ಕೊರೋನಾ ಎಫೆಕ್ಟ್: ಭಣಗುಡುತ್ತಿದೆ ನಂದಿಗಿರಿಧಾಮ
- ನಂದಿಗಿರಿಧಾಮ ಈಗ ಕೊರೋನಾ ಪರಿಣಾಮದಿಂದಾಗಿ ಪ್ರವಾಸಿಗರಲ್ಲದೇ ಕಳೆದೊಂದು ತಿಂಗಳಿಂದ ಬೀಕೋ ಎನ್ನುತ್ತಿದೆ.
- ಸಮುದ್ರ ಮಟ್ಟದಿಂದ 4,300 ಕ್ಕೂ ಅಡಿಗಳಷ್ಟುಎತ್ತರದಲ್ಲಿರುವ ತನ್ನೊಳಗೆ ಪ್ರಾಕೃತಿಕ ಸೌಂದರ್ಯವನ್ನು ಒಳಗೊಂಡಿರುವ ನಂದಿಗಿರಿಧಾಮ
- ಕೊರೋನಾ ಸೃಷ್ಠಿಸಿರುವ ಆತಂಕ, ತಲ್ಲಣ ಈಗ ನಂದಿಗಿರಿಧಾಮವನ್ನು ಸ್ಮಶಾನ ಮೌನವಾಗಿಸಿದೆ.
ಚಿಕ್ಕಬಳ್ಳಾಪುರ (ಮೇ.23): ಸದಾ ಪ್ರವಾಸಿಗರಿಂದ್ದ ಕಿಕ್ಕಿರಿದು ತುಂಬಿ ಗಿಜಿಗುಡುತ್ತಿದ್ದ ಜಿಲ್ಲೆಯ ವಿಶ್ವ ವಿಖ್ಯಾತ ನಂದಿಗಿರಿಧಾಮ ಈಗ ಕೊರೋನಾ ಪರಿಣಾಮದಿಂದಾಗಿ ಪ್ರವಾಸಿಗರಲ್ಲದೇ ಕಳೆದೊಂದು ತಿಂಗಳಿಂದ ಬೀಕೋ ಎನ್ನುತ್ತಿದೆ.
ಸಮುದ್ರ ಮಟ್ಟದಿಂದ ಬರೋಬ್ಬರಿ 4,300 ಕ್ಕೂ ಅಡಿಗಳಷ್ಟುಎತ್ತರದಲ್ಲಿರುವ ತನ್ನೊಳಗೆ ಪ್ರಾಕೃತಿಕ ಸೌಂದರ್ಯವನ್ನು ಒಳಗೊಂಡಿರುವ ನಂದಿಗಿರಿಧಾಮ ಜಗತ್ ಪ್ರಸಿದ್ದವಾಗಿದೆ. ಪ್ರತಿ ಶನಿವಾರ, ಭಾನುವಾರ ವೀಕೆಂಡ್‌ನಲ್ಲಿ ಪ್ರವಾಹದಂತೆ ಗಿರಿಧಾಮಕ್ಕೆ ಪ್ರವಾಸಿಗರು ಬಂದು ಹೋಗುತ್ತಾರೆ. ಆದರೆ ಕೊರೋನಾ ಸೃಷ್ಠಿಸಿರುವ ಆತಂಕ, ತಲ್ಲಣ ಈಗ ನಂದಿಗಿರಿಧಾಮವನ್ನು ಸ್ಮಶಾನ ಮೌನವಾಗಿಸಿದೆ.
ಪ್ರವಾಸಿಗರ ಅಚ್ಚುಮೆಚ್ಚಿನ ತಾಣ
ಬೆಂಗಳೂರಿಗೆ ಕೇವಲ ಕೂಗಳತೆಯ ದೂರದಲ್ಲಿರುವ ನಂದಿಗಿರಿಧಾಮ ಯುವ ಪ್ರೇಮಿಗಳು ಅದರಲ್ಲೂ ಪರಿಸರ ಪ್ರೇಮಿಗಳ ಹಾಗೂ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಗಿರಿಧಾಮದಲ್ಲಿರುವ ನೆಹರು ನಿಲಯ, ಗಾಂಧಿ ನಿಲಯ, ಟಿಪ್ಪು ಡ್ರಾಪ್, ಶ್ರೀ ಯೋಗ ನರಸಿಂಹಸ್ವಾಮಿ ದೇವಾಲಯದ ಸೇರಿದಂತೆ ಐತಿಹಾಸಿಕ ಪುಷ್ಕರಣಿ ಮತ್ತಿತರ ಸ್ಥಳಗಳು ಪ್ರವಾಸಿಗರ ಆಕರ್ಷಣಿಯವಾದ ಸ್ಥಳಗಳಾಗಿವೆ.
ಆದರೆ ಕೊರೋನಾ ಲಾಕ್‌ಡೌನ್ ಪರಿಣಾಮ ಸರ್ಕಾರ ಘೊಷಿಸಿರುವ ಸೆಮಿ ಲಾಕ್‌ಡೌನ್ ಮೊದಲೇ ಜಿಲ್ಲಾಡಳಿತದ ನಿರ್ದೇಶನದ ಮೇಲೆ ಗಿರಿಧಾಮಕ್ಕೆ ಪ್ರವಾಸಿಗರ ಮೇಲೆ ನಿರ್ಬಂಧ ಹೇರಿದ್ದು ಸರಿಯಾಗಿ ಒಂದು ತಿಂಗಳಾಗುತ್ತಿದೆ. ಪ್ರತಿ ಶನಿವಾರ, ಭಾನುವಾರ ಬೆಂಗಳೂರು ಸೇರಿದಂತೆ ಹೊರ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಹೋಗುತ್ತಿದ್ದರು. ಆದರೆ ಕೊರೋನಾ ಸೃಷ್ಟಿಸಿರುವ ತಲ್ಲಣಗಳಿಂದ ಮುನ್ನೆಚ್ಚರಿಕೆ ಕ್ರಮವಾಗಿ ಗಿರಿಧಾಮವನ್ನು ತಾತ್ಕಾಲಿಕಾವಾಗಿ ಬಂದ್ ಮಾಡಲಾಗಿದೆ.
