ಬಾಗಲಕೋಟೆ ಜಿಲ್ಲೆಯ ವರ್ಚಗಲ್ ಗ್ರಾಮದಲ್ಲಿ ಮಳೆ ಕೊರತೆ ನೀಗಿಸಲು, ವರುಣ ದೇವನ ಕೃಪೆ ಕೋರಿ ಗೊಂಬೆಗಳ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಲಾಯಿತು. ಹಿರಿಯರು ಹಾಕಿಕೊಟ್ಟ ಈ ಸಂಪ್ರದಾಯದಂತೆ, ಗ್ರಾಮಸ್ಥರೆಲ್ಲರೂ ಸೇರಿ ಮದುವೆಯ ಎಲ್ಲಾ ಶಾಸ್ತ್ರಗಳನ್ನು ಪಾಲಿಸಿ, ಈ ವಿಶಿಷ್ಟ ವಿವಾಹವನ್ನು ನಡೆಸಿದರು.
ಬಾಗಲಕೋಟೆ: ಲೋಕಾಪುರ ಗ್ರಾಮದ ಮಹಿಳೆಯರು, ಪುರುಷರು, ಯುವಕ, ಯುವತಿಯರು ಮುದುವೆ ಗಡಿಬಿಡಿಯಲ್ಲಿದ್ದರು. ಹಾಲಗಂಬ ನೆಡುವ, ಒಳಕಲ್ಲು ಪೂಜೆ, ಬಳೆ ಉಡಿಸುವುದು, ಬೀಗರನ್ನು ಬರಮಾಡಿಕೊಳ್ಳಲು ಎದುರು ಭೇಟಿ, ಅರಿಶಿಣ ಕಾರ್ಯ, ಸುರಗಿ ಸುತ್ತುವುದು, ಬಳಿಕ ಮಾಂಗಲ್ಯ ತಂತು ನಾನೇನಾ ಮಂತ್ರ ಮೊಳಗಿ ಗ್ರಾಮಸ್ಥರೆಲ್ಲ ಅಕ್ಷತೆ ಹಾಕಿ ಹರಿಸಿದರು.

ಗೊಂಬೆಗಳ ಮದುವೆ
ಹೌದು, ಈ ಎಲ್ಲ ಮದುವೆ ಸಂಪ್ರದಾಯ ನೆರವೇರಿದ್ದು ಲೋಕಾಪುರ ಸಮೀಪದ ವರ್ಚಗಲ್ ಗ್ರಾಮದಲ್ಲಿ. ಹಾಗಂತ ಇದು ಯಾವುದೋ ಜೋಡಿಗಳ ಮದುವೆ ಆಗಿರಲಿಲ್ಲ. ವರುಣನ ಕೃಪೆಗಾಗಿ ಪ್ರಾರ್ಥಿಸಿ ಶುಕ್ರವಾರ ವರ್ಚಗಲ್ ಗ್ರಾಮದಲ್ಲಿ ನಡೆದ ಗೊಂಬೆಗಳ ಮದುವೆ. ಮಳೆ ಕೊರೆತೆಯಾದರೆ ಗುರ್ಜಿ, ಕತ್ತೆಗಳ, ಕಪ್ಪೆಗಳ ಮದುವೆ ಮಾಡುವ ಮೂಲಕ ಜನತೆ ವರುಣನಲ್ಲಿ ಬೇಡಿಕೊಳ್ಳುವ ಸಂಪ್ರದಾಯ ಈಗಲೂ ಉತ್ತರ ಕರ್ನಾಟಕ ಭಾಗದಲ್ಲಿ ಕಂಡುಬರುತ್ತದೆ. ಅದರಲ್ಲಿ ಗೊಂಬೆಗಳ ಮದುವೆಯೂ ಒಂದು.
ಓಣಿಯ ಹಿರಿಯರೆಲ್ಲ ಸೇರಿ ಗೊಂಬೆಗಳಿಗೆ ಅರಿಷಿಣ ಹಾಗೂ ಅರಿಷಿಣ ನೀರು ಹಾಕಿದರು. ಗೊಂಬೆಗಳು ಸರಿಯಾಗಿ ಕುಳಿತುಕೊಳ್ಳವುದಿಲ್ಲ ಎನ್ನುವ ಕಾರಣಕ್ಕಾಗಿ ಚಿಕ್ಕ ಮಕ್ಕಳ ಕೈಯಲ್ಲಿ ಈ ಗೊಂಬೆ ಕೊಟ್ಟು ಅವರ ಮೂಲಕವೇ ಗೊಂಬೆಗಳ ಮದುವೆ ಮಾಡಿದರು.
ಗ್ರಾಮಸ್ಥರ ನಂಬಿಕೆ
ಮಳೆ ಕೊರತೆ ಎದುರಾದ ಸಂದರ್ಭದಲ್ಲಿ ನಮ್ಮ ಹಿರಿಯರು ಗೊಂಬೆಗಳ ಮದುವೆ ಮಾಡುತ್ತಿದ್ದರು. ಇದು ದೇವರಿಗೆ ಮನವರಿಕೆಯಾಗಿ, ರೈತರ ನೆರವಿಗೆ ಧಾವಿಸುತ್ತಿದ್ದ, ಅದಕ್ಕಾಗಿ ನಾವೂ ಈ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದೇವೆ. ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ಸಾಗುತ್ತಿದ್ದೇವೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.
ಇದನ್ನೂ ಓದಿ: 4.50 ಲಕ್ಷದ ಸಾಲಕ್ಕೆ 6.14 ಎಕರೆ ಜಮೀನು ಹರಾಜು ಹಾಕಿದ ಕರ್ಣಾಟಕ ಬ್ಯಾಂಕ್? ರೈತ ಸಂಘದ ಆರೋಪ
ಮದುವೆ ಗ್ರಾಮದ ಹಿರಿಯರಾದ ಈರಣ್ಣ ಬಲ್ಕಿ, ಛಾಯಪ್ಪಗೌಡ ಪಾಟೀಲ, ಬಸು ಹೊಸಳ್ಳಿ, ಶಿವಪ್ಪ ಯಾದವಾಡ, ಸಿದ್ದು ಹೊಸಮನಿ, ಭಗವಂತಪ್ಪ ತುಳಸಿಗೇರಿ,ಮಂಜು ಬಲ್ಕಿ, ಹೊಳಬಸು ವಸ್ತ್ರದ, ಬಸಲಿಂಗಪ್ಪ ಕಟ್ಟಿ, ಪುಂಡಲೀಕ ಮುತ್ತಣ್ಣವರ, ಪ್ರಕಾಶ ತಳವಾರ, ಭಾಸ್ಕರ ಚಿಕ್ಕೂರ, ಕಿಷ್ಟಪ್ಪ ಗುಡದನ್ನವರ, ಚನ್ನಬಸಪ್ಪ ಹೊಸಳ್ಳಿ, ತಾಯಂದಿರು, ಮಕ್ಕಳು ಯುವಕ ಮಿತ್ರರು ಇದ್ದರು.
ಇದನ್ನೂ ಓದಿ: ಹಿಂಬದಿ ಚಕ್ರ ತುಂಡಾಗಿ ಪಲ್ಟಿ ಹೊಡೆದ ಮಾವು ತುಂಬಿದ ಲಾರಿ; ರಸ್ತೆಯಲ್ಲಿ ಚೆಲ್ಲಿದ ಮಾವಿನ ಹಣ್ಣು!


