ಮಂಡ್ಯದ 313 ಹಳ್ಳಿಗಳಿಗೆ ತಟ್ಟದ ಕೊರೋನಾ..! ಒಂದೇ ಒಂದು ಸೋಂಕು ಪ್ರಕರಣ ಪತ್ತೆಯಾಗಿಲ್ಲ

  •  ಜಿಲ್ಲೆಯಾದ್ಯಂತ ತೀವ್ರವಾಗಿ ವ್ಯಾಪಿಸಿ ಜನರನ್ನು ಬೆಂಬಿಡದೆ ಕಾಡಿದ ಕೊರೋನಾ ಎರಡನೇ ಅಲೆ
  • ಮಂಡ್ಯದ 313 ಹಳ್ಳಿಗಳಿಗೆ  ತಟ್ಟದ ಕೊರೋನಾ ಸೋಂಕು
  • ಈ ಗ್ರಾಮಗಳಲ್ಲಿ ಇದುವರೆವಿಗೂ ಒಂದೇ ಒಂದು ಕೊರೋನಾ ಸೋಂಕು ಪ್ರಕರಣ ವರದಿಯಾಗಿಲ್ಲ
no one Covid Case reported in 313 Villages of Mandya snr

ವರದಿ : ಮಂಡ್ಯ ಮಂಜುನಾಥ

 ಮಂಡ್ಯ (ಜೂ.13):  