ಈಶ್ವರ ಜಿ. ಲಕ್ಕುಂಡಿ 

ನವಲಗುಂದ(ಜ.25): ಜನವರಿ ತಿಂಗಳು ಮುಗಿಯಲು ಕೇವಲ ಆರು ದಿನ ಬಾಕಿ ಇವೆ. ಆದರೆ ನವಲಗುಂದ ಮತ್ತು ಅಣ್ಣಿಗೇರಿ ತಾಲೂಕುಗಳಲ್ಲಿ ಅರ್ಧಕ್ಕಿಂತ ಹೆಚ್ಚಿನವರಿಗೆ ತಿಂಗಳ ರೇಷನ್ ದೊರೆತಿಲ್ಲ. ಪಡಿತರ ಅಂಗಡಿಗೆ ತೆರಳಿದವರಿಗೆ ಸರ್ವರ್ ಇಲ್ಲ, ರೇಷನ್ ತಗೊಳೊಕೆ ನಾಳೆ ಬನ್ನಿ ಎಂಬ ಸಿದ್ಧ ಉತ್ತರ ಸಿಗುತ್ತಿದೆ. 

ಎರಡು ತಾಲೂಕಿನಲ್ಲಿ ಸುಮಾರು 40000 ಕ್ಕಿಂತ ಹೆಚ್ಚು ಜನ ಪಡಿತರ ಚೀಟಿ ಹೊಂದಿದ್ದಾರೆ. ಅದರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ತಿಂಗಳ ರೇಷನ್ ತಗೆದುಕೊಳ್ಳಲು ಕೂಪನ್ ಸಿಗದೆ ಪರದಾಡುತ್ತಿದ್ದಾರೆ. ಕಾರಣ ಸರ್ವರ್ ಸಮಸ್ಯೆ. ತಾಂತ್ರಿಕ ದೋಷದಿಂದ ತೊಂದರೆಗಳು ದಿನದಿಂದ ದಿನಕ್ಕೆ ಭಿನ್ನವಾಗುತ್ತಿದ್ದು, ಕೂಪನ್ ನೀಡಲು ಸಾಧ್ಯವಾಗದೆ ಅಂಗಡಿಕಾರರು ನಾಳೆ ಬನ್ನಿ ಎಂದು ಹೇಳಿ ಕಳಿಸುತ್ತಿದ್ದಾರೆ. 

ಕೂಪನ್ ಪಾಳಿ: 

ಪ್ರತಿ ತಿಂಗಳಿನಲ್ಲಿ ಒಂದು ದಿನ ರೇಷನ್ ಕೂಪನ್‌ಗಾಗಿಯೇ ತಮ್ಮ ಕೆಲಸ ಕಾರ್ಯವನ್ನು ಬಿಡಬೇಕಾದ ಸ್ಥಿತಿಯಿದೆ. ಕೆಲಸ ಬಿಟ್ಟು ನ್ಯಾಯಬೆಲೆ ಅಂಗಡಿಯ ಮುಂದೆ ಸರದಿಯಲ್ಲಿ ನಿಂತು ಕೂಪನ್ ಪಡೆದು ಬಳಿಕ ರೇಷನ್ ಪಡೆಯುತ್ತಿದ್ದರು. ಆದರೆ, ಈ ತಿಂಗಳ ಹೆಚ್ಚಿನ ಪ್ರಮಾಣದಲ್ಲಿ ಸರ್ವರ್ ಇಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ 10 ದಿನಗಳಿಂದ ನ್ಯಾಯಬೆಲೆ ಅಂಗಡಿ ಮುಂದೆ ಕೂಪನ್ ಗಾಗಿ ಸರದಿಯಲ್ಲಿ ಬಂದು ನಿಲ್ಲುತ್ತಿದ್ದು, ಸರ್ವರ್ ಇಲ್ಲದೆ ಮರಳಿ ಹೋಗುತ್ತಿದ್ದಾರೆ. ಇದರಿಂದ ಅವರ ಒಂದು ದಿನದ ದುಡಿಮೆ ಕೂಡಾ ಹಾಳಾಗುತ್ತಿದೆ. 

