ಬೆಂಗಳೂರು: ಅಪಾರ್ಟ್‌ಮೆಂಟಲ್ಲಿ 20 ಜನಕ್ಕೆ ಸೋಂಕು, ಆತಂಕದಲ್ಲಿ ಜನತೆ..!
ಬೆಳ್ಳಂದೂರು ವಾರ್ಡ್‌ನ ಎಸ್‌ಜೆಆರ್ ವಾಟರ್‌ಮಾರ್ಕ್ ವಸತಿ ಸಮುಚ್ಚಯದಲ್ಲಿ ಮತ್ತೆ 10 ಮಂದಿಗೆ ಸೋಂಕು ದೃಢ| ಕೊರೋನಾ ಬಗ್ಗೆ ನಿವಾಸಿಗಳ ನಿರ್ಲಕ್ಷ್ಯ| ಅಪಾರ್ಟ್‌ಮೆಂಟಲ್ಲಿ ಬೇಕಾಬಿಟ್ಟಿ ಓಡಾಟ| ಕಂಟೈನ್ಮೆಂಟ್ ಬೋರ್ಡ್: ಬಿಬಿಎಂಪಿ|
ಬೆಂಗಳೂರು(ಫೆ.24): ನಗರದ ಬೆಳ್ಳಂದೂರು ವಾರ್ಡ್‌ನ ಅಂಬಾಲಿಪುರ ಎಸ್‌ಜೆಆರ್ ವಾಟರ್‌ಮಾರ್ಕ್ ವಸತಿ ಸಮುಚ್ಚಯದಲ್ಲಿ ಮತ್ತೆ ಹೊಸದಾಗಿ ಹತ್ತು ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಮಂಗಳವಾರ ಸೋಂಕು ಪರೀಕ್ಷೆಗೆ ಒಳಗಾದ 544 ಮಂದಿಯ ವರದಿ ಬರಬೇಕಾಗಿರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ವಸತಿ ಸಮುಚ್ಚಯದಲ್ಲಿ ಫೆ.15ರಿಂದ ಫೆ.22ರವರೆಗೆ ಹತ್ತು ಮಂದಿಗೆ ಕೊರೋನಾ ಸೋಂಕು ಕಾಣಿಸಿದ ಹಿನ್ನೆಲೆಯಲ್ಲಿ ಸೋಮವಾರ ಅಪಾರ್ಟ್‌ಮೆಂಟನ್ನು ಕಂಟೈನ್ಮೆಂಟ್ ಮಾಡಿ 501 ಮಂದಿಯನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಮತ್ತೆ 10 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
ನಗರದಲ್ಲಿ ಇತ್ತೀಚೆಗೆ ಕ್ಲಸ್ಟರ್ ಮಾದರಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಮೂರನೇ ಪ್ರಕರಣ ಇದಾಗಿದೆ. ಒಟ್ಟು ಒಂಬತ್ತು ಬ್ಲಾಕ್ಗಳಲ್ಲಿ 504 ಫ್ಲ್ಯಾಟ್‌ಗಳಿದ್ದು, ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದಾರೆ. ಈ ಪೈಕಿ ಸೋಮವಾರದವರೆಗೆ ಸೋಂಕು ಪರೀಕ್ಷೆಗೆ ಒಳಪಡಿಸಿದ 511 ಮಂದಿಯ ಪರೀಕ್ಷಾ ವರದಿ ಲಭ್ಯವಾಗಿವೆ. ನಿವಾಸಿಗಳು, ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟಾರೆ 1,055 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಕೊರೊನಾ ಸೋಂಕು ಹೆಚ್ಚಳ ತಡೆಗೆ ಮತ್ತಷ್ಟು ಕಠಿಣ ಕ್ರಮ
ನಿವಾಸಿಗಳ ನಿರ್ಲಕ್ಷ್ಯ:
ಅಪಾರ್ಟ್‌ಮೆಂಟ್‌ನಲ್ಲಿ 20 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡು ಹರಡುವ ಭೀತಿ ಇದ್ದರೂ ಮಂಗಳವಾರ ನಿವಾಸಿಗಳು ಬೇಕಾಬಿಟ್ಟಿಯಾಗಿ ಅಪಾರ್ಟ್‌ಮೆಂಟ್‌ನಿಂದ ಹೊರಗೆ ಓಡಾಡುತ್ತಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಇಡೀ ‘ಅಪಾರ್ಟ್‌ಮೆಂಟನ್ನು ಕಂಟೈನ್ಮೆಂಟ್ ಮಾಡಲಾಗಿದೆ’ ಎಂದು ಗೇಟ್‌ಗೆ ಫಲಕ ಅಳವಡಿಸಿ, ನಿವಾಸಿಗಳ ಓಡಾಟವನ್ನು ನಿರ್ಬಂಧಿಸಿದರು. ಅಪಾರ್ಟ್‌ಮೆಂಟ್ ಸುತ್ತ ಸ್ಯಾನಿಟೈಸ್ ಮಾಡಿದರು.
