ದಾವಣಗೆರೆ (ಸೆ.10): ಐಎಎಸ್‌ ಅಧಿಕಾರಿಗಳ ಧೋರಣೆಗೆ ಬೇಸತ್ತು ದಾವಣಗೆರೆಯಲ್ಲಿ ಆಟೋರಿಕ್ಷಾ ಡ್ರೈವರ್‌ ಆಗಿ ಬದುಕು ಕಟ್ಟಿಕೊಂಡಿದ್ದ ಸರ್ಕಾರಿ ವೈದ್ಯನ ಕಷ್ಟಕ್ಕೆ ಕೊನೆಗೂ ಸ್ಪಂದಿಸಿದ ರಾಜ್ಯ ಸರ್ಕಾರ ಕೊಪ್ಪಳ ಜಿಲ್ಲೆಯ ಕುಟುಂಬ ಕಲ್ಯಾಣಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದೆ.

ಇದರಿಂದ ಇಷ್ಟುದಿನ ಸಂಬಳ, ಹುದ್ದೆಯಿಲ್ಲದೆ ಪರದಾಡಿದ್ದ ಡಾ.ಎಂ.ಎಚ್‌.ರವೀಂದ್ರನಾಥ್‌ ಅವರಿಗೆ ಈಗ ಉನ್ನತ ಹುದ್ದೆಗೆ ಬಡ್ತಿ ದೊರೆತಂತಾಗಿದೆ. ಸೇಂಡಂನಲ್ಲಿ ವೈದ್ಯಾಧಿಕಾರಿಯಾಗಿದ್ದ ವೈದ್ಯ ಡಾ.ರವೀಂದ್ರನಾಥ ಅವರು ಉನ್ನತಾಧಿಕಾರಿಗಳು ಕಿರುಕುಳ ನೀಡುತ್ತಿರುವುದಾಗಿ ಹೇಳಿ ಕೆಎಟಿ ಮೊರೆಹೋಗಿದ್ದರು. 

ಸರ್ಕಾರಿ ವೈದ್ಯ ಈಗ ಆಟೋ ಡ್ರೈವರ್‌! ...

ಕೆಎಟಿಯಲ್ಲಿ ಡಾ.ರವೀಂದ್ರನಾಥ ಪರ ತೀರ್ಪು ಬಂದಿದ್ದರೂ, ಹುದ್ದೆಯ ಜವಾಬ್ದಾರಿ ವಹಿಸದೆ ಉನ್ನತ ಅಧಿಕಾರಿಗಳು ಅಸಡ್ಡೆ ತೋರಿದ್ದರು. ಇದರಿಂದ ಬೇಸತ್ತ ಅವರು ದಾವಣಗೆರೆಯಲ್ಲಿ ಕೆಲ ದಿನಗಳಿಂದ ಆಟೋ ಚಾಲನೆ ಮಾಡಿಕೊಂಡಿದ್ದರು. ಈ ವಿಚಾರ ಮಾಧ್ಯಮದಲ್ಲಿ ಪ್ರಕಟವಾಗುತ್ತಿದ್ದಂತೆ ಇದೀಗ ಡಾ.ರವೀಂದ್ರನಾಥ್‌ರನ್ನು ಕೊಪ್ಪಳ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಯಾಗಿ ನೇಮಿಸಲಾಗಿದೆ.