ಶಿವಮೊಗ್ಗ(ಮೇ.27): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮೇ 19ರಿಂದ ಪುನರಾರಂಭವಾಗಿದ್ದು, ಜನದಟ್ಟಣೆ ಗನುಗುಣವಾಗಿ ಕಾರ್ಯಾಚರಣೆ ಮಾಡಲು ಉದ್ದೇಶಿಸಲಾಗಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್‌ ಪ್ರಯಾಣದ ದರಗಳಲ್ಲಿ ಯಾವುದೇ ಹೆಚ್ಚಳವಿರುವುದಿಲ್ಲ. ಹಗಲು ವೇಳೆಯಲ್ಲಿ ಬೆಳಗ್ಗೆ 7 ರಿಂದ ಆರಂಭಿಸಿ ಸಂಜೆ 7 ಗಂಟೆಯೊಳಗೆ ನಿಗ​ತ ಸ್ಥಳ ತಲುಪುವಂತೆ ಸಮಯ ನಿಗದಿಗೊಳಿಸಲಾಗಿದೆ.

ಬಸ್‌ಗಳು ಶಿವಮೊಗ್ಗ ದಿಂದ ಬೆಂಗಳೂರಿಗೆ ಪ್ರಯಾಣದ ಅವ​ಧಿ 7 ಗಂಟೆಗಳಾಗಿದ್ದು, ಬೆ. 7 ರಿಂದ 12 ಗಂಟೆಯವರೆಗೆ ನಿರ್ಗಮಿಸುತ್ತವೆ. ಮೈಸೂರಿಗೆ ಪ್ರಯಾಣದ ಅವ​ಧಿ 6 ಗಂಟೆಗಳಾಗಿದ್ದು, ಬೆಳಗ್ಗೆ 7 ರಿಂದ ಮ. 1 ಗಂಟೆಯವರೆಗೆ ನಿರ್ಗಮಿಸುತ್ತವೆ. ಅರಸೀಕರೆ, ಚಿಕ್ಕಮಗಳೂರು, ಚಿತ್ರದುರ್ಗ, ಶಿಕಾರಿಪುರ ಮತ್ತು ಸೊರಬ ಕಡೆಗೆ 2.15 ಗಂಟೆ ಪ್ರಯಾಣದ ಅವ​ಧಿಯಾಗಿದ್ದು, ಸಂಜೆ 4.30ರವರೆಗೆ ನಿರ್ಗಮಿಸುತ್ತವೆ. ಹರಿಹರ, ಸಾಗರ, ತೀರ್ಥಹಳ್ಳಿ ಮತ್ತು ಹೊಸನಗರಗಳಿಗೆ ಪ್ರಯಾಣದ ಅವ​ಧಿ 1.30 ಗಂಟೆಗಳಾಗಿದ್ದು, ಸಂಜೆ 5.30ವರೆಗೆ ನಿರ್ಗಮಿಸುತ್ತವೆ. ಹುಬ್ಬಳ್ಳಿಗೆ ಪ್ರಯಾಣದ ಅವ​ಧಿ 4.30 ಗಂಟೆಗಳಾಗಿದ್ದು, ಮಧ್ಯಾಹ್ನ 2.30ರವರೆಗೆ ನಿರ್ಗಮಿಸುತ್ತವೆ.

ಇಂದಿನಿಂದ ಇತಿಹಾಸ ಪ್ರಸಿದ್ಧ ಸಾಗರ ಗಣಪತಿ ಕೆರೆ ಸರ್ವೆ

ಕಂಟೈನ್‌ಮೆಂಟ್‌ ಝೋನ್‌ಗಳಿಗೆ ಯಾವುದೇ ಬಸ್‌ಗಳಿರುವುದಿಲ್ಲ. ಮುಖಕ್ಕೆ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಒಂದು ಬಸ್ಸಿನಲ್ಲಿ ಗರಿಷ್ಠ 30 ಜನ ಪ್ರಯಾಣಕರಿಗೆ ಮಾತ್ರ ಅವಕಾಶವಿದೆ ಬಸ್‌ ನಿಲ್ದಾಣದಲ್ಲಿ ಮಾತ್ರ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗುವುದು. ಅಂತಾರಾಜ್ಯ ಸಾರಿಗೆ ಹಾಗೂ ಹವಾನಿಯಂತ್ರಿತ ಬಸ್‌ ಇರುವುದಿಲ್ಲ. ಭಾನುವಾರಗಳಂದು ಬಸ್‌ ಸೇವೆ ರದ್ದುಪಡಿಸಲಾಗುತ್ತದೆ. ಬಸ್‌ ನಿಲ್ದಾಣದಲ್ಲಿ ಕಡ್ಡಾಯವಾಗಿ ಪ್ರಯಾಣಿಕರು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಬೇಕು. ವೆಬ್‌ಸೈಟ್‌ ಮುಖಾಂತರವೂ ಮುಂಗಡ ಆಸನಗಳನ್ನು ಕಾಯ್ದಿರಿಸಬಹುದಾಗಿದೆ. ಆದಷ್ಟುಕಡಿಮೆ ಲಗೇಜು, ಗುರುತಿನ ಚೀಟಿ ತರುವುದು ಕಡ್ಡಾಯ. ಮಾರ್ಗಮಧ್ಯೆ ಯಾವುದೇ ನಿಲುಗಡೆಯಿರುವುದಿಲ್ಲ. ಪ್ರಯಾಣಿಕರ ಹಿತದೃಷ್ಟಿಯಿಂದ ಈ ಎಲ್ಲಾ ಮಾರ್ಗಸೂಚಿಗಳು ಕಡ್ಡಾಯವಾಗಿದ್ದು, ಪ್ರಯಾಣಿಕರು ಸಿಬ್ಬಂದಿಗಳೊಡನೆ ಸಹಕರಿಸುವಂತೆ ವಿಭಾಗೀಯ ನಿಯಂತ್ರಣಾ​ಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.