರರು ಕರ್ತವ್ಯದಲ್ಲಿದ್ದಾರೆ.

ಮಾರ್ಚ್‌ನಿಂದ ಇವರೆಲ್ಲ ಕೋವಿಡ್‌ ಸೇವೆಯಲ್ಲಿದ್ದಾರೆ. ಪಿಪಿಇ ಕಿಟ್‌ ಧರಿಸಿ ಕೋವಿಡ್‌-19 ಸೇವೆ ಸಲ್ಲಿಸಿದ ಶುಶ್ರೂಷಾ ಸಿಬ್ಬಂದಿಗೆ ಆಗಸ್ಟ್‌ನಿಂದ ಆರು ತಿಂಗಳ ಕಾಲ 5 ಸಾವಿರ ಪ್ರೋತ್ಸಾಹ ಧನ (ಕೋವಿಡ್‌ ರಿಸ್ಕ್‌ ಇನ್ಸೆಂಟಿವ್‌) ನೀಡುವಂತೆ ಸರ್ಕಾರ ವೈದ್ಯಕೀಯ ಕಾಲೇಜುಗಳಿಗೆ ಸೂಚನೆ ನೀಡಿದೆ. ಆದರೆ, ಆದೇಶವಾಗಿ ಮೂರು ತಿಂಗಳು ಕಳೆದರೂ ಯಾರಿಗೂ ಪ್ರೋತ್ಸಾಹ ಧನ ಸಿಕ್ಕಿಲ್ಲ.

ಹೀಗೆ ಕರ್ತವ್ಯದಲ್ಲಿದ್ದ ಸಿ ಗ್ರುಪ್‌ನ ಸಿಬ್ಬಂದಿಯಲ್ಲಿ ಸುಮಾರು 15 ನರ್ಸ್‌ಗಳಿಗೆ ಕೋವಿಡ್‌ ಸೋಂಕು ತಗುಲಿತ್ತು. ಸೋಂಕಿತ ಜನರಂತೆ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಅವಕಾಶವೂ ಇಲ್ಲದೆ, ಸೂಕ್ತ ಚಿಕಿತ್ಸೆಯೂ ಸಿಗದವರೂ ಇದ್ದಾರೆ. ಇವರೆಲ್ಲರಿಗೆ ಹದಿನಾಲ್ಕೇ ದಿನ ಕೋವಿಡ್‌ ರಜೆಯಿದ್ದ ಕಾರಣ ಮನೆಯಲ್ಲೆ ಪ್ರತ್ಯೇಕವಾಗಿ ಉಳಿದು ಚಿಕಿತ್ಸೆ ಪಡೆದು ಮರುದಿನವೇ ಕರ್ತವ್ಯಕ್ಕೆ ಮರಳಿದವರೂ ಇದ್ದಾರೆ.

ಕನ್ನಡ ಸಂಘಟನೆಗಳ ಹೆಸರಲ್ಲಿ ರೋಲ್‌ಕಾಲ್‌ ಮಾಡುವವರು ಬಂದ್‌ ಕರೆ: ಅರವಿಂದ ಬೆಲ್ಲದ

ಹೆಸರು ಹೇಳಲಿಚ್ಛಿಸದ ಸಿಬ್ಬಂದಿ ಮಾತನಾಡಿ, ‘ತಿಂಗಳ ಕಾಲ ಮಕ್ಕಳ ಮುಖ ನೋಡದೆ ಕೊರೋನಾ ಪೀಡಿತರ ಸೇವೆ ಮಾಡಿದ್ದೇವೆ. ಪ್ರತಿದಿನ ಆರೇಳು ಗಂಟೆ ಕಾಲ ಪಿಪಿಇ ಕಿಟ್‌ ಧರಿಸಿದವರಿಗೆ ಮಾತ್ರ ಅದರ ಕಷ್ಟದ ಅರಿವಾಗುತ್ತದೆ. ಪಿಪಿಇ ಕಿಟ್‌ ಧರಿಸುತ್ತಿದ್ದರೂ ಕೂಡ ಮನೆಗೆ ಹೋದರೆ ಪ್ರತ್ಯೇಕವಾಗಿ ಪತ್ನಿ, ಮಕ್ಕಳಿಂದ ದೂರವಾಗಿಯೆ ಇರುತ್ತಿದ್ದೆವು. ಕೊರೋನಾ ಪೀಡಿತರ ಹತ್ತಿರ ಹೋಗಲು ಕೂಡ ಕೆಲ ವೈದ್ಯರು ಆತಂಕ ವ್ಯಕ್ತಪಡಿಸುತ್ತಿದ್ದ ವೇಳೆ ನಾವು ಅವರಿಗೆ ಸಂಪೂರ್ಣ ಚಿಕಿತ್ಸೆ ನೀಡಿದ್ದೇವೆ’.