ಕೈಕೊಟ್ಟ ಸರ್ವರ್, ಜಗಳಕ್ಕೆ ಕಾರಣ: 

ದಿನಂಪ್ರತಿ ಕೊಪನ್ ಕೊಡುವ ನ್ಯಾಯಬೆಲೆ ಅಂಗಡಿಗೆ ಅಲೆ ದಾಡು ತ್ತಿರುವ ಜನರು ಕೂಪನ್ ನೀಡದೆ ವಿತರಕರು ಸುಳ್ಳು ಹೇಳುತ್ತಿದ್ದಾರೆ ಎಂದು ಅವರೊಂದಿಗೆ ಜಗಳಕ್ಕೆ ನಿಲ್ಲುವಂತಾಗಿದೆ. ಅಲ್ಲದೆ, ಆಹಾರ ಮತ್ತು ಸರಬರಾಜು ಇಲಾ ಖೆಗೆ ದೂರು ತೆಗೆದುಕೊಂಡು ಸಾರ್ವಜನಿಕರು ಹೋಗುತ್ತಿರುವುದು ಕಂಡುಬಂದಿದೆ. ನವಲಗುಂದ ತಾಲೂಕಿನಲ್ಲಿಯೇ 49 ನ್ಯಾಯಬೆಲೆ ಅಂಗಡಿಗಳಿವೆ. ಸರ್ವರ್ ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದುದರಿಂದ ಗ್ರಾಹಕರು ಆಹಾರ ಇಲಾಖೆಗೆ ಹಿಡಿಶಾಪ ಹಾಕಿ ಮನೆಗೆ ಹೋಗುತ್ತಿದ್ದಾರೆ. ಕೆಲವರು ಸರ್ವರ್ ಬಾರದೇ ಇದ್ದರೆ ಈ ತಿಂಗಳ ರೇಷನ್ ಬರುತ್ತದೆಯೋ ಇಲ್ಲವೋ ಎಂಬ ಚಿಂತೆಯಲ್ಲಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರೇಷನ್ ಕೂಪನ್‌ಗಾಗಿ ಒಂದು ವಾರದಿಂದ ನಮ್ಮ ಎಲ್ಲ ಕೆಲಸ ಕಾರ್ಯ ಬಿಟ್ಟು ಪಡಿತರ ಅಂಗಡಿಗೆ ಹೋಗಿ ಬರುತ್ತಿದ್ದೇನೆ. ಯಾವಾಗ ಹೋದರು ಕೂಡ ಸರ್ವರ್ ಇಲ್ಲ ಸಂಜೆ ಬನ್ನಿ,ನಾಳೆ ಬನ್ನಿ ಎನ್ನುತ್ತಿದ್ದಾರೆ. ಅವರು ಹೇಳಿದ ದಿನ ಹೋದರೂ ಕೂಡ ಕೂಪನ್ ಸಿಗುತ್ತಿಲ್ಲ ಎಂದು ಸ್ಥಳೀಯ ಫಕ್ಕೀರಪ್ಪ ಅವರು ಹೇಳಿದ್ದಾರೆ. 

ಈ ಬಗ್ಗೆ ಮಾತನಾಡಿದ ಆಹಾರ ನಿರೀಕ್ಷಕ ರಾಜು ದೊಡ್ಡಮನಿ ಅವರು, ಸರ್ವರ್ ಸಮಸ್ಯೆಯಿಂದ ಈ ಪರಿಸ್ಥಿತಿಯಾಗಿದೆ. ಇನ್ನೆರಡು ದಿನಗಳಲ್ಲಿ ಸರ್ವರ್ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಸಮಸ್ಯೆ ಬಗೆಹರಿಯದೇ ಹೋದರೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಮೇಲಾಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.