ಬಾಗಲಕೋಟೆ: 3 ವರ್ಷದಿಂದ ಬಾರದ ಬಿಲ್, ಸಂಕಷ್ಟದಲ್ಲಿ ಗುತ್ತಿಗೆದಾರರು, ಸರ್ಕಾರಕ್ಕೆ ಜು. 25 ಡೆಡ್‌ಲೈನ್..!
ಉತ್ತರ ಕರ್ನಾಟಕದ 13 ಜಿಲ್ಲೆಗಳ 7000 ಕೋಟಿ ಬಿಲ್ ಪಾವತಿಯಾಗದೇ ಸಂಕಷ್ಟದಲ್ಲಿ ಗುತ್ತಿಗೆದಾರರು, ರಾಜ್ಯ ಸರ್ಕಾರಕ್ಕೆ ಹಣ ಪಾವತಿಗಾಗಿ ಜು. 25 ರ ಗಡುವು ನೀಡಿದ ಉತ್ತರ ಕರ್ನಾಟಕದ ಸಿವಿಲ್ ಗುತ್ತಿಗೆದಾರರ ಸಂಘ, ಬಾಗಲಕೋಟೆ ಜಿಲ್ಲೆಯೊಂದರಲ್ಲಿಯೇ 340 ಕೋಟಿ ರೂ. ಬಾಕಿ ಹಣ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ(ಜು.19): ಅವರೆಲ್ಲಾ ಸರ್ಕಾರ ಕೈಗೊಳ್ಳುವ ಕಾಮಗಾರಿಗಳನ್ನ ನಿರ್ವಹಣೆ ಮಾಡುವ ಗುತ್ತಿಗೆದಾರರು, ಆದ್ರೆ ಅವರಿಗೆ ಕಳೆದ ಮೂರು ವರ್ಷಗಳಿಂದ ಬಿಲ್ಗಳು ಪಾವತಿಯಾಗಿಲ್ಲ, ಹೀಗಾಗಿ ಸಾಲ ಪಡೆದ ಬ್ಯಾಂಕ್ಗಳಿಂದ ನೋಟಿಸ್ಗಳು ಬರುತ್ತಿದ್ದು, ಗುತ್ತಿಗೆದಾರರ ಕುಟುಂಬಗಳೀಗ ಸಂಕಷ್ಟ ಎದುರಿಸುವಂತಾಗಿದೆ. ಈ ನಡುವೆ ಉತ್ತರ ಕರ್ನಾಟಕದ 13 ಜಿಲ್ಲೆಗಳನ್ನೊಳಗೊಂಡ ಗುತ್ತಿಗೆದಾರರ ಸಂಘ ಬಾಕಿ ಬಿಲ್ ಪಾವತಿಗಾಗಿ ಇದೀಗ ರಾಜ್ಯ ಸರ್ಕಾರಕ್ಕೆ ಜುಲೈ 25ರ ಗಡುವು ನೀಡಿದ್ದು, ಹೋರಾಟದ ಮುನ್ಸೂಚನೆ ನೀಡಿದೆ. ಈ ಕುರಿತ ವರದಿ ಇಲ್ಲಿದೆ...
