ಕೊರೋನಾ ಕಾಟಕ್ಕೆ ಸುಸ್ತಾದ ಜನ: ನಾನ್‌ ಕೋವಿಡ್‌ ರೋಗಿಗಳ ಸಮಸ್ಯೆ ಕೇಳೋರ‍್ಯಾರು..?

ಕೋವಿಡ್‌ ರೋಗಿಗಳ ಉಪಚಾರದ ಬೆನ್ನುಬಿದ್ದ ಜಿಲ್ಲಾಡಳಿತ: ನಾನ್‌ ಕೋವಿಡ್‌ ರೋಗಿಗಳದ್ದು ಅರಣ್ಯ ರೋದನ| ಜಿಲ್ಲಾಡಳಿತ ಕೋವಿಡ್‌, ನಾನ್‌ ಕೋವಿಡ್‌ ಚಿಕಿತ್ಸೆ ವಿಚಾರದಲ್ಲಿ ಸ್ಪಷ್ಟ ನೀತಿಗಳೊಂದಿಗೆ ಇನ್ನೂ ಹೊರಬರದ ಜಿಲ್ಲಾಡಳಿತ| ನಾನ್‌ ಕೋವಿಡ್‌ ರೋಗಿಗಳ ಉಪಚಾರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಜಾಲ ರಚಿಸುವಲ್ಲಿ ತೋರದ ಮುತುವರ್ಜಿಯಿಂದಲೂ ಸಮಸ್ಯೆ ಹೆಚ್ಚಳ|

Non Covid Patients Faces Problems During Coronavirus in Kalaburagi District

ಶೇಷಮೂರ್ತಿ ಅವಧಾನಿ

ಕಲಬುರಗಿ(ಮೇ.16): ಕೋವಿಡ್‌ ರೋಗಿಗಳ ಉಪಚಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಜಿಲ್ಲಾಡಳಿತದ ನೀತಿಯಿಂದಾಗಿ ಜಿಲ್ಲೆಯ ‘ನಾನ್‌ ಕೋವಿಡ್‌’ ರೋಗಿಗಳು, ತುರ್ತು ವೈದ್ಯಕೀಯ ಸೇವೆಗೆ ಅಗತ್ಯವಿರುವವರು ಒಂದಿಲ್ಲೊಂದು ರೂಪದಲ್ಲಿ ತೊಂದರೆಗೊಳಗಾಗಿ ಪರದಾಡುವಂತಾಗಿದೆ.

ಸಕಾಲಕ್ಕೆ ಚಿಕಿತ್ಸೆ ದೊರಕದೆ ಚಿಂಚೋಳಿಯ ಗೃಹಿಣಿ, ಚಿತ್ತಾಪುರ ಹಾವು ಕಡಿತದ ಬಾಲಕಿ ಸಾವಿನ ಪ್ರಕರಣಗಳು ಇಲ್ಲಿನ ನಾನ್‌ ಕೋವಿಡ್‌ ರೋಗಿಗಳ ದುರವಸ್ಥೆಗೆ ಕನ್ನಡಿ ಹಿಡಿದಿದ್ದರೂ ಇನ್ನೂ ಜಿಲ್ಲಾಡಳಿತ ಕೋವಿಡ್‌, ನಾನ್‌ ಕೋವಿಡ್‌ ಚಿಕಿತ್ಸೆ ವಿಚಾರದಲ್ಲಿ ಸ್ಪಷ್ಟ ನೀತಿಗಳೊಂದಿಗೆ ಇನ್ನೂ ಹೊರಬಂದಿಲ್ಲ. ನಾನ್‌ ಕೋವಿಡ್‌ ರೋಗಿಗಳ ಉಪಚಾರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಜಾಲ ರಚಿಸುವಲ್ಲಿ ತೋರದ ಮುತುವರ್ಜಿಯಿಂದಲೂ ಸಮಸ್ಯೆ ಹೆಚ್ಚುತ್ತಿದೆ.