ಆದರೆ, ಪ್ರೋತ್ಸಾಹಧನದ ಪ್ರಸ್ತಾಪ ಮಾಡಿ ಈಗ ಸುಮ್ಮನಾಗಿರುವುದು ಬೇಸರ ಮೂಡಿಸಿದೆ. ಕೊರೋನಾ ವೇಳೆ ಕುಟುಂಬದ ಇತರ ಸದಸ್ಯರ ಉದ್ಯೋಗ ಕಡಿತವಾಗಿ ಆರ್ಥಿಕ ಸಂಕಷ್ಟ ಅನುಭವಿಸಿದ್ದೇವೆ. ಜೀವ ಪಣಕ್ಕಿಟ್ಟು ಹೋರಾಡಿದ ನಮಗೆ ಕೊರೋನಾ ವಾರಿಯರ್ಸ್‌ ಎಂದು ಕೇವಲ ಸನ್ಮಾನ ಮಾಡಿ ಕೈ ತೊಳೆದುಕೊಂಡಿದ್ದಾರೆ, ನ್ಯಾಯವಾಗಿ ಸಲ್ಲಬೇಕಾದ ಹಣ ನೀಡದಿರುವುದು ಬೇಸರ ಮೂಡಿಸಿದೆ ಎಂದು ಸಿ ಗ್ರೂಪ್‌ನ ಸಿಬ್ಬಂದಿಯೊಬ್ಬರು ಬೇಸರ ತೊಡಿಕೊಂಡರು.
ಭಿನ್ನರಾಗ

ಡಿ ಗ್ರುಪ್‌ ನೌಕರರು ತಮಗೆ ಪ್ರೋತ್ಸಾಹಧನ ನೀಡಲಾಗಿಲ್ಲ ಎಂದು ಬೇಸರ ತೋಡಿಕೊಂಡರೆ, ಕಿಮ್ಸ್‌ ನಿರ್ದೇಶಕರು ಹಾಗೂ ಅಧಿಕಾರಿಗಳು ಇವರಿಗೆ ಪ್ರೋತ್ಸಾನ ಧನ ನೀಡಲಾಗಿದೆ ಎನ್ನುತ್ತಿದ್ದಾರೆ. ಈ ಕುರಿತಂತೆ ಈಚೆಗೆ ಕಿಮ್ಸ್‌ಗೆ ಭೇಟಿ ನೀಡಿದ ಆರೋಗ್ಯ ಸಚಿವ ಡಾ.ಸುಧಾಕರ್‌ ಅವರಿಗೂ ಮನವಿ ನೀಡಿದ್ದೇವೆ. ನಮಗೆ ಯಾವುದೆ ರೀತಿ ಕೋವಿಡ್‌ ರಿಸ್ಕ್‌ ಇನ್ಸೆಂಟಿವ್‌ ಹಣ ನೀಡಿಲ್ಲ ಎನ್ನುತ್ತಿದ್ದಾರೆ.

ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗೆ ಪ್ರೋತ್ಸಾಹ ಧನ ನೀಡಿದ್ದೇವೆ. ಒಳಗುತ್ತಿಗೆ ಸಿಬ್ಬಂದಿಗೆ ಪ್ರೋತ್ಸಾಹ ಧನ ನೀಡಲಾಗಿಲ್ಲ. ಪ್ರೋತ್ಸಾಹ ಧನ ನೀಡಿಲ್ಲ ಎಂಬ ವಿಚಾರದ ಕುರಿತು ಪರಿಶೀಲನೆ ಮಾಡಲಾಗುವುದು ಎಂದು ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ತಿಳಿಸಿದ್ದಾರೆ.