ಗಾಂಧೀಜಿ ಒಬ್ಬರ ಹೋರಾಟದಿಂದ ಸ್ವಾತಂತ್ರ್ಯ ಸಿಕ್ಕಿಲ್ಲ: ಬಿ.ಎಲ್‌. ಸಂತೋಷ

ಭಾರತದ ಪ್ರತಿಭಾಗದಿಂದಲೂ ಹೋರಾಟಗಾರರು ಭಾಗವಹಿಸುತ್ತಿದ್ದರು. ಯಾವ ಭಾಗದಲ್ಲೂ ಸ್ವಾತಂತ್ರ್ಯ ಹೋರಾಟ ನಿಷ್ಕ್ರೀಯವಾಗಿರಲಿಲ್ಲ. ದೇಶದ ಸ್ವಾತಂತ್ರ್ಯಕ್ಕೆ ಬಾಲಕರು, ಯುವಕರು, ಮಹಿಳೆಯರು ಸೇರಿ ಲಕ್ಷಾಂತರ ಜನರ ತ್ಯಾಗ, ಬಲಿದಾನವಿದೆ ಎಂದ ಬಿ.ಎಲ್‌. ಸಂತೋಷ 

Not Get Freedom by Gandhiji Fighting Alone Says BL Santosh grg

ಹುಬ್ಬಳ್ಳಿ(ಅ.10):  ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧಿ ಒಬ್ಬರೇ ಹೋರಾಡಲಿಲ್ಲ. ಅವರೊಬ್ಬರೇ ಹೋರಾಡಿದ್ದಾರೆ ಎಂದರೆ ಉಳಿದ ಹೋರಾಟಗಾರರಿಗೆ ಅವಮಾನ ಮಾಡಿದಂತೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ ಹೇಳಿದರು. ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಭಾನುವಾರ ‘ಪ್ರಜ್ಞಾ ಪ್ರವಾಹ ಕರ್ನಾಟಕ ಉತ್ತರದ ವತಿಯಿಂದ ನಡೆದ ಸ್ವರಾಜ್‌- 75 ಪುಸ್ತಕ ಬಿಡುಗಡೆ’ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾರತದ ಪ್ರತಿಭಾಗದಿಂದಲೂ ಹೋರಾಟಗಾರರು ಭಾಗವಹಿಸುತ್ತಿದ್ದರು. ಯಾವ ಭಾಗದಲ್ಲೂ ಸ್ವಾತಂತ್ರ್ಯ ಹೋರಾಟ ನಿಷ್ಕ್ರೀಯವಾಗಿರಲಿಲ್ಲ. ದೇಶದ ಸ್ವಾತಂತ್ರ್ಯಕ್ಕೆ ಬಾಲಕರು, ಯುವಕರು, ಮಹಿಳೆಯರು ಸೇರಿ ಲಕ್ಷಾಂತರ ಜನರ ತ್ಯಾಗ, ಬಲಿದಾನವಿದೆ ಎಂದ ಅವರು, ಗಾಂಧೀಜಿ ಒಬ್ಬರ ಹೋರಾಟದಿಂದ ಸ್ವಾತಂತ್ರ್ಯ ಸಿಕ್ಕಿಲ್ಲ. ಸ್ವಾತಂತ್ರ್ಯಕ್ಕೆ ಅಸಹಕಾರ, ಸ್ವದೇಶಿ ಚಳವಳಿ ಮಹತ್ವದ ಕೊಡುಗೆ ನೀಡಿವೆ ಎಂದು ನುಡಿದರು.

ಸರ್ಕಾರದಿಂದ ಮಹದಾಯಿ ಮೂಲಸ್ವರೂಪವೇ ಬದಲು: ಎನ್‌.ಎಚ್‌. ಕೋನರಡ್ಡಿ

ಭಾರತೀಯರೆಲ್ಲರೂ ಬ್ರಿಟಿಷರ ವಿರುದ್ಧ ಸೆಡ್ಡು ಹೊಡೆದು ನಿಂತಿದ್ದರು. ಬಹುತೇಕ ಇತಿಹಾಸಕಾರರು ಈ ಸತ್ಯವನ್ನು ತಿಳಿಸಲೇ ಇಲ್ಲ. ಇತಿಹಾಸದ ಪುಟಗಳಲ್ಲಿ ಕರಿಪರದೆ ಎಳೆಯಲಾಗಿತ್ತು. ಈಗ ಅದನ್ನು ಸರಿಸಿ ಜನರಿಗೆ ಸತ್ಯ ಹೇಳಲಾಗುತ್ತಿದೆ. ಬಾಲಗಂಗಾಧರ್‌ ತಿಲಕ, ಸುಭಾಶ್ಚಂದ್ರ ಬೋಸ್‌, ಚಂದ್ರಶೇಖರ ಆಜಾದ್‌ ಹೋರಾಟ, ಬದುಕು ಜನರಿಗೆ ತಿಳಿಸಲಾಗುತ್ತಿದೆ. ಸುಭಾಶ್ಚಂದ್ರ ಬೋಸ್‌ ಅವರ ಪುತ್ಥಳಿ ಸ್ಥಾಪಿಸಲು ಬಿಜೆಪಿ ಅಧಿಕಾರಕ್ಕೆ ಬರಬೇಕಾಯಿತು ಎಂದು ಕಿಡಿಕಾರಿದರು.

