ಬೆಂಗಳೂರು(ಫೆ.25): ಕೇರಳದಿಂದ ರಾಜ್ಯ ಪ್ರವೇಶಿಸುವವರು 72 ಗಂಟೆಯೊಳಗಿನ ಕೋವಿಡ್‌ ನೆಗೆಟಿವ್‌ ವರದಿ ಹೊಂದಿರಬೇಕು ಎಂದು ಸರ್ಕಾರ ಆದೇಶ ಹೊರಡಿಸಿದ್ದರೂ ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಉತ್ಸಾಹ ತೋರುತ್ತಿಲ್ಲ. ಕೇರಳದ ಬಸ್‌ ಏರಿ ಬೆಂಗಳೂರಿಗೆ ರಾತ್ರಿಯ ಹೊತ್ತು ಆಗಮಿಸುವ ಪ್ರಯಾಣಿಕರ ಕೋವಿಡ್‌ ವರದಿಯನ್ನು ಪರಿಶೀಲಿಸುವ ಯಾವುದೇ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಮಾಡಿಕೊಂಡಿಲ್ಲ.

ಕೇರಳದಿಂದ ಆಗಮಿಸುವವರ ಕೋವಿಡ್‌ ವರದಿಯನ್ನು ಅಂತಾರಾಜ್ಯ ಗಡಿಯಲ್ಲಿನ ಚೆಕ್‌ ಪೋಸ್ಟ್‌ನಲ್ಲಿಯೇ ಪರಿಶೀಲಿಸಲಾಗುತ್ತಿದೆ. ಆದ್ದರಿಂದ ಮತ್ತೆ ಬೆಂಗಳೂರಿನಲ್ಲಿ ಪರೀಕ್ಷಿಸುವ ವ್ಯವಸ್ಥೆ ಮಾಡಿಲ್ಲ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸುತ್ತಾರೆ.

ಬೆಂಗಳೂರು: ಅಪಾರ್ಟ್‌ಮೆಂಟಲ್ಲಿ 20 ಜನಕ್ಕೆ ಸೋಂಕು, ಆತಂಕದಲ್ಲಿ ಜನತೆ..!

ರಾಜ್ಯ ಸರ್ಕಾರದ ಆದೇಶದ ಪ್ರಕಾರ ಕೋವಿಡ್‌ ನೆಗೆಟಿವ್‌ ವರದಿಯನ್ನು ಪರೀಕ್ಷಿಸುವುದು ಕಂಡಕ್ಟರ್‌ಗಳ ಜವಾಬ್ದಾರಿಯಾಗಿದೆ. ಕೇರಳದಿಂದ ಬಂದವರ ಬಗ್ಗೆ ಮಾಹಿತಿ ಕಲೆ ಹಾಕಿ ಅವರ ರಿಪೋರ್ಟ್‌ ಪರಿಶೀಲಿಸುವ ಹೊಣೆಯನ್ನು ವಸತಿ ಸಮುಚ್ಚಯಗಳ ಅಸೋಸಿಯೇಷನ್‌ ಮತ್ತು ಅವರು ಉದ್ಯೋಗ ಮಾಡುತ್ತಿರುವ ಸಂಸ್ಥೆಗಳ ಮುಖ್ಯಸ್ಥರಿಗೆ ನೀಡಲಾಗಿದೆ. ಆದ್ದರಿಂದ ನಾವು ಬಸ್‌ ನಿಲ್ದಾಣದಲ್ಲಿ ಕೇರಳದ ಪ್ರಯಾಣಿಕರನ್ನು ಪರಿಶೀಲನೆ ಮಾಡುತ್ತಿಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಹೇಳುತ್ತಾರೆ.

ರಾಜ್ಯ ರಾಜಧಾನಿ ಬೆಂಗಳೂರಿಗೆ ಕೇರಳದಿಂದ ಸಾಕಷ್ಟು ಬಸ್‌ಗಳು ರಾತ್ರಿಯ ಹೊತ್ತು ಬರುತ್ತಿವೆ. ರಾತ್ರಿ ಒಂದು ಗಂಟೆಯಿಂದಲೇ ಕೇರಳದಿಂದ ಬೆಂಗಳೂರಿಗೆ ಬಸ್‌ಗಳು ಬರಲು ಪ್ರಾರಂಭಿಸುತ್ತವೆ. ಮಧ್ಯರಾತ್ರಿ ಒಂದು ಗಂಟೆಯಿಂದ ಬೆಳಗ್ಗೆ ಆರು ಗಂಟೆಯವರೆಗೆ ಸ್ಯಾಟಲೈಟ್‌ ಬಸ್‌ ನಿಲ್ದಾಣಕ್ಕೆ ಕೇರಳದಿಂದ ಏಳು ಬಸ್‌ಗಳು ಬಂದಿದ್ದವು. ಬೆಳಗ್ಗೆ ಆರರಿಂದ ಆರೋಗ್ಯ ಇಲಾಖೆಯು ಟೆಸ್ಟ್‌ ಕ್ಯಾಂಪ್‌ ಶುರು ಮಾಡಿಕೊಂಡಿತು.