ರಾಜ್ಯದ ವಿವಿಧ ಪ್ರದೇಶಗಳಲ್ಲಿ ದಿಢೀರ್ ಮಳೆಯಾಗಿದೆ. ಮಳೆಯಿಂದಾಗಿ ಬಿಸಿಲ ಬೇಗೆ ತಣಿದು ಭೂಮಿ ತಣ್ಣಗಾಗಿದೆ.
ಬೆಂಗಳೂರು (ಮಾ.29): ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧೆಡೆ ಭಾನುವಾರ ದಿಢೀರ್ ಮಳೆಯಾಗಿದೆ. ಬಿಸಿಲಿನ ಝಳಕ್ಕೆ ಕಂಗೆಟ್ಟಿದ್ದ ಜನತೆ ಮಳೆ ನೋಡಿ ಸಂತಸ ಪಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಹಾಗೂ ತರೀಕೆರೆ ತಾಲೂಕಲ್ಲಿ ಉತ್ತಮ ಮಳೆ ಬಂದಿದೆ. ಶೃಂಗೇರಿ ಪಟ್ಟಣ ಸೇರಿದಂತೆ ವಿವಿಧೆಡೆ ಸುಮಾರು ಅರ್ಧ ಗಂಟೆ ಕಾಲ ಗುಡುಗು ಸಹಿತ ಮಳೆಯಾಗಿದೆ.
ಎಂಟಾಣೆ ಮಳೆ, ಮಹಾನ್ ವ್ಯಕ್ತಿಯ ತಲೆದಂಡ; ಚಿಕ್ಕಯ್ಯಪ್ಪ ಕಾಲಜ್ಞಾನ ಸುಳ್ಳಾಗಿದ್ದೇ ಇಲ್ಲ!
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೆಲವಡೆ ಒಂದು ಗಂಟೆಗಳ ಕಾಲ ಉತ್ತಮ ಮಳೆಯಾಗಿದ್ದರೆ, ದಾವಣಗೆರೆಯಲ್ಲಿ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಗುಡುಗು, ಮಿಂಚು ಸಹಿತ ಮಳೆಯಾಗಿದೆ.
ಶಿವಮೊಗ್ಗ ತಾಲೂಕಿನ ಗ್ರಾಮೀಣ ಭಾಗಗಳು ಸೇರಿದಂತೆ ಹೊಸನಗರ, ತೀರ್ಥಹಳ್ಳಿ, ಸಾಗರ ಸೇರಿದಂತೆ ವಿವಿಧೆಡೆ ಅರ್ಧ ತಾಸು ಮಳೆಯಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಳೆಹೊಳೆ ವಲಯದಲ್ಲಿ ಸಾಧಾರಣ ಮಳೆಯಾಗಿದೆ. ಬಳ್ಳಾರಿ ಜಿಲ್ಲೆ ಸಂಡೂರಿನ ಕೋಡಿಹಳ್ಳಿ ಗ್ರಾಮದಲ್ಲಿ ಎರಡು ಮನೆಯ ಚಾವಣಿ ತಗಡುಗಳು ಹಾರಿಹೋಗಿದ್ದು, ಇಬ್ಬರು ಮಕ್ಕಳಿಗೆ ಚಿಕ್ಕಪುಟ್ಟಗಾಯಗಳಾಗಿವೆ.