ಭಾರತ ನಗಣ್ಯ ಎಂಬ ಸ್ಥಿತಿ ಈಗ ಇಲ್ಲ. ಭಾರತವನ್ನು ಇಡೀ ವಿಶ್ವವೇ ಗುರುತಿಸುತ್ತಿದೆ. ಭಾರತ ಬದಲಾಗುತ್ತಿದೆ. ಇದಕ್ಕೆ ಸಮಾಜ ಕೈಜೋಡಿಸಿದರೆ ಭಾರತವನ್ನು ಅಗ್ರಗಣ್ಯ ದೇಶವಾಗಿ ನಿರ್ಮಿಸಲು ಸಾಧ್ಯ. ಸ್ವಾತಂತ್ರ್ಯದ ಶತಮಾನೋತ್ಸವ ಆಚರಣೆಗಾಗಿ ಮುಂದಿನ 25 ವರ್ಷದ ಯೋಜನೆ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಸಂತೋಷ ತಿಳಿಸಿದರು.

ಬ್ರಿಟಿಷರು ಹೇಗೆ ದೇಶವನ್ನು ಕೊಳ್ಳೆ ಹೊಡೆದರು ಎಂಬುದನ್ನು ಈ ವರೆಗೆ ಯಾವ ಇತಿಹಾಸಕಾರರು ಸರಿಯಾಗಿ ತಿಳಿಸಿರಲಿಲ್ಲ. ಆ ಪ್ರಯತ್ನ ಸ್ವರಾಜ್‌-75 ಪುಸ್ತಕದಲ್ಲಿ ಆಗಿದೆ. ಭಾರತದ ನೈಜ ಹಾಗೂ ಸಮಗ್ರ ಸ್ವಾತಂತ್ರ್ಯ ಹೋರಾಟವನ್ನು ಪುಸ್ತಕದಲ್ಲಿ ಕಟ್ಟಿಕೊಡಲಾಗಿದೆ ಎಂದರು.

ವಿಆರ್‌ಎಲ್‌ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ನಾವೆಲ್ಲ ಸ್ಮರಿಸಬೇಕಾಗಿದೆ. ದೇಶಕ್ಕೆ ಆರ್‌ಎಸ್‌ಎಸ್‌ ಕೊಡುಗೆ ಅಪಾರವಾದುದು. ಕೋವಿಡ್‌ ವೇಳೆ ಆರ್‌ಎಸ್‌ಎಸ್‌ ಸೇವೆ ಶ್ಲಾಘನೀಯವಾದುದು. ದೇಶದಲ್ಲಿ ಹಿಂದುತ್ವದ ಒಗ್ಗಟ್ಟು ಕಾಪಾಡಲು ಆರ್‌ಎಸ್‌ಎಸ್‌ ಅಗತ್ಯವಾಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿವಿ ಸಹಪ್ರಾಧ್ಯಾಪಕ ಡಾ. ಸಂತೋಷಕುಮಾರ ಪಿ.ಕೆ. ಪುಸ್ತಕ ಪರಿಚಯ ಮಾಡಿದರು. ಪೂರ್ಣಾನಂದ ಮಳಲಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಜ್ಞಾ ಪ್ರವಾಹದ ಕರ್ನಾಟಕ ಉತ್ತರದ ಸಂಯೋಜಕ ಡಾ. ನಿರಂಜನ ಪೂಜಾರ, ಶಾಸಕ ಅರವಿಂದ ಬೆಲ್ಲದ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಸ್ವರ್ಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಎಸ್‌ವಿ ಪ್ರಸಾದ ಮತ್ತಿತರರಿದ್ದರು.

