ಬೆಂಗಳೂರು [ಜು.04] :  ನಗರದಲ್ಲಿ ಅಕ್ರಮವಾಗಿ ಜನರನ್ನು ಸಾಗಿಸುತ್ತಿದ್ದ 125 ಗೂಡ್ಸ್ ವಾಹನಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಹೈಕೋರ್ಟ್ ನಿರ್ದೇಶನದ ಮೇರೆಗೆ ನಗರದಾದ್ಯಂತ ವಿಶೇಷ ಕಾರ್ಯಾರಣೆ ಕೈಗೊಂಡಿದ್ದ ಸಾರಿಗೆ ಇಲಾಖೆ ಅಧಿಕಾರಿಗಳು, ಸುಮಾರು 16 ಸಾವಿರ ವಾಹನಗಳನ್ನು ತಪಾಸಣೆಗೆ ಒಳಪಡಿಸಿದ್ದಾರೆ. 

ಈ ಪೈಕಿ ನಿಯಮ ಉಲ್ಲಂಘಿಸಿದ 558 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ, 12 ಲಕ್ಷ ದಂಡ ವಸೂಲಿ ಮಾಡಿದ್ದಾರೆ. ಅಲ್ಲದೆ, 158  ವಾಹನಗಳ ರಹದಾರಿ ಹಾಗೂ 113 ವಾಹನಗಳ ನೋಂದಣಿ ಪತ್ರ ಅಮಾನತ್ತು ಗೊಳಿಸಿದ್ದಾರೆ. ಇದೇ ರೀತಿ ಆಟೋರಿಕ್ಷಾ, ಮ್ಯಾಕ್ಸಿಕ್ಯಾಬ್, ಮಾರುತಿ ವ್ಯಾನ್ ಸೇರಿದಂತೆ ಇತರೆ ವಾಹನಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳ ವಿರುದ್ಧವೂ ಕಾರ್ಯಾಚರಣೆ ಕೈಗೊಂಡಿದ್ದು, ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ 668 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

60 ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಿ, 11 ಲಕ್ಷ ರು. ವಸೂಲಿ ಮಾಡಿದ್ದಾರೆ. ಪದೇ ಪದೇ ನಿಯಮ ಉಲ್ಲಂಘಿಸಿದರೆ ಆರ್‌ಸಿ ರದ್ದುಗೊಳಿಸಲು ಚಿಂತಿಸಲಾಗಿದೆ ಎಂದು ಜಂಟಿ ಸಾರಿಗೆ ಆಯುಕ್ತ ಜೆ.ಜ್ಞಾನೇಂದ್ರ ಕುಮಾರ್ ತಿಳಿಸಿದರು.