'ನಮ್ಮನ್ನ ಬಿಟ್ಬಿಡಿ, ಕ್ವಾರಂಟೈನ್‌ ಮಾಡಿದ್ರೆ ಆತ್ಮಹತ್ಯೆ ಮಾಡ್ಕೊಳ್ತೇವೆ'

ನಾನ್‌ ಕೋವಿಡ್‌ ಮರೆತರು:

ಕೋವಿಡ್‌ ಸೋಂಕಿತರು, ಶಂಕಿತರು, ಕ್ವಾರಂಟೈನ್‌, ವಲಸೆ ಕಾರ್ಮಿಕರ ಆಗಮನ... ಎಂದು ಜಿಲ್ಲಾಡಳಿತ ಇವರ ಬೆನ್ನ ಬಿದ್ದಿರುವುದರಿಂದ ಕೊರೋನಾ ಹೊರತು ಪಡಿಸಿ ಕಾಡುವ ವ್ಯಾಧಿ ಪೀಡಿತ ‘ನಾನ್‌ ಕೋವಿಡ್‌’ ರೋಗಿಗಳ ಪಾಲಿಗೆ ಸರ್ಕಾರಿ, ಖಾಸಗಿ ವ್ಯವಸ್ಥೆಗಳೆರಡೂ ಇಲ್ಲದಂತಾಗಿವೆ. ಇದರಿಂದಾಗಿ ಸಕ್ಕರೆ ರೋಗ, ಕ್ಯಾನ್ಸರ್‌ ಪತ್ತೆ, ಪೀಡಿತರಿಗೆ ಚಿಕಿತ್ಸೆ, ಹೃದ್ರೋಗ, ಹೆರಿಗೆ ತೊಂದರೆಗಳು, ಸಂಕೀರ್ಣ ಹೆರಿಗೆ, ಹಾವು ಕಚ್ಚಿದ ಸಾವು ನೋವು, ಮಕ್ಕಳ ಸಂಬಂಧಿ ಕಾಯಿಲೆಗಳು, ಅಪಘಾತದಂತಹ ತೊಂದರೆಗಳಿಂದ ಬಳಲುತ್ತಿರುವವರಿಗೆ ಚಿಕಿತ್ಸೆ, ಆಂಬ್ಯುಲನ್ಸ್‌ ಸೇವೆ ಸಿಗುತ್ತಿಲ್ಲ.

ಆಂಬ್ಯುಲನ್ಸ್‌ನವರ ಮೀನಾಮೇಷ:

ನಾನ್‌ ಕೋವಿಡ್‌ ಯಾವುದೇ ತುರ್ತು ಪ್ರಕರಣ ಬಂದರೂ ಮೈಪೂರಾ ಎಣ್ಣೆ ಸವರಿಕೊಂಡವರಂತೆ ವರ್ತಿಸುತ್ತಿದ್ದರೂ ಜಿಲ್ಲಾಡಳಿತ ಇಂತಹ ಪ್ರಕರಣಗಳಲ್ಲಿ ಮುಂದೆನಿಂತು ನಾನ್‌ ಕೋವಿಡ್‌ ರೋಗಿಗಳ ಚಿಕಿತ್ಸೆಯಲ್ಲಿ ಆಗುತ್ತಿರುವ ಲೋಪಗಳನ್ನು ಸರಿಪಡಿಸುವಲ್ಲಿಯೂ ಮಿನಾಮೇಷ ಎಣಿಸುತ್ತಿದೆ. ನಾನ್‌ ಕೋವಿಡ್‌ ಅನಾರೋಗ್ಯ, ಏಕಾಏಕಿ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಗೆ ಆಸ್ಪತ್ರೆಗೆ ದಾಖಲಿಸಲು ಆಂಬ್ಯುಲನ್ಸ್‌ ಬೇಕೆಂದರೂ ಸಿಗದಂತಾಗಿದೆ.