ಹೌದು, ಒಂದೆಡೆ ರಾಜ್ಯ ಸರ್ಕಾರಗಳ ವಿರುದ್ದ ನಿರಂತರ ಅಸಮಾಧಾನ ಹೊರ ಹಾಕುತ್ತಿರೋ ಗುತ್ತಿಗೆದಾರ ಸಂಘದ ಪಧಾಧಿಕಾರಿಗಳು, ಮತ್ತೊಂದೆಡೆ ಕಾಮಗಾರಿ ಬಾಕಿ ಹಣ ನೀಡದ ಅಧಿಕಾರಿಗಳ ವಿರುದ್ದ ಗರಂ ಆಗುತ್ತಿರೋ ಗುತ್ತಿಗೆದಾರರು. ಅಂದಹಾಗೆ ಇಂತಹವೊಂದು ಪರಿಸ್ಥಿತಿ ಎದುರಾಗಿರೋದು ಮುಳುಗಡೆ ನಗರಿ ಬಾಗಲಕೋಟೆಯಲ್ಲಿ. ಹೌದು, ಕಳೆದ ಮೂರು ವರ್ಷಗಳಿಂದ ಗುತ್ತಿಗೆದಾರರಿಗೆ ವಿವಿಧ ಇಲಾಖೆಗಳ ಕಾಮಗಾರಿಗಳ ನಿರ್ವಹಣೆಯ ಬಾಕಿ ಹಣ ಸರ್ಕಾರದಿಂದ ಪಾವತಿಯಾಗದೇ ಇರುವ ಹಿನ್ನೆಲೆಯಲ್ಲಿ ಗುತ್ತಿಗೆದಾರರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಉತ್ತರ ಕರ್ನಾಟಕದ ಒಟ್ಟು 13 ಜಿಲ್ಲೆಗಳ ಗುತ್ತಿಗೆದಾರರಿಗೆ 7000 ಕೋಟಿ ರೂಪಾಯಿ ಬಾಕಿ ಸರ್ಕಾರದಿಂದ ಬರಬೇಕಾಗಿದೆ. ಇನ್ನು ಬಾಗಲಕೋಟೆ ಜಿಲ್ಲೆಯಿಂದಲೇ 340 ಕೋಟಿ ರೂಪಾಯಿಗಳ ಬಾಕಿ ಹಣ ಗುತ್ತಿಗೆದಾರರಿಗೆ ಸಂದಾಯವಾಗಬೇಕಿದೆ. ಆದ್ರೆ ಇದೂವರೆಗೂ ಸಹ ಆಗ್ತಿಲ್ಲ. ಹೀಗಾಗಿ ಕಳೆದ ಮೂರು ವರ್ಷಗಳಿಂದ ಪಾವತಿಯಾಗದೇ ಹಾಗೆಯೇ ಉಳಿದಿರುವ ಗುತ್ತಿಗೆದಾರರ ಹಣವನ್ನು ಪಾವತಿ ಮಾಡುವಂತೆ ಉತ್ತರ ಕರ್ನಾಟಕ ಸಿವಿಲ್ ಕಾಂಟ್ರ್ಯಾಕ್ಟರ್ ಅಸೋಸಿಯೇಷನ್ ಒತ್ತಾಯಿಸಿದೆ.
ಹಿಂದಿನ ಬಿಜೆಪಿ ಸರ್ಕಾರ ಇದ್ದಾಗಲೂ ನಮಗೆ ಹಣ ಬಿಡುಗಡೆ ಆಗಿಲ್ಲ, ಈಗಿನ ಕಾಂಗ್ರೆಸ್ ಸರ್ಕಾರ ಬಂದಾಗಾದರೂ ನಮಗೆ ಹಣ ಸಿಗುತ್ತದೆ ಎಂಬ ನಂಬಿಕೆ ನಮಗಿತ್ತು. ಆದ್ರೆ ಕಾಂಗ್ರೆಸ್ ಸರ್ಕಾರದಿಂದಲೂ ನಮಗೆ ಹಣ ಬಂದಿಲ್ಲ. ಹೀಗಾಗಿ ನಮಗೆ ಬರಬೇಕಾದ ಉತ್ತರ ಕರ್ನಾಕದ ಒಟ್ಟು 13 ಜಿಲ್ಲೆಗಳ ಗುತ್ತಿಗೆದಾರರ ಮೊತ್ತ 7000 ಕೋಟಿ ರೂಪಾಯಿ ಹಣವನ್ನು ನೀಡಬೇಕು. ಇಲ್ಲದೇ ಇದ್ರೆ ಜುಲೈ25 ರಿಂದ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಮುಷ್ಕರ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ ಉತ್ತರ ಕರ್ನಾಟಕದ ಸಿವಿಲ್ ಗುತ್ತಿಗೆದಾರ ಸಂಘದ ಅಧ್ಯಕ್ಷ ಸುಭಾಷ ಪಾಟೀಲ್.
