ಮಡಿಕೇರಿ(ಜ.08): ಪುಟ್ಟಜಿಲ್ಲೆ ಕೊಡಗಿನಲ್ಲಿದ್ದ ಒಂದೇ ಒಂದು ರೈಲು ಕಾವೇರಿ ಎಕ್ಸ್‌ಪ್ರೆಸ್‌ ಸ್ಥಗಿತಗೊಂಡು ವರ್ಷ ಕಳೆದರೂ ಹೊಸ ರೈಲು ಮಾತ್ರ ಇನ್ನೂ ಬಂದಿಲ್ಲ. ಹೊಸ ರೈಲು ಖರೀದಿಗೆ ರು.3.61 ಕೋಟಿ ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಆದರೆ ಹಣದ ಕೊರತೆಯಿಂದಾಗಿ ಹೊಸ ರೈಲು ಖರೀದಿ ಮಾಡಲು ಸಾಧ್ಯವಾಗಿಲ್ಲ.

ಜಿಲ್ಲೆಯ ಪ್ರವಾಸಿ ತಾಣ ರಾಜಾಸೀಟಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಸಂಚರಿಸುತ್ತಿದ್ದ ಪುಟಾಣಿ ರೈಲು ‘ಕಾವೇರಿ ಎಕ್ಸ್‌ಪ್ರೆಸ್‌’ ಸಂಚಾರಕ್ಕೆ ಯೋಗ್ಯವಲ್ಲ ಎಂದು ಮೈಸೂರು ರೇಲ್ವೆ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ 2018ರ ಜನವರಿಯಲ್ಲಿ ಕಾವೇರಿ ಎಕ್ಸ್‌ಪ್ರೆಸ್‌ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಪ್ರವಾಸಿಗರೇ ಹುಷಾರ್, ಕಾವೇರಿ ತೀರದಲ್ಲಿ ಕಸ ಎಸೆದ್ರೆ ದಂಡ ಕಟ್ಬೇಕು..!

ಮಳೆಯ ಸಂದರ್ಭ ರಾಜಾಸೀಟಿನಲ್ಲಿರುವ ಪುಟಾಣಿ ರೈಲು ತುಕ್ಕು ಹಿಡಿದಿತ್ತು. ಅಲ್ಲದೆ ರೇಲ್ವೆ ಟ್ರ್ಯಾಕ್‌ಗೂ ಹಾನಿಯಾಗಿತ್ತು. ಈ ಹಿನ್ನೆಲೆ ಕಳೆದ ಹಲವು ತಿಂಗಳಿಂದ ಪುಟಾಣಿ ರೈಲು ಸಂಚರಿಸದೆ ಯಾರ್ಡ್‌ ಸೇರಿತ್ತು. ರೈಲು ಸಂಚರಿಸದ ಹಿನ್ನೆಲೆಯಲ್ಲಿ ಹಳಿ ಕೂಡ ಗಿಡಗಂಟಿಗಳು ಆವರಿಸಿಕೊಂಡಿತ್ತು. ಪುಟಾಣಿ ರೈಲನ್ನು ಪರಿಶೀಲಿಸಿದ್ದ ರೇಲ್ವೆ ಇಲಾಖಾಧಿಕಾರಿಗಳು ರೈಲು ಸಂಚಾರಕ್ಕೆ ಯೋಗ್ಯವಲ್ಲದಕ್ಕೆ ಹಲವಾರು ಕಾರಣ ನೀಡಿದ್ದರು.

ಹೊಸ ರೈಲು ಖರೀದಿಗೆ ಸಲಹೆ:

ರೈಲಿನ ಚಕ್ರದ ಕೆಲ ಭಾಗದಲ್ಲಿ ಸ್ಟ್ರಿಂಗ್‌ಗಳು ಹಳೆಯದಾಗಿವೆ. ಅವನ್ನು ಬದಲಾಯಿಸಬೇಕು. ಗೇರ್‌ ಕೂಡ ಹಾಳಾಗಿದೆ. ಹತ್ತಾರು ಬಾರಿ ವೆಲ್ಡ್‌ ಮಾಡಲಾಗಿದೆ. ರೈಲಿನ ಹೊರ ಭಾಗ ತುಕ್ಕು ಹಿಡಿದಿದ್ದು, ದುರ್ಬಲವಾಗಿದೆ. ರೈಲು ಸಂಚರಿಸುವ ಹಳಿ ಹಾಳಾಗಿದೆ. ಹಳಿಯ ಕೆಲಭಾಗದಲ್ಲಿ ಹಾಕಲಾಗಿರುವ ಮರ ಗೆದ್ದಿಲು ಹಿಡಿದಿದೆ. ಈ ಹಿನ್ನೆಲೆ ರೈಲು ಸಂಚರಿಸಲು ಯೋಗ್ಯವಲ್ಲ. ಹೊಸದನ್ನು ಖರೀದಿಸಬಹುದೆಂದು ಅಧಿಕಾರಿಗಳು ಸಲಹೆ ನೀಡಿದ್ದಾರು.

ರೈಲು ಸಂಚಾರಕ್ಕೆ ಯೋಗ್ಯವಲ್ಲ ಎಂದು ಅಧಿಕಾರಿಗಳು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮಡಿಕೇರಿ ನಗರಸಭೆಯೂ ರೈಲು ಸಂಚಾರಕ್ಕೆ ಕಳೆದ ಒಂದು ವರ್ಷದಿಂದ ಅವಕಾಶ ನೀಡುತ್ತಿಲ್ಲ.