ಕಲಬುರಗಿ ನಾನ್‌ ಕೋವಿಡ್‌ ರೋಗಿಗಳ ಗೋಳು ಹೆಚ್ಚುತ್ತಿದೆ, ಪ್ರತ್ಯೇಕ ಹೆಲ್ಪ್‌ಲೈನ್‌ ಇಲ್ಲ, ಆಂಬ್ಯುಲೆನ್ಸ್‌ ಸೇವೆ ದೊರಕುತ್ತಿಲ್ಲ, ಜಿಲ್ಲಾಸ್ಪತ್ರೆ ಕೋವಿಡ್‌ ಎಂದು ಘೋಷಿಸಿರುವಾಗ ಅದ್ಯಾಕೆ ತಾಲೂಕು ಆಸ್ಪತ್ರೆಯವರು ಜಿಮ್ಸ್‌ಗೆ ರೋಗಿಗಳನ್ನು ಶಿಫಾರಸು ಮಾಡುತ್ತಿದ್ದಾರೋ? ನಿರ್ಧಿಷ್ಟಆಸ್ಪತ್ರೆಗೆ ಹೋಗಲು ಗೊತ್ತಿಲ್ಲದೆ ರೋಗಿಗಳ ಪರದಾಟ ಹೆಚ್ಚುತ್ತಿದೆ ಎಂದು ಕಲಬುರಗಿಯ ಕಾಂಗ್ರೆಸ್‌ ಕೋವಿಡ್‌ ಟಾಸ್ಕ್‌ ಫೋರ್ಸ್‌ ಅಧ್ಯಕ್ಷ ಡಾ.ಕಿರಣ ದೇಶಮುಖ ಅವರು ಹೇಳಿದ್ದಾರೆ. 

ಹಳ್ಳಿಗಳಲ್ಲೂ ಆಂಬ್ಯುಲೆನ್ಸ್‌ ಸಿಗದೆ, ತಮ್ಮ ರೋಗಗಳಿಗೆ ಇಲಾಜ್‌ ಎಲ್ಲಿ ಮಾಡಿಸಿಕೊಳ್ಳಬೇಕು ಎಂಬುದನ್ನು ಅರಿಯದೆ ಅನೇಕರು ತೊಂದರೆ ಎದುರಿಸುತ್ತಿದ್ದಾರೆ. ಜಿಲ್ಲಾಡಳಿತ ಕೋವಿಡ್‌, ನಾನ್‌ ಕೋವಿಡ್‌ ಪ್ರತ್ಯೇಕಿಸಿ ಎಲ್ಲಾ ಆರೋಗ್ಯ ಸೇವೆಗೆ ಮುಂದಾಗಬೇಕು. ಜಿಲ್ಲಾಡಳಿತ ಈ ದೋಷ ಸರಿಪಡಿಸದೆ ಹೋದಲ್ಲಿ ನಾನ್‌ ಕೋವಿಡ್‌ ಕೇಸ್‌ಗಳ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತದೆ ಎಂದು ಕಲಬುರಗಿಯ ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಶರತ ಬಿ ಅವರು, ಜಿಲ್ಲೆಯಲ್ಲಿ ನಾನ್‌ ಕೋವಿಡ್‌ ರೋಗಿಗಳಿಗೆ ಸಕಾಲಕ್ಕೆ ಆಸ್ಪತ್ರೆ ಪ್ರವೇಶ ದೊರಕದೆ ಹೋದಲ್ಲಿ, ಚಿಕಿತ್ಸೆಗೆ ಯಾರೂ ಸ್ಪಂದಿಸದೆ ಹೋದಲ್ಲಿ, ಆಂಬ್ಯುಲೆನ್ಸ್‌ ಸೇವೆ ಲಭ್ಯವಾಗದಿದ್ದಲ್ಲಿ ತಕ್ಷಣ ಪೊಲೀಸ್‌ ಸಹಾಯ ವಾಣಿ 100 ಅಥವಾ ನಗರ ಪೊಲೀಸ್‌ ಸಹಾಯವಾಣಿ 9480803500ಗೆ ಸಂಪರ್ಕಿಸಲಿ. ಈ ಸಮಸ್ಯೆ ಪರಿಹಾರಕ್ಕೆ ನಿರಂತರ ಯತ್ನಿಸಲಾಗುತ್ತಿದೆ. ಖಾಸಗಿ ವೈದ್ಯರ ಸಹಕಾರ ನಮಗೆ ಈ ಹಂತದಲ್ಲಿ ಹೆಚ್ಚು ಬೇಕು ಎಂದು ಕೋರಿದ್ದೇವೆ ಎಂದು ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios