ಶಿವಮೊಗ್ಗ(ಜು.18): ಪಾಲಿಕೆ ಸದಸ್ಯರೂ ಆಗಿದ್ದ ಆರ್‌ಟಿಒ ಮಧ್ಯವರ್ತಿಯೊಬ್ಬರು ಆರ್‌ಟಿಒ ಅವರಿಗೆ ಚಪ್ಪಲಿ ತೋರಿಸಿದ್ದಾರೆ ಎಂಬ ಪ್ರಕರಣದಿಂದಾಗಿ ರಾಜ್ಯದ ಗಮನ ಸೆಳೆದಿದ್ದ ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲೀಗ ಆರ್‌ಟಿಒ ಇಲ್ಲದೆ ಅತಂತ್ರ ಸ್ಥಿತಿ ಎದುರಾಗಿದೆ. ಗಲಾಟೆಯ ಹಿನ್ನೆಲೆಯಲ್ಲಿ ಈ ಸ್ಥಾನ ವಹಿಸಿಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಇಲ್ಲಿರುವುದು ಪ್ರಾದೇಶಿಕ ಸಾರಿಗೆ ಕಚೇರಿಯಾಗಿರುವುದರಿಂದ ಜಂಟಿ ಸಾರಿಗೆ ಆಯುಕ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಜಂಟಿ ಸಾರಿಗೆ ಆಯುಕ್ತರೇ ತಮ್ಮ ಹುದ್ದೆಗಿಂತ ಕೆಳಗಿನ ಹುದ್ದೆಯಾದ ಆರ್‌ಟಿಒ ಹುದ್ದೆಯನ್ನು ಕೂಡ ಪ್ರಭಾರಿಯಾಗಿ ನಿರ್ವಹಿಸುತ್ತಿದ್ದರು. ಆರ್‌ಟಿಒ ಆಗಿ ಅಧಿಕಾರ ಸ್ವೀಕರಿಸಿದ ಶ್ರೀನಿವಾಸ್‌ ಅವರ ಅವಧಿಯಲ್ಲಿ ಚಪ್ಪಲಿ ತೋರಿಸಿದ ಪ್ರಕರಣ ನಡೆದು ಪೊಲೀಸ್‌ ದೂರು, ಪ್ರತಿ ದೂರು, ನಾಪತ್ತೆ ಇತ್ಯಾದಿ ಪ್ರಕರಣ ನಡೆದಿತ್ತು. ಘಟನೆ ನಡೆದ ಕೆಲವೇ ದಿನಗಳಲ್ಲಿ ಶ್ರೀನಿವಾಸಯ್ಯ ವರ್ಗಾವಣೆಗೊಂಡರು. ಪುನಃ ಈ ಸ್ಥಾನವನ್ನು ಶಿವರಾಜ್‌ ಪಾಟೀಲ್‌ ಪ್ರಭಾರಿಯಾಗಿ ನಿರ್ವಹಿಸಿದರು. ಆದರೆ ಶಿವರಾಜ್‌ಪಾಟೀಲ್‌ ವರ್ಗಾವಣೆಗೊಂಡ ಬಳಿಕ ಆರ್‌ಟಿಒ ಹುದ್ದೆ ಖಾಲಿಯಿದ್ದು, ಇದರಿಂದಾಗಿ ಜನ ಸಾಮಾನ್ಯರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.

ಯಾರಿಗೂ ಬೇಡ ಈ ಹುದ್ದೆ !

ಸಾರಿಗೆ ಇಲಾಖೆಯಲ್ಲಿ ಲಾಭದಾಯಕ ಹುದ್ದೆ ಎನಿಸಿರುವ ಆರ್‌ಟಿಒ ಹುದ್ದೆ ಎಂದರೆ ಝಣ ಝಣ ಹಣ ಎಣಿಸುವ ಹುದ್ದೆ ಎಂಬ ಭಾವನೆ ಇದೆ. ಹೀಗಾಗಿ ಈ ಹುದ್ದೆಯ ಮೇಲೆ ಹಲವರ ಕಣ್ಣಿರುತ್ತದೆ. ಈ ಜಾಗಕ್ಕೆ ದೊಡ್ಡ ಪೈಪೋಟಿಯೇ ನಡೆಯುತ್ತದೆ. ಆದರೆ ಶಿವಮೊಗ್ಗ ಆರ್‌ಟಿಒ ಕಚೇರಿ ಮಾತ್ರ ಇದಕ್ಕೆ ಅಪವಾದ ಎನ್ನುವಂತಿದೆ. ಮೋಟಾರ್‌ ವೆಹಿಕಲ್‌ ಇನ್‌ಸ್ಪೆಕ್ಟರ್‌ ಸೇರಿದಂತೆ ಅನೇಕ ಹುದ್ದೆಗಳು ತೆರವಾಗಿದ್ದು, ಇದರಿಂದಾಗಿ ಇಲ್ಲಿರುವ ಸಿಬ್ಬಂದಿ ಮೇಲೆ ವಿಪರೀತ ಒತ್ತಡ ಬೀಳುತ್ತಿದೆ. ಆದರೆ ಸರ್ಕಾರ ಮಾತ್ರ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಇದರ ಪರಿಣಾಮವನ್ನು ಸಾರ್ವಜನಿಕರು ಅನುಭವಿಸುತ್ತಿದ್ದಾರೆ.

