ಬೆಂಗಳೂರು [ಮಾ.13]:  ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ರಾಜಧಾನಿ ಕುಖ್ಯಾತಿ ಪಡೆಯಲು ಕಾರಣವಾಗಿದ್ದ ಟ್ರಾಫಿಕ್‌ ಸಮಸ್ಯೆಗೆ ಕೊರೋನಾ ವೈರಸ್‌ ಮದ್ದು ನೀಡಿದೆ...!!

ಈ ಸುದ್ದಿ ಓದಿ ಅಚ್ಚರಿ ಆಗಬಹುದು. ಆದರೆ ಸತ್ಯ ಸಂಗತಿಯಾಗಿದೆ. ಟ್ರಾಫಿಕ್‌ ಸಮಸ್ಯೆಗೆ ಸರ್ಕಾರ ಹಾಗೂ ಪೊಲೀಸರು ಯತ್ನಿಸಿದರೂ ಸಿಗದ ಪರಿಹಾರವು ಇಂದು ವಿಶ್ವವನ್ನೇ ನಡುಗಿಸಿರುವ ಕೊರೋನಾ ಸೋಂಕು ನೀಡಿದೆ.

ಸೋಂಕು ಭೀತಿ ಪರಿಣಾಮ ಬೆಂಗಳೂರು ವ್ಯಾಪ್ತಿಯಲ್ಲಿ ಜನರ ಓಡಾಟ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ಇದರಿಂದ ರಸ್ತೆಗಳು ವಾಹನ ಸಂಚಾರವು ಸುಗಮವಾಗಿದ್ದು, ಬಿರು ಬೇಸಿಗೆಯಲ್ಲಿ ತಾಸುಗಟ್ಟಲೇ ಟ್ರಾಫಿಕ್‌ನಲ್ಲಿ ಸಿಲುಕುವ ತಾಪತ್ರಯವು ಜನರಿಗೆ ಇಲ್ಲದಂತಾಗಿದೆ. ಇತ್ತ ಸುಗಮ ಸಂಚಾರಕ್ಕೆ ಶ್ರಮಿಸಬೇಕಾದ ಟ್ರಾಫಿಕ್‌ ಪೊಲೀಸರು ಕೂಡಾ ನಿರಾಳರಾಗಿದ್ದಾರೆ.

ಮನೆಯಿಂದ ಹೊರ ಬರುತ್ತಿಲ್ಲ ಜನರು:

ಕೆಲವು ದಿನಗಳಿಂದ ಕೊರೋನಾ ಸೋಂಕು ಆತಂಕ ವಿಶ್ವ ವ್ಯಾಪ್ತಿ ತಲ್ಲಣಿಸಿದ್ದು, ಅದರಿಂದ ಬೆಂಗಳೂರು ಸಹ ಹೊರತಾಗಿಲ್ಲ. ಬೆಂಗಳೂರಿನಲ್ಲಿ ಶಂಕಿತರು ಪತ್ತೆಯಾದ ಮಾಹಿತಿ ಕಾಡ್ಗಿಚ್ಚಿನಂತೆ ಹರಿದಾಡುತ್ತಿದ್ದಂತೆ ಜನರಲ್ಲಿ ಭೀತಿ ಮತ್ತಷ್ಟುಹೆಚ್ಚಾಯಿತು. ಈ ಸೋಂಕು ಹಿನ್ನೆಲೆಯಲ್ಲಿ ಸರ್ಕಾರವು, ಶಾಲೆಗಳಿಗೆ ರಜೆ ಘೋಷಿಸಿತು. ಹಾಗೆ ಉದ್ಯೋಗಿಗಳ ವಿದೇಶ ಪ್ರಯಾಣಕ್ಕೆ ನಿರ್ಬಂಧವಿಸುವಂತೆ ಐಟಿ-ಬಿಟಿ ಕಂಪನಿಗಳಿಗೆ ಸರ್ಕಾರ ಸೂಚಿಸಿತು. ಹೀಗೆ ಕೊರೋನಾ ಆಂತಕ ಹೆಚ್ಚಾದಂತೆ ಜನರ ಓಡಾಟವು ಕಡ ಕಡಿಮೆಯಾಗಿದೆ.

ಕೈ, ಬಾಯಿಗೆ ಬ್ರಾಂದಿ ಹಾಕ್ಕೊಂಡ್ರೆ ಕೊರೋನಾ ಸಾಯುತ್ತಾ’...

ಐಟಿ-ಬಿಟಿ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮನೆಯಿಂದಲೇ (ವರ್ಕ್ ಫ್ರಮ್‌ ಹೋಂ) ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ವೈಟ್‌ಫೀಲ್ಡ್‌, ಎಲೆಕ್ಟ್ರಾನಿಕ್‌ ಸಿಟಿ, ಎಚ್‌ಎಎಲ್‌, ಬೆಳ್ಳಂದೂರು, ಹೆಬ್ಬಾಳ, ಮಹದೇವಪುರ, ಮಡಿವಾಳ, ಎಚ್‌ಎಸ್‌ಆರ್‌ ಲೇಔಟ್‌ ಹಾಗೂ ಎಂ.ಜಿ.ರಸ್ತೆ ಸೇರಿದಂತೆ ಐಟಿ-ಬಿಟಿ ಕಂಪನಿಗಳಿರುವ ಪ್ರದೇಶಗಳ ಕಡೆ ವಾಹನ ಸಂಚಾರ ಕಡಿಮೆಯಾಗಿದೆ. ಅದೇ ರೀತಿ ಶಾಲಾಗಳಿಗೆ ರಜೆ ನೀಡಿದ ಪರಿಣಾಮ ಶಾಲಾ ವಾಹನಗಳು ಹಾಗೂ ಶಾಲೆಗಳಿಗೆ ಮಕ್ಕಳನ್ನು ಬಿಡಲು ಬರುವ ಪೋಷಕರು ವಾಹನಗಳು ರಸ್ತೆಗಿಳಿಯುತ್ತಿಲ್ಲ. 

ಮೈಸೂರು, ತುಮಕೂರು, ಬಳ್ಳಾರಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಕನಕಪುರ ರಸ್ತೆಗಳು ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಕೂಡಾ ವಾಹನಗಳ ಸಂಖ್ಯೆ ಕ್ಷೀಣಿಸಿದೆ. ಅಲ್ಲದೆ, ಪ್ರಯಾಣಿಕರಿಲ್ಲದೆ ಆಟೋ ಹಾಗೂ ಕ್ಯಾಬ್‌ಗಳ ಭಣಗುಡುತ್ತಿವೆ. ಇದರಿಂದ ಬೆಳಗ್ಗೆ 8 ರಿಂದ 10 ಹಾಗೂ ಸಂಜೆ 4 ರಿಂದ 7 ಗಂಟವರೆಗೆ ಫೀಕ್‌ ಆವರ್‌ನಲ್ಲಿ ಸಹ ಮೊದಲಿನಂತೆ ಸಂಚಾರ ದಟ್ಟಣೆ ಉಂಟಾಗುತ್ತಿಲ್ಲ ಎಂದು ಸಂಚಾರ ವಿಭಾಗದ ಪೊಲೀಸರೇ ಹೇಳುತ್ತಾರೆ.