ನಂದಿ ಬೆಟ್ಟಕ್ಕೆ ಹೊಸ ವ್ಯವಸ್ಥೆ : ಪ್ರವಾಸಿಗರೇ ಗಮನಿಸಿ .
ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಗಿರಿಧಾಮಕ್ಕೆ ಬಂದು ದೈಹಿಕ ಅಂತರ ಕಾಯ್ದುಕೊಳ್ಳದೇ ಕೊರೋನಾ ಸೋಂಕು ಹರಡುವಿಕೆಗೆ ಕಾರಣವಾಗುತ್ತದೆಯೆಂಬ ಉದ್ದೇಶದಿಂದ ಜಿಲ್ಲಾಡಳಿತ ನಂದಿಗಿರಿಧಾಮ ಪ್ರವೇಶ ಬಂದ್‌ಗೊಳಿಸಿದ್ದು ಇದರ ಪರಿಣಾಮ ಈಗ ಇಡೀ ಗಿರಿಧಾಮ ಪ್ರವಾಸಿಗರಲ್ಲದೇ ಬೀಕೋ ಎನ್ನುತ್ತಿದೆ. ಇದರಿಂದ ಗಿರಿಧಾಮಕ್ಕೆ ಪ್ರತಿ ತಿಂಗಳು ಹರಿದು ಬರುತ್ತಿದ್ದ 30 ರಿಂದ 35 ಲಕ್ಷ ರು.ಗಳ ಆದಾಯಕ್ಕೂ ಕತ್ತರಿ ಬಿದಿದೆ. ಗಿರಿಧಾಮದಲ್ಲಿನ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಪಾರ್ಕಿಂಗ್ ಸ್ಥಳಗಳಲ್ಲಿ ಯಾರೂ ಇಲ್ಲದೇ ಭಣಗುಡುತ್ತಿವೆ. ಗಿರಿಧಾಮದೊಳಗೆ ಈಗ ಪ್ರಾಣಿ ಪಕ್ಷಿಗಳ ಕಲರವ ಅಷ್ಟೇ ಕೇಳು ಬರುತ್ತಿವೆ.
ಕಂಗೊಳಿಸುತ್ತಿರುವ ಗಿರಿಧಾಮ
ಇತ್ತೀಚೆಗೆ ಜಿಲ್ಲೆಯಲ್ಲಿ ಚಂಡ ಮಾರುತದ ಪ್ರಭಾವದಿಂದ ಒಂದರೆಡು ದಿನ ಉತ್ತಮ ಮಳೆಯಾಗಿರುವ ಕಾರಣ ನಂದಿಗಿರಿಧಾಮದ ಪ್ರಕೃತಿಯ ಸೌಂದರ್ಯಕ್ಕೆ ವಿಶೇಷ ಮೆರಗು ತಂದಿದೆ. ಬೇಸಿಗೆಯಿಂದ ಒಂದಿಷ್ಟುಕಳೆಗುಂದಿದ್ದ ಗಿರಿಧಾಮಕ್ಕೆ ಮಳೆ ವಿಶೇಷ ಕಳೆ ತಂದಿದ್ದು ಇಡೀ ಗಿರಿಧಾಮ ಹಚ್ಚ ಹರಿಸಿನಿಂದ ಕಂಗೊಳಿಸುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಗಿರಿಧಾಮದ ಸೌಂದರ್ಯವನ್ನು ಸವಿಯಬೇಕಿದ್ದ ಪ್ರವಾಸಿಗರಿಗೆ ಕೊರೋನಾ ಬ್ರೇಕ್ ಹಾಕಿದೆ.
ಕೊರೋನಾ ಎರಡನೇ ಅಲೆ ಶುರುವಾದ ಬಳಿಕ ನಂದಿಗಿರಿಧಾಮವನ್ನು ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧಿಸಿ ತಿಂಗಳಾಗಿದೆ. ಸರಾಸರಿ ತಿಂಗಳಿಗೆ 30 ರಿಂದ 35 ಲಕ್ಷದಷ್ಟುಆದಾಯ ಬರುತ್ತಿತ್ತು. ಗಿರಿಧಾಮದ ಪರಿಸರದಲ್ಲಿ ಸಾಕಷ್ಟುಬದಲಾವಣೆ ಆಗಿದೆ. ಗಿರಿಧಾಮದಲ್ಲಿರುವ ಪ್ರಾಣಿ, ಪಕ್ಷಿಗಳಿಗೆ ಕೆಲ ಸಮಾಜ ಸೇವಕರು ವಾರಕ್ಕೆ ಆಗುವಷ್ಟುಹಣ್ಣು ಹಂಪಲು ತಂದು ಕೊಡುವುದರಿಂದ ಪ್ರಾಣಿ ಪಕ್ಷಿಗಳಿಗೆ ಆಹಾರದ ಸಮಸ್ಯೆ ಇಲ್ಲ.
ಗೋಪಾಲ್, ನಂದಿಗಿರಿಧಾಮ ವಿಶೇಷ ಅಧಿಕಾರಿ