ದಾವಣಗೆರೆ (ಸೆ.13) : ಸ್ಮಶಾನಕ್ಕೆ ಸರ್ಕಾರಿ ಜಾಗವೇ ಇಲ್ಲದೇ ದಲಿತ ಕುಟುಂಬವೊಂದು ರಸ್ತೆ ಬದಿಯಲ್ಲೆ ಅಂತ್ಯಕ್ರಿಯೆ ನೆರವೇರಿಸಿರುವ ಘಟನೆ ತಾಲೂಕಿನ ಪುಟಗನಾಳು ಗ್ರಾಮದಲ್ಲಿ ನಡೆದಿದ್ದು, ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಸುಮಾರು 2 ಸಾವಿರ ಜನಸಂಖ್ಯೆ ಹೊಂದಿರುವ ತಾಲೂಕಿನ ಕಾಡಜ್ಜಿ ಗ್ರಾಪಂ ವ್ಯಾಪ್ತಿಯ ಈ ಪುಟಗನಾಳು ಗ್ರಾಮದಲ್ಲಿ ಯಾವುದೇ ಸಮುದಾಯದವರೂ ಸಾವನ್ನಪ್ಪಿದರೂ ಎಲ್ಲರನ್ನು ರಸ್ತೆ ಬದಿಯಲ್ಲಿ ಅಂತ್ಯಸಂಸ್ಕಾರ ಮಾಡುವ ಅನಿವಾರ್ಯತೆ ಎದುರಾಗಿದೆ.

ಆಟೋ ಓಡಿಸುತ್ತಿದ್ದ ವೈದ್ಯ ಈಗ ಡಿಎಚ್‌ಓ ..

ಗ್ರಾಮದಲ್ಲಿ ಗೋಮಾಳವಿದ್ದರೂ ಜಿಲ್ಲಾಡಳಿತ ಸ್ಮಶಾನಕ್ಕೆ ಜಾಗ ಕೊಡಲು ನಿರ್ಲಕ್ಷ್ಯ ವಹಿಸಿದೆ. ಈಚೆಗೆ ಗ್ರಾಮದಲ್ಲಿ ಮೃತಪಟ್ಟಿದ್ದ ದಲಿತ ಯುವಕ ಹನುಮಂತಪ್ಪ(22) ಎಂಬಾತನ ಶವಸಂಸ್ಕಾರವನ್ನು ರಸ್ತೆ ಬದಿಯಲ್ಲೇ ಮಾಡಲಾಗಿದೆ. ಇಲ್ಲದೇ ಈವರೆಗೂ 13ಕ್ಕೂ ಹೆಚ್ಚು ಶವಗಳ ಅಂತ್ಯಕ್ರಿಯೆಯನ್ನು ಮಾಡಲಾಗಿದೆ.

ಜಿಲ್ಲಾಡಳಿತದಿಂದ ಇದೇ ರೀತಿ ಅಸಡ್ಡೆ ಮುಂದುವರಿದರೆ ಗ್ರಾಮದಲ್ಲಿ ಇನ್ನು ಯಾರೇ ಸಾವನ್ನಪ್ಪಿದರೂ ಅವರ ಶವವನ್ನು ಡಿಸಿ ಕಚೇರಿ ಆವರಣ ಅಥವಾ ಡಿಸಿ ಕಚೇರಿ ಮುಂಭಾಗದಲ್ಲಿ ಅಂತ್ಯಕ್ರಿಯೆ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.