ಕ್ರಿಯಾ ಯೋಜನೆ ಸಿದ್ಧ:

ರಾಜಾಸೀಟಿನಲ್ಲಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ಪುಟಾಣಿ ರೈಲು ಖರೀದಿಗೆ ಚಿಂತನೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ರು.3.61 ಕೋಟಿ ವೆಚ್ಚದ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಮಡಿಕೇರಿ ನಗರಸಭೆ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಹಣ ಬಿಡುಗಡೆಯಾದರೆ ಮಾತ್ರ ಮಡಿಕೇರಿಯ ರಾಜಾಸೀಟಿನಲ್ಲಿ ಮತ್ತೆ ಪುಟಾಣಿ ರೈಲಿನ ಕಲರವ ಕೇಳಿಸಲಿದೆ.

ಪ್ರವಾಸಿಗರಿಗೆ ನಿರಾಶೆ: ವರ್ಷದಿಂದ ಪುಟಾಣಿ ರೈಲು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ರಾಜಾಸೀಟಿಗೆ ಭೇಟಿ ನೀಡುವ ಪ್ರವಾಸಿಗರು ಉದ್ಯಾನವನವನ್ನು ಮಾತ್ರ ವೀಕ್ಷಿಸುವಂತಾಗಿದ್ದು, ರೈಲಿನ ಸ್ಥಗಿತಗೊಂಡಿರುವ ಬಗ್ಗೆ ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ.

ಕ್ರಿಯಾ ಯೋಜನೆ

ಸುಮಾರು 25ಕ್ಕೂ ಹೆಚ್ಚು ವರ್ಷಗಳಿಂದ ಸಂಚರಿಸಿರುವ ಪುಟಾಣಿ ರೈಲು ಕಾವೇರಿ ಎಕ್ಸ್‌ಪ್ರೆಸ್‌ ಇದೀಗ ಕಳೆದೊಂದು ವರ್ಷದಿಂದ ಗೂಡು ಸೇರಿಕೊಂಡಿದೆ. ಈ ಹಿಂದೆ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಹೊಸ ರೈಲು ಖರೀದಿಸುವುದು ಉತ್ತಮ ಎಂದು ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹೊಸ ರೈಲು ಖರೀದಿಸಲು ಮಡಿಕೇರಿ ನಗರಸಭೆಯಿಂದ ಚಿಂತನೆ ಕೂಡ ನಡೆಸಲಾಗಿತ್ತು. ಹೊಸ ಪುಟಾಣಿ ರೈಲಿಗೆ ಅಂದಾಜು ಪಟ್ಟಿಯನ್ನು ಸಲ್ಲಿಸುವಂತೆ ಮನವಿ ಮಾಡಲಾಗಿತ್ತು. ಅದರಂತೆ ಹೊಸ ಪುಟಾಣಿ ರೈಲಿಗೆ ರು.3.61 ಕೋಟಿ ವೆಚ್ಚವಾಗಲಿದೆ ಎಂದು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿತ್ತು.

ರಾಜಾಸೀಟಿನಲ್ಲಿ ಹೊಸ ಪುಟಾಣಿ ರೈಲು ಖರೀದಿಗೆ ರು.3.61 ಕೋಟಿಯ ವೆಚ್ಚವಾಗಲಿದೆ ಎಂದು ಖಾಸಗಿ ಸಂಸ್ಥೆಯೊಂದು ಕ್ರಿಯಾ ಯೋಜನೆ ಸಿದ್ಧಪಡಿಸಿ ನೀಡಿತ್ತು. ಅದರಂತೆ ಈ ಕ್ರಿಯಾ ಯೋಜನೆ ಮೈಸೂರಿನ ರೈಲ್ವೇ ಇಲಾಖೆಗೆ ಸಲ್ಲಿಸಲಾಗಿತ್ತು. ಅವರು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಮಾಹಿತಿ ನೀಡಲಿದ್ದಾರೆ. ರೈಲು ಖರೀದಿಗೆ ನಗರಸಭೆಯ ಬಳಿ ಹಣ ಇಲ್ಲ ಎಂದು ಮಡಿಕೇರಿ ನಗರಸಭೆ ಎಂಜಿನಿಯರ್‌ ನಾಗರಾಜು ಹೇಳಿದ್ದಾರೆ.

ನೇತ್ರಾವತಿಗೆ ಹಾರಿ ಆತ್ಮಹತ್ಯೆಗೆ ಯತ್ನ: ಒಂದೇ ದಿನ 2 ಬಾರಿ ರಕ್ಷಣೆ

ಪುಟಾಣಿ ರೈಲು ಖರೀದಿ ಸಂಬಂಧ ಈಗಾಗಲೇ ರೈಲ್ವೇ ಇಲಾಖೆಗೆ ಕ್ರಿಯಾ ಯೋಜನೆಯನ್ನು ನೀಡಲಾಗಿದೆ. ಹೊಸ ರೈಲು ಖರೀದಿಗೆ ಪ್ರವಾಸೋದ್ಯಮ ಇಲಾಖೆಯಿಂದಲೂ ಹಣ ಬಿಡುಗಡೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಹೇಳಿದ್ದಾರೆ.

ರೈಲು ಖರೀದಿ ಸಂಬಂಧ ನಗರಸಭೆ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಹಣ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಪ್ರವಾಸೋದ್ಯಮ ಇಲಾಖೆಯಿಂದ ಎಷ್ಟುಹಣ ಲಭ್ಯವಾಗಲಿದೆ ಎನ್ನುವ ಬಗ್ಗೆ ಮುಂದಿನ 15 ದಿನದ ಒಳಗಾಗಿ ತಿಳಿದು ಬರಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಹೇಳಿದ್ದಾರೆ.

- ವಿಘ್ನೇಶ್‌ ಎಂ. ಭೂತನಕಾಡು