'ಡಿಕೆಶಿ ಬಂಧನಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ'
ಡಿ. ಕೆ. ಶಿವಕುಮಾರ್ ಬಂಧನಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಮುಜರಾಯಿ, ಮೀನುಗಾರಿಕೆ, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಮೇಲೆ ಯಾವುದೇ ಪ್ರತಿಕಾರದ ಪ್ರಶ್ನೆಯೇ ಇಲ್ಲ. ಇಡಿ ಕಾನೂನಿನ ಪ್ರಕಾರ ಅದರ ಕಾರ್ಯವನ್ನು ನಿರ್ವಹಿಸಿದೆ ಎಂದಿದ್ದಾರೆ.
ಶಿವಮೊಗ್ಗ(ಸೆ.05): ಡಿಕೆಶಿ ಬಂಧನ ವಿಚಾರದಲ್ಲಿ ಬಿಜೆಪಿ ಕೈವಾಡ ಇದೆ ಎಂದು ಬಿಂಬಿಸಲಾಗಿದೆ. ಆದರೆ ಅವರ ಬಂಧನಕ್ಕೂ ಬಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಮುಜರಾಯಿ, ಮೀನುಗಾರಿಕೆ, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸ್ಪಷ್ಟನೆ ನೀಡಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲೇ ಡಿಕೆಶಿ ಸೇರಿದಂತೆ ಘಟಾನುಘಟಿ ನಾಯಕರುಗಳಿದ್ದ ಕಾಂಗ್ರೆಸ್ ಪಕ್ಷವನ್ನು ಹೀನಾಯವಾಗಿ ಸೋಲಿಸಿದ್ದೇವೆ. ಈಗ ಡಿ.ಕೆ.ಶಿವಕುಮಾರ್ ಅವರನ್ನು ಈ ರೀತಿ ಎದುರಿಸುವ ಅನಿವಾರ್ಯತೆ ಬಿಜೆಪಿಗೆ ಇಲ್ಲ ಎಂದರು.
ಪ್ರತಿಕಾರದ ಪ್ರಶ್ನೆಯೇ ಇಲ್ಲ:
ಡಿ.ಕೆ. ಶಿವಕುಮಾರ್ ಅವರ ಮೇಲೆ ಯಾವುದೇ ಪ್ರತಿಕಾರದ ಪ್ರಶ್ನೆಯೇ ಇಲ್ಲ. ಇಡಿ ಕಾನೂನಿನ ಪ್ರಕಾರ ಅದರ ಕಾರ್ಯವನ್ನು ನಿರ್ವಹಿಸಿದೆ. ಇದನ್ನು ಬಿಜೆಪಿಯವರು ಡಿಕೆಶಿ ಮೇಲಿನ ಪ್ರತಿಕಾರಕ್ಕೆ ಮಾಡಿಸಿದ್ದಾರೆ ಎನ್ನುವುದೆಲ್ಲ ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ.
ಶಿವಮೊಗ್ಗ: ರಸ್ತೆ ಮೇಲೆ 2 ಅಡಿ ನೀರು, ಬಾಳೆಕೊಪ್ಪ ಸಂಪರ್ಕ ಸಂಪೂರ್ಣ ಕಡಿತ
ತಮ್ಮ ಬಂಧನದ ಸಂದರ್ಭದಲ್ಲಿ ಬಿಜೆಪಿ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ. ಅವರ ವ್ಯಂಗ್ಯಕ್ಕೆ ನಾವು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಅವರ ಬಂಧನ ಬಿಜೆಪಿ ಪ್ರೇರಿತ ಎಂದು ಬಿಂಬಿಸುವುದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.