ಹೀಗಿದೆ ಕಚೇರಿ ಸ್ಥಿತಿ:

ಮುಖ್ಯವಾಗಿ ಕಚೇರಿಯಲ್ಲಿ ಪೂರ್ಣಾವಧಿ ಆರ್‌ಟಿಒ ಇಲ್ಲ. ಏಕಕಾಲಕ್ಕೆ ಶಿವಮೊಗ್ಗ ಅರ್‌ಟಿಒ ಹಾಗೂ ಜಂಟಿ ಸಾರಿಗೆ ಆಯುಕ್ತ ಹುದ್ದೆಯನ್ನು ನಿಭಾಯಿಸಿದ್ದ ಶಿವರಾಜ್‌ ಪಾಟೀಲ್‌ ವರ್ಗಾವಣೆಗೊಂಡ ನಂತರ ಬಂದಿರುವ ಮಹಿಳಾ ಜಂಟಿ ಸಾರಿಗೆ ಆಯುಕ್ತರು ಆರ್‌ಟಿಒ ಹುದ್ದೆ ನಿರ್ವಹಿಸಲು ನಿರಾಕರಿಸಿದ್ದಾರೆ. ಇದರ ಪರಿಣಾಮ ಕಚೇರಿ ಅಧೀಕ್ಷಕರೇ ಪ್ರಭಾರ ಆರ್‌ಟಿಒ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಹಾಯಕ ಆರ್‌ಟಿಒದಿಂದ ಹಿಡಿದು ‘ಡಿ’ ಗ್ರೂಪ್‌ ತನಕದ ಹುದ್ದೆಗಳಲ್ಲಿ ಬಹಳಷ್ಟುಖಾಲಿ ಇದ್ದು ಮಂಜೂರಾದ ಹುದ್ದೆಗೂ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸ ಇದೆ. ಕೇಂದ್ರ ಸ್ಥಾನಿಕ ಸಹಾಯಕ ಮತ್ತು ರಾತ್ರಿ ಕಾವಲುಗಾರ ಹುದ್ದೆಯೂ ಖಾಲಿ ಇವೆ.

ಬೆಂಗಳೂರಲ್ಲಿ ಗೂಡ್ಸ್ ವಾಹನಗಳ ಜಪ್ತಿ ! RTO ಎಚ್ಚರಿಕೆ

3 ಜನ ಅಧೀಕ್ಷಕರು ಇರಬೇಕಾದ ಕಡೆ ಇಬ್ಬರು ಬೇರೆಡೆಗೆ ನಿಯೋಜನೆಗೊಂಡಿದ್ದು ಒಬ್ಬರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಲೆಕ್ಕ ಅಧೀಕ್ಷಕರು ಒಬ್ಬರಿದ್ದಾರೆ. 10 ಜನ ಎಫ್‌ಡಿಸಿ ಇರಬೇಕಾದೆಡೆ 8 ಜನ ಇದ್ದು ಅದರಲ್ಲಿ 3 ಜನರು ನಿಯೋಜನೆ ಮೇರೆಗೆ ಬೇರೆಡೆಗೆ ತೆರಳಿದ್ದಾರೆ. 9 ಜನ ಎಸ್‌ಡಿಸಿ ಇರಬೇಕಾದೆಡೆ ಕೇವಲ 3 ಜನರಿದ್ದು ಇವರಲ್ಲಿ ಇಬ್ಬರು ಬೇರೆ ಕಡೆ ನಿಯೋಜನೆಗೊಂಡಿದ್ದಾರೆ. ಟೈಪಿಸ್ಟ್‌ ಹುದ್ದೆಯೂ ಖಾಲಿಯಿದೆ. ಇನ್ನು ಸಾರಿಗೆ ಕಚೇರಿಗೆ ಬಹುಮುಖ್ಯವಾಗಿ ಬೇಕಾಗಿರುವ ಇನ್‌ಸ್ಪೆಕ್ಟರ್‌ಗಳೂ ಅಗತ್ಯ ಸಂಖ್ಯೆಯಲ್ಲಿಲ್ಲ. 5 ಜನ ಇನ್‌ಸ್ಪೆಕ್ಟರ್‌ಗಳು ಇರಬೇಕಾದ ಕಡೆ ಒಬ್ಬರೇ ಇದ್ದು ನಾಲ್ಕು ಹುದ್ದೆ ಖಾಲಿ ಇವೆ. 3 ಜನ ಚಾಲಕರ ಪೈಕಿ ಇಬ್ಬರು ಕೆಲಸ ಮಾಡುತ್ತಿದ್ದಾರೆ. ಇನ್ನು ಕಚೇರಿ ವ್ಯವಸ್ಥೆಯಲ್ಲಿ ಮುಖ್ಯ ಪಾತ್ರ ವಹಿಸುವ ಗ್ರೂಪ್‌ ‘ಡಿ’ ನೌಕರರ ಕೊರತೆಯೂ ಇಲಾಖೆಯನ್ನು ಬಾಧಿಸುತ್ತಿದೆ. 7 ಜನ ಗ್ರೂಪ್‌ ‘ಡಿ’ ನೌಕರಿರಬೇಕಾದೆಡೆ 4 ಜನರಷ್ಟೇ ಇದ್ದು ಇವರಲ್ಲಿ ಇಬ್ಬರು ನಿಯೋಜನೆ ಮೇರೆಗೆ ಬೇರೆ ಕಡೆ ಕೆಲಸ ಮಾಡುತ್ತಿದ್ದಾರೆ.

ಗೋಪಾಲ್‌ ಯಡಗೆರೆ