ಸವದತ್ತಿ(ಏ.10):  ಅಚ್ಚೇ ದಿನ ಆಯೇಗಾ ಎಂದು ಹೇಳಿ ಪ್ರತಿಯೊಂದು ದಿನಬಳಕೆ ವಸ್ತುಗಳ ಬೆಲೆಯನ್ನು ಏರಿಸುವುದರ ಜೊತೆಗೆ ಜನರನ್ನು ಶೋಷಣೆ ಮಾಡುತ್ತಿದ್ದಾರೆ. ರಸಗೊಬ್ಬರಗಳ ಬೆಲೆಯನ್ನು ಗಗನಕ್ಕೆ ಏರಿಸಿ ರೈತರ ಬದುಕಿಗೆ ಸಂಕಷ್ಟ ತಂದಿಟ್ಟಿರುವ ಸರ್ಕಾರ ನಮಗೆ ಬೇಕಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬೆಳಗಾವಿ ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಸತೀಶ್‌ ಜಾರಕಿಹೊಳಿ ಪರ ಬೃಹತ್‌ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದು 7 ವರ್ಷ ಪೂರ್ತಿಯಾಗುತ್ತಾ ಬಂದಿದೆ. ಭರವಸೆಗಳ ಸರಮಾಲೆಯೊಂದಿಗೆ ನರೇಂದ್ರ ಮೋದಿಯವರು ಸುಳ್ಳಿನ ಪ್ರಧಾನಿಯಾಗಿ ಹೊರ ಹೊಮ್ಮಿದ್ದಾರೆ ಎಂದು ದೂರಿದರು.

ಶಾಸಕ ಯತ್ನಾಳ್‌ ಹೈಕಮಾಂಡ್ ಬಿಜೆಪಿ ಬಿಗ್ ಶಾಕ್: ಪಕ್ಷದಿಂದ ಗೇಟ್ ಪಾಸ್ ಫಿಕ್ಸ್!

ಸುಳ್ಳಿನ ಪರವಾಗಿ ಮಾತನಾಡುವವರಿಗೆ ನೋಬೆಲ್‌ ಪ್ರಶಸ್ತಿ ನೀಡುವುದಾದರೇ ಅದನ್ನು ನರೇಂದ್ರ ಮೋದಿಯವರಿಗೆ ನೀಡಬೇಕಾಗುತ್ತದೆ. ಮೋದಿಯವರು ವಿದೇಶದಿಂದ ಕಪ್ಪು ಹಣವನ್ನು ದೇಶಕ್ಕೆ ಮರಳಿ ತಂದು ಜನರ ಖಾತೆಗೆ ಹಾಕುತ್ತೇನೆ ಎಂದು ಹೇಳಿದ ಅವರು ಇಲ್ಲಿಯವರಿಗೆ ಒಂದು ಪೈಸೆ ಹಾಕಿಲ್ಲ. ದೇಶದಲ್ಲಿ ಕೋಟ್ಯಂತರ ಯುವಕರಿಗೆ ಉದ್ಯೋಗ ಕೊಡಿಸುತ್ತೇನೆ ಎಂದು ಹೇಳಿ, ಇದ್ದ ಉದ್ಯೋಗವನ್ನು ಕಸಿದುಕೊಂಡಿದ್ದಾರೆ ಎಂದು ದೂರಿದರು.

ಯಡಿಯೂರಪ್ಪನವರಿಗೆ ಆಡಳಿತ ನಡೆಸಲು ಮುಂಬಾಗಿಲಿನಿಂದ ಬಂದ ಉದಾಹರಣೆಗಳೇ ಇಲ್ಲ. ಹಿಂಬಾಗಿಲಿನಿಂದ ಬಂದೇ ರಾಜಕೀಯ ಮಾಡುತ್ತಿದ್ದಾರೆ. ಲೂಟಿ ಹೊಡೆದ ಹಣದಿಂದ ಆಪರೇಶನ್‌ ಕಮಲ ಮಾಡಿ ಸರ್ಕಾರ ಗಿಟ್ಟಿಸಿಕೊಂಡಿದ್ದಾರೆ ಎಂದು ದೂರಿದರು.