ಕನ್ನಡ ಸಂಘಟನೆಗಳ ಹೆಸರಲ್ಲಿ ರೋಲ್‌ಕಾಲ್ ಮಾಡುವವರು ಬಂದ್ ಕರೆ: ಅರವಿಂದ ಬೆಲ್ಲದ
ವಾಟಾಳ ನಾಗರಾಜಗೆ ಏನು ಮಾಡಬೇಕು ಎಂಬುದು ಗೊತ್ತಿಲ್ಲ. ಬರೀ ಸುದ್ದಿಯಲ್ಲಿರಬೇಕೆಂದು ಬಯಸುವವರು ಅವರು. ಹೀಗಾಗಿ ಬಂದ್, ಹೋರಾಟ ಮಾಡುತ್ತಿದ್ದಾರೆ. ಈ ರೀತಿ ಸುದ್ದಿಯಲ್ಲಿರಬೇಕೆನ್ನುವವರಿಗೆ ನೀವು ಪ್ರಾಮುಖ್ಯತೆ ಕೊಡಬೇಡಿ ಎಂದ ಅರವಿಂದ ಬೆಲ್ಲದ
ಹುಬ್ಬಳ್ಳಿ(ನ.25): ರಾಜ್ಯದಲ್ಲಿರುವ ಮರಾಠಾ ಸಮುದಾಯದ ಅಭಿವೃದ್ಧಿಗೆ ಸ್ಥಾಪಿಸಿರುವ ನಿಗಮದ ಬಗ್ಗೆ ಕನ್ನಡಪರ ಸಂಘಟನೆಗಳ ವಿರೋಧ ಸರಿಯಲ್ಲ. ಸದ್ಯ ಕನ್ನಡ ಸಂಘಟನೆಗಳ ಹೆಸರಲ್ಲಿ ರೋಲ್‌ಕಾಲ್ ಮಾಡುವವರು ಇದೀಗ ಬಂದ್ ಕರೆ ನೀಡಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ಕಿಡಿಕಾರಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಾಟಾಳ್ ನಾಗರಾಜ್ ನೇತೃತ್ವದ ತಂಡ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರಕ್ಕೆ ವಿನಾಕಾರಣ ಬಂದ್‌ಗೆ ಕರೆ ನೀಡಿದೆ. ಇದು ಸರಿಯಲ್ಲ ಎಂದರು.
ವಾಟಾಳ ನಾಗರಾಜಗೆ ಏನು ಮಾಡಬೇಕು ಎಂಬುದು ಗೊತ್ತಿಲ್ಲ. ಬರೀ ಸುದ್ದಿಯಲ್ಲಿರಬೇಕೆಂದು ಬಯಸುವವರು ಅವರು. ಹೀಗಾಗಿ ಬಂದ್, ಹೋರಾಟ ಮಾಡುತ್ತಿದ್ದಾರೆ. ಈ ರೀತಿ ಸುದ್ದಿಯಲ್ಲಿರಬೇಕೆನ್ನುವವರಿಗೆ ನೀವು ಪ್ರಾಮುಖ್ಯತೆ ಕೊಡಬೇಡಿ ಎಂದರು.
ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿರುವುದು ಸ್ವಾಗತಾರ್ಹ. ಮರಾಠಾ ದೊಡ್ಡ ಸಮಾಜ. ರಾಜ್ಯಕ್ಕೆ ಮರಾಠಾ ಸಮಾಜದ ಕೊಡುಗೆ ದೊಡ್ಡದು. ನನ್ನ ಕ್ಷೇತ್ರದಲ್ಲೂ ಈ ಸಮಾಜವಿದೆ. ನವಲೂರು, ಸತ್ತೂರು, ಧಾರವಾಡ ಹೀಗೆ ಎಲ್ಲೆಡೆ ಈ ಸಮಾಜದವರಿದ್ದಾರೆ. ಶೇ.90ರಷ್ಟು ಜನರಿಗೆ ಮರಾಠಿ ಮಾತನಾಡಲು ಬರಲ್ಲ. ಅವರದು ಮರಾಠಾ ಸಮಾಜವಾದರೂ ಕನ್ನಡಿಗರೇ ಅವರು. ಈ ಸಮಾಜದವರು ಬೀದರ್‌ನಿಂದ ಹಿಡಿದು ಬೆಂಗಳೂರುವರೆಗೂ ಇದ್ದಾರೆ. ಸಾಕಷ್ಟು ಹಿಂದುಳಿದಿದೆ. ಈ ಕಾರಣಕ್ಕಾಗಿ ಅಭಿವೃದ್ಧಿ ಹೊಂದಲಿ ಎಂಬ ದೃಷ್ಟಿಯಿಂದ ಈ ಮರಾಠಾ ಅಭಿವೃದ್ಧಿ ನಿಗಮ ರಚಿಸಲಾಗಿದೆ. ಇದು ಸ್ವಾಗತಾರ್ಹ ಎಂದರು.
ಧಾರವಾಡ ಜಿಲ್ಲೆಯಲ್ಲಿ 6 ಸಾವಿರ ಕೋಟಿ ಬಂಡವಾಳ ಹೂಡಿಕೆ: ಸಚಿವ ಶೆಟ್ಟರ್
ನವಲೂರ ಬಳಿಯ ಬಿಆರ್‌ಟಿಎಸ್ ಬ್ರಿಡ್ಜ್ ಕುರಿತು ಪ್ರತಿಕ್ರಿಯಿಸಿದ ಅವರು, ಬ್ರಿಡ್ಜ್ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಆಗಿರುವುದು ಮೇಲ್ನೋಟಕ್ಕೆ ಗೊತ್ತಾದ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಸಿಎಂ ಅವರಿಗೆ ಮನವಿ ಮಾಡಲಾಗಿತ್ತು. ಅದರಂತೆ ಮೂರು ತಿಂಗಳಲ್ಲಿ ಕೆಆರ್‌ಡಿಸಿಎಲ್ ವರದಿ ನೀಡಲಿದೆ. ಬಿಆರ್‌ಟಿಎಸ್ ಒಳ್ಳೆಯ ಯೋಜನೆಯಾಗಿದ್ದು, ಕಾಮಗಾರಿ ಅನುಷ್ಠಾನದಲ್ಲಿ ಅಂದಿನ ಸರ್ಕಾರ ತಪ್ಪು ಮಾಡಿದೆಯಲ್ಲದೇ, ಬೇಕಾಬಿಟ್ಟಿ ಕಾಮಗಾರಿ ಅನುಷ್ಠಾನ ಮಾಡಿದೆ. ಹೀಗಾಗಿ ಅದಕ್ಕೆ ಹೊಸ ಗತಿ ನೀಡಲು ಪ್ರಯತ್ನಿಸಲಾಗುತ್ತಿದೆ. ಹು-ಧಾ ಮಹಾನಗರ ವ್ಯಾಪ್ತಿಯ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದೆ. ಇದು ಪೂರ್ಣಗೊಂಡ ನಂತರದಲ್ಲಿ ಹೊಸ ರಸ್ತೆಗಳ ಕಾಮಗಾರಿಗಳು ನಡೆಯಲಿದೆ ಎಂದರು.
ನಾನು ಸಚಿವ ಸ್ಥಾನದ ಆಕಾಂಕ್ಷಿ. ಹಾಗಂತ ಸಚಿವಗಿರಿಗಾಗಿ ಲಾಬಿ ನಡೆಸಲ್ಲ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಯಾರಿಗೆ ಯಾವಾಗ ಯಾವ ಸ್ಥಾನ ಕೊಡಬೇಕೆಂಬುದು ಪಕ್ಷದ ವರಿಷ್ಠರಿಗೆ ಗೊತ್ತಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.