ಮನಿ ಭಾಗ್ಯ: ಅಕ್ಕಿ ರೊಕ್ಕಕ್ಕಾಗಿ ಬ್ಯಾಂಕ್‌ಗಳು ರಶ್..!
ಸಾಲದ ಹಿನ್ನೆಲೆಯಲ್ಲಿ ಬ್ಯಾಂಕ್ಗಳ ನೋಟಿಸ್ಗೆ ನಲುಗಿದ ಗುತ್ತಿಗೆದಾರರು...
ಇನ್ನು ಗುತ್ತಿಗೆದಾರರು ಸರ್ಕಾರದಿಂದ ಗುತ್ತಿಗೆ ಪಡೆದು ಕಾರ್ಯ ನಿರ್ವಹಣೆ ವೇಳೆ ಬ್ಯಾಂಕ್ಗಳಲ್ಲಿ ಸಾಲ ಸೋಲ ಮಾಡಿ ಗುತ್ತಿಗೆ ಕಾಮಗಾರಿ ನಡೆಸಿದ್ದರು, ಆದ್ರೆ ಇದೀಗ ಸಾಲ ತುಂಬಲಾಗದೇ ಗುತ್ತಿಗೆದಾರರಿಗೆ ಬ್ಯಾಂಕ್‌ಗಳು ನೋಟಿಸ್ ನೀಡುತ್ತಿದ್ದು, ಗುತ್ತಿಗೆದಾರರು ಆರ್ಥಿಕ ಸಂಕಷ್ಟವನ್ನ ಎದುರಿಸುವಂತಾಗಿದೆ. ಹೀಗಾಗಿ ಕೂಡಲೇ ರಾಜ್ಯ ಸರ್ಕಾರ ಗುತ್ತಿಗೆದಾರರ ಬಾಕಿ ಹಣ ನೀಡುವಂತಾಗಬೇಕು. ಅದ್ರಲ್ಲಿ ಉತ್ತರ ಕರ್ನಾಟಕ ಗುತ್ತಿಗೆದಾರರಿಗೆ ಸರ್ಕಾರ ಒಟ್ಟು 7000 ಕೋಟಿ ರೂಪಾಯಿ ಹಣ ನೀಡಬೇಕು. ಇದರಲ್ಲಿ ಬಾಗಲಕೋಟೆ ಜಿಲ್ಲೆಯ ಗುತ್ತಿಗೆದಾರರಿಗೆ 340 ಕೋಟಿ ರೂಪಾಯಿ ನೀಡಬೇಕಿದೆ. ಮೊದಲೇ ಸಾಲ ಮಾಡಿಕೊಂಡು ಗುತ್ತಿಗೆದಾರರು ಕಾಮಗಾರಿ ಮುಗಿಸಿದ್ದಾರೆ. ಆದ್ರೆ ಕಾಮಗಾರಿ ಮುಗಿದಿದ್ರೂ ಸರ್ಕಾರಗಳು ನಮಗೆ ಹಣ ನೀಡದೆ ಇರುವುದರಿಂದ ನಮಗೇನಾದರೂ ಆದ್ರೆ ಅದಕ್ಕೆ ಸರ್ಕಾರವೇ ಹೊಣೆ ಅಂತಾ ಎಚ್ಚರಿಕೆ ನೀಡಿದ್ದಾರೆ ರವೀಂದ್ರ ಮಾನೆ.
ಬಾಗಲಕೋಟೆ ಜಿಲ್ಲೆಯಲ್ಲಿಯೇ ಬರಬೇಕಿದೆ 340 ಕೋಟಿ ಬಾಕಿ ಹಣ.....
