ಮಂಡ್ಯ(ಸೆ.29): ತಾಲೂಕಿನ ಸಾತನೂರು ಗ್ರಾಮದಲ್ಲಿ ನಿಷೇಧಾಜ್ಞೆ ನಡುವೆಯೂ ಪ್ರಾಣಿಗಳ ಬಲಿ ನೀಡಿ ವಿಜೃಂಭಣೆಯಿಂದ ಶ್ರೀ ಮಸಣಮ್ಮ ದೇವಿ ಹಬ್ಬವನ್ನು ಶನಿವಾರ ಆಚರಿಸಲಾಯಿತು. ಮಹಾಲಯ ಅಮಾವಾಸ್ಯೆ ನಿಮಿತ್ಯ ಬೆಳಗ್ಗೆ ಮಸಣಮ್ಮ ದೇವಾಲಯದಲ್ಲಿ ಸಹಸ್ರಾರು ಭಕ್ತರಿಗೆ ಪ್ರಸಾದದ ರೂಪದಲ್ಲಿ ಬೇಯಿಸಿದ ಮಾಂಸ ಮತ್ತು ಅನ್ನ ವಿತರಿಸಲಾಯಿತು.

ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಮಸಣಮ್ಮ ದೇವಿ ಜಾತ್ರೆ ವೇಳೆ ನಡೆಯುತ್ತಿದ್ದ ಪ್ರಾಣಿ ಬಲಿ ನಿಷೇಧಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದರು. ಅದರಂತೆ ಜಿಲ್ಲಾಡಳಿತ ಜಾತ್ರೆ ಸಮಯದಲ್ಲಿ ಯಾವುದೇ ಪ್ರಾಣಿ ಬಲಿ ನೀಡದಂತೆ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಇದು ಜಾತ್ರೆಯ ಮೇಲೆ ಕರಿನೆರಳು ಬೀಳುವಂತೆ ಮಾಡಿತ್ತು. ನಿಷೇಧಾಜ್ಞೆ ನಡುವೆಯೂ ಗ್ರಾಮಸ್ಥರು ಪ್ರಾಣಿಗಳನ್ನು ಬಲಿಕೊಡುವುದರೊಂದಿಗೆ ಮಸಣಮ್ಮ ದೇವಿ ಜಾತ್ರೆಯನ್ನು ಸಡಗರ-ಸಂಭ್ರಮದಿಂದಲೇ ಆಚರಿಸಿದರು.

ಶತಮಾನದಿಂದ ಆಚರಣೆ:

ಈ ದೇವಿಗೆ ಶತಮಾನದಿಂದಲೂ ಗ್ರಾಮದಲ್ಲಿ ಹೊಸ ಗುಡಿ ಮತ್ತು ಹಳೇ ಗುಡಿ ಎಂಬ ಎರಡು ಮಸಣಮ್ಮ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಹೊಸಗುಡಿಯ ದೇವಿಯನ್ನು ಹಬ್ಬದ ಹಿಂದಿನ ದಿನದ ರಾತ್ರಿ 10ರಿಂದ ಮಧ್ಯ ರಾತ್ರಿವರೆಗೆ ಮೆರವಣಿಗೆ ಮಾಡಿದರೆ, ನಂತರ ಬೆಳಗಿನ ಜಾವದವರೆಗೆ ಹಳೇಗುಡಿ ದೇವಿಯನ್ನು ಮೆರವಣಿಗೆ ನಡೆಯುವುದು ಇಲ್ಲಿನ ವಿಶೇಷ.

ಕುಮಾರಸ್ವಾಮಿ ಏನಾದ್ರೂ ಹೇಳಲಿ, ಕಾಂಗ್ರೆಸ್ ಸೇರಲ್ಲ: ಶಿವರಾಮೇಗೌಡ ಸ್ಪಷ್ಟನೆ

ಅದರಂತೆ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಸಾತನೂರಿನಲ್ಲಿ ಶುಕ್ರವಾರ ರಾತ್ರಿ ಮಸಣಮ್ಮ ದೇವತೆಯ ಕರಗ ಮಹೋತ್ಸವ ಹಾಗೂ ಶನಿವಾರ ಪಿತೃಪಕ್ಷ ಹಬ್ಬವು ವಿಜೃಂಭಣೆಯಿಂದ ನಡೆಯಿತು. ಗ್ರಾಮದ ಹಳೇಗುಡಿ ಹಾಗೂ ಹೊಸಗುಡಿ ದೇವಸ್ಥಾನಗಳಲ್ಲಿ ಮಸಣಮ್ಮನ ಹಬ್ಬವನ್ನು ಆಚರಿಸಲಾಯಿತು. ಶುಕ್ರವಾರ ರಾತ್ರಿ 9ಕ್ಕೆ ಗ್ರಾಮದ ಹೊರವಲಯದ ಕೆರೆ ಬಳಿ ಜಮಾಯಿಸಿದ ನೂರಾರು ಭಕ್ತರ ಸಮ್ಮುಖದಲ್ಲಿ ಮಸಣಮ್ಮ ದೇವಿಯ ಕರಗ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಮಾಂಸ ವಿತರಣೆಯೇ ಇಲ್ಲಿ ಪ್ರಸಾದ:

ಕರಗ ತರುವ ವೇಳೆ ದೇವಿಗೆ ಬಲಿ ನೀಡುವ ಕುರಿ-ಮೇಕೆಗಳ ಮಾಂಸದಿಂದ ಆಹಾರ ತಯಾರಿಸಿ ಭಕ್ತರಿಗೆ ಪ್ರಸಾದ ಹಂಚುವುದು ಇಲ್ಲಿನ ವಿಶೇಷ ಸಂಪ್ರದಾಯ. ದೇವರಿಗೆ ಹರಕೆ ಹೊತ್ತ ಭಕ್ತರು ಪ್ರತಿ ವರ್ಷ ಕುರಿ-ಮೇಕೆಗಳನ್ನು ಒಪ್ಪಿಸುತ್ತಾರೆ. ಮಹಾಲಯ ಅಮಾವಾಸ್ಯೆ ಹಬ್ಬದ ವೇಳೆ ಅವುಗಳನ್ನು ಬಲಿ ನೀಡಿ, ಆ ಮಾಂಸವನ್ನು ದೇವಾಲಯಕ್ಕೆ ಬರುವ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ.

ಮಂಡ್ಯ: 'ರೇವಣ್ಣ ದೇವೇಗೌಡರ ಮಗ ಎಂದು ಸುಮ್ನಿದ್ದೀನಿ’..!