ಸೋಂಕು ಪರೀಕ್ಷೆಗೆ 7 ತಂಡ:
ಅಪಾರ್ಟ್‌ಮೆಂಟ್ ನಿವಾಸಿಗಳ ಸೋಂಕು ಪರೀಕ್ಷೆಗೆ ಮಂಗಳವಾರ ಏಳು ತಂಡ ನಿಯೋಜನೆ ಮಾಡಲಾಗಿತ್ತು. ನಿವಾಸಿಗಳಿಗೆ ಆರೋಗ್ಯ ಸಮಸ್ಯೆ ಉಂಟಾದರೆ ತುರ್ತು ಚಿಕಿತ್ಸೆಗೆ ಬಿಬಿಎಂಪಿ ವೈದ್ಯರ ನಿಯೋಜನೆ ಮಾಡಲಾಗಿದೆ. ನಿವಾಸಿಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ತಲುಪಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಮಹದೇವಪುರ ಜಂಟಿ ಆಯುಕ್ತ ವೆಂಕಟಾಚಲಪತಿ ಮಾಹಿತಿ ನೀಡಿದ್ದಾರೆ.
ದೊಡ್ಡ ಸಭೆ-ಸಮಾರಂಭಕ್ಕೆ ಬ್ರೇಕ್
ಅಪಾರ್ಟ್‌ಮೆಂಟ್‌ಗಳಲ್ಲಿ ಕ್ಲಸ್ಟರ್ ಮಾದರಿಯ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಸಭೆ, ಸಮಾರಂಭ, ಕಾರ್ಯಕ್ರಮಗಳನ್ನು ಕಡಿಮೆ ಮಾಡುವಂತೆ ನಗರದ ಅಪಾರ್ಟ್‌ಮೆಂಟ್ ನಿವಾಸಿ ಕ್ಷೇಮಾಭಿವೃದ್ಧಿ ಸಂಘ ಸಂಸ್ಥೆಗಳು ಹಾಗೂ ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿದೆ ಎಂದು ಮಹದೇವಪುರ ವಲಯದ ವಿಶೇಷ ಆಯುಕ್ತ ಡಿ.ರಂದೀಪ್ ತಿಳಿಸಿದ್ದಾರೆ.
ಮಾಸ್ಕ್, ಅಂತರ ಮರೆತ್ರೆ, ಜನ- ಜಾತ್ರೆ ಹೀಗೆ ಇದ್ರೆ ಕೊರೊನಾ 2 ನೇ ಅಲೆ
ಎಸ್‌ಜೆಆರ್ ವಾಟರ್ ಮಾರ್ಕ್ ಅಪಾರ್ಟ್‌ಮೆಂಟ್‌ಗೆ ಮಂಗಳವಾರ ಬಿಬಿಎಂಪಿ ವಿಶೇಷ ಆಯುಕ್ತ ಡಿ.ರಂದೀಪ್ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮನಹಳ್ಳಿಯ, ಮಹದೇವಪುರದ ಅಪಾರ್ಟ್‌ಮೆಂಟ್ ಹಾಗೂ ಮಂಜುಶ್ರೀ ನರ್ಸಿಂಗ್ ಕಾಲೇಜಿನಲ್ಲಿ ಕ್ಲಸ್ಟರ್ ಮಾದರಿಯಲ್ಲಿ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ದೊಡ್ಡ ಸಭೆ ಸಮಾರಂಭ ಕಡಿಮೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇನ್ನು ಎಸ್‌ಜೆಆರ್ ವಾಟರ್ ಮಾರ್ಕ್ ಅಪಾರ್ಟ್‌ಮೆಂಟ್‌ನ ಎಲ್ಲರನ್ನೂ ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪರೀಕ್ಷಾ ವರದಿ ಬರುವವರೆಗೆ ಯಾರನ್ನೂ ಹೊರಗೆ ಬಿಡುವುದಿಲ್ಲ. ಅಪಾರ್ಟ್‌ಮೆಂಟ್‌ನಲ್ಲಿ ಇರುವ ನಿವಾಸಿಗಳು ಅವರ ಮನೆಯಲ್ಲಿಯೇ ಇರುವಂತೆ ಸೂಚನೆ ನೀಡಲಾಗಿದೆ. ಸೋಂಕು ದೃಢಪಟ್ಟವರನ್ನು ಐಸೋಲೇಷನ್ ಮಾಡಲಾಗುವುದು. ಹಿರಿಯ ನಾಗರಿಕರು ಹಾಗೂ ಅನಾರೋಗ್ಯ ಸಮಸ್ಯೆ ಇರುವ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ನಾಲ್ಕಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾದರೆ ಎಲ್ಲರಿಗೂ ಪರೀಕ್ಷೆ
ಮಹದೇವಪುರ ವಲಯದಲ್ಲಿ ನಾಲ್ಕಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾದ ಕಡೆಗಳಲ್ಲಿ ಎಲ್ಲರನ್ನೂ ಸೋಂಕು ಪರೀಕ್ಷೆ ಮಾಡುವಂತೆ ವಲಯ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಂತರ ಸೋಂಕಿತರ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗುವುದು ಎಂದು ರಂದೀಪ್ ತಿಳಿಸಿದರು.