ಹೌದು, ಉತ್ತರ ಕರ್ನಾಕದ 13 ಜಿಲ್ಲೆಗಳ ಎಲ್ಲ ಕಾಮಗಾರಿಗಳ ಗುತ್ತಿಗೆದಾರರಿಗೆ ಒಟ್ಟು 7 ಸಾವಿರ ಕೋಟಿ ರೂಪಾಯಿ ಬಾಕಿ ಬರಬೇಕಿದ್ದರೆ ಅದರಲ್ಲಿ 340 ಕೋಟಿಯಷ್ಟು ಬಾಗಲಕೋಟೆ ಜಿಲ್ಲೆಯಲ್ಲಿಯೇ ಇದೆ. ಅದ್ರಲ್ಲಿ ಲೋಕೋಪಯೋಗಿ ಇಲಾಖೆಯ 220 ಕೋಟಿ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸುಮಾರು 70 ಕೋಟಿ, ಕೃಷ್ಣಾ ಮೇಲ್ದಂಡೆ ಯೋಜನೆಯ ಸುಮಾರು 15 ಕೋಟಿ ಸೇರಿದಂತೆ ಇನ್ನಿತರ ಇಲಾಖೆಗಳು ಸೇರಿ ಬಾಗಲಕೋಟೆ ಜಿಲ್ಲೆಯಲ್ಲಿಯೇ ಒಟ್ಟು 340 ಕೋಟಿ ಹಣ ಸರ್ಕಾರದಿಂದ ಬಾಕಿ ಹಣ ಗುತ್ತಿಗೆದಾರರಿಗೆ ಸಂದಾಯವಾಗಬೇಕಿದೆ ಅಂತಾರೆ ಗುತ್ತಿಗೆದಾರ ದುಂಡಪ್ಪ .
ಜುಲೈ 25ರ ಗಡುವು ನೀಡಿದ ಉತ್ತರ ಕರ್ನಾಟಕದ ಸಿವಿಲ್ ಗುತ್ತಿಗೆದಾರರ ಸಂಘ...
ಇನ್ನು ಕಳೆದ ಮೂರು ವರ್ಷಗಳಿಂದ ಬಾಕಿ ಹಣ ಬರದೇ ಕಂಗಾಲಾಗಿರೋ ಗುತ್ತಿಗೆದಾರರು ಈ ವರ್ಷ ಅಸ್ಥಿತ್ವಕ್ಕೆ ಬಂದಿರೋ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೂ ಸಹ ಬಾಕಿ ಹಣ ಸಂದಾಯ ಮಾಡುವಂತೆ ಮನವಿ ಮಾಡಿದ್ದು, ಸರ್ಕಾರಕ್ಕೆ ಗುತ್ತಿಗೆದಾರರು ಜುಲೈ 25ರ ಗಡುವು ನೀಡಿದ್ದಾರೆ. ಒಂದೊಮ್ಮೆ ಆ ಗಡುವಿನೊಳಗೆ ಹಣ ಪಾವತಿ ಮಾಡದೇ ಹೋದರೆ ಉಗ್ರ ಹೋರಾಟ ಎಚ್ಚರಿಕೆಯನ್ನ ಉತ್ತರ ಕರ್ನಾಟಕದ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ನೀಡಿದ್ದಾರೆ.
ಒಟ್ಟಿನಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಾಕಿ ಹಣ ಸಿಗದೇ ಇದ್ದ ಉತ್ತರ ಕರ್ನಾಟಕದ ಗುತ್ತಿಗೆದಾರರ ಸಂಘದ ಗುತ್ತಿಗೆದಾರರಿಗೆ ಸಧ್ಯದ ಕಾಂಗ್ರೆಸ್ ಸರ್ಕಾರದಲ್ಲೂ ಸಹ ಬಾಕಿ ಹಣ ಸಿಕ್ಕಿಲ್ಲ, ಹೀಗಾಗಿ ಸರ್ಕಾರಕ್ಕೆ ಜುಲೈ 25ರ ಗಡುವು ನೀಡಿದ್ದು, ಇದಕ್ಕೆ ಸರ್ಕಾರ ಸ್ಪಂದಿಸಿ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ ಮಾಡುತ್ತಾ ಅಂತ ಕಾದು ನೋಡಬೇಕಿದೆ.