ಇದಕ್ಕೂ ಮುನ್ನ ಸೃಜನಿ ಕಲಾ ತಂಡದಿಂದ ಕೆಳದಿ ಚೆನ್ನಮ್ಮ, ನಾಟ್ಯಾಂಜಲಿ ತಂಡದಿಂದ ವೀರ ರಾಣಿ ಅಬ್ಬಕ್ಕ ನೃತ್ಯ ರೂಪಕ ಜರುಗಿತು. ಕೋಮಲ ನಾಡಿಗೇರ ದೇಶಭಕ್ತಿ ಗೀತೆ, ಸಿರಿ, ಸ್ಮಿತಾ ವಂದೇ ಮಾತರಂ ಪ್ರಸ್ತುತಪಡಿಸಿದರು. ಶಿವಾನಂದಗೌಡ ಪಾಟೀಲ ವಂದಿಸಿದರು.

ಸಾವರ್ಕರ್‌ ಕುರಿತು ಅಪಪ್ರಚಾರ ನಿಲ್ಲಿಸಲಿ

ವೀರಸಾವರ್ಕರ್‌ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು. ಅವರ ಹೋರಾಟವನ್ನು ನೆನಪಿಸಿಕೊಳ್ಳದಿದ್ದಲ್ಲಿ ನರಕಕ್ಕೆ ಹೋಗುತ್ತೀರಿ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ ಹೇಳಿದರು. ವೀರ ಸಾವರ್ಕರ್‌ ಕುರಿತು ಹಸಿ ಸುಳ್ಳು, ಅಪಪ್ರಚಾರ ನಿಲ್ಲಿಸಬೇಕು. ಇಲ್ಲದಿದ್ದರೆ ನಾವು ನಿಲ್ಲಿಸುತ್ತೇವೆ ಎಂದು ಎಚ್ಚರಿಕೆಯನ್ನೂ ನೀಡಿದರು.

ಹುಬ್ಬಳ್ಳಿ-ದೆಹಲಿ ವಿಮಾನ ಆರಂಭವಾದರೆ ಉದ್ಯಮಕ್ಕೆ ಅನುಕೂಲ

ಎಡಪಂಥೀಯರು ಭಾರತಕ್ಕೆ ಸಾಕಷ್ಟುಅನ್ಯಾಯ ಮಾಡಿದ್ದಾರೆ. ಕೇವಲ ರಾಜಕೀಯಕ್ಕಾಗಿ ಸಾವರ್ಕರ್‌ಗೆ ಅಪಮಾನ ಮಾಡಲಾಗುತ್ತಿದೆ.ಇಂತಹ ವಿಷಯದಿಂದ ಭಾರತ ಅಪಾಯದ ಸನ್ನಿವೇಶ ಎದುರಿಸುತ್ತಿದೆ. ಇವೆಲ್ಲವನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ನಾವೇ ನಿಲ್ಲಿಸುತ್ತೇವೆ ಎಂದು ಎಚ್ಚರಿಸಿದರು. ಅಲ್ಲದೇ, ವೀರಸಾವರ್ಕರ್‌ ಸ್ವಾತಂತ್ರ್ಯ ಹೋರಾಟವನ್ನು ನೆನಪಿಸಿಕೊಳ್ಳಲೇಬೇಕು. ಅವರ ಹೋರಾಟವನ್ನು ನೆನಪಿಸಿಕೊಳ್ಳದಿದ್ದಲ್ಲಿ ನರಕಕ್ಕೆ ಹೋಗುತ್ತೀರಿ ಎಂದರು. ಪಾಲಕರು ಮಕ್ಕಳನ್ನು ಪ್ರವಾಸಿ ತಾಣಗಳಿಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದಲ್ಲದೇ, ಸಂಗೊಳ್ಳಿ ರಾಯಣ್ಣ ಸೇರಿ ಹುತಾತ್ಮರ ಸ್ಮಾರಕಗಳಿಗೆ ಕರೆದುಕೊಂಡು ಹೋಗಿ ಅವರ ಜೀವನ, ಹೋರಾಟ ತಿಳಿಸಬೇಕು ಎಂದು ಕರೆ ನೀಡಿದರು.

ಭಾರತ ಮಾತಾಕಿ ಜೈ, ವಂದೇ ಮಾತರಂ ಘೋಷಣೆ ಕೂಗಿದರೆ ಅಲ್ಲಿ ಆರ್‌ಎಸ್‌ಎಸ್‌, ಎಬಿವಿಪಿ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳುವಂತಹ ವಿಕೃತ ಮನಸ್ಥಿತಿ ನಿರ್ಮಾಣ ಮಾಡಲಾಗಿದೆ. ಭಾರತ ಮಾತೆಗೆ ಜೈ ಎನ್ನುವುದಕ್ಕೆ ಮನಸಿಲ್ಲ ಎಂದರೆ ನಾವೇನು ಮಾಡಲಾಗುತ್ತಿದೆ ಎಂದರು.
 

Latest Videos
Follow Us:
Download App:
  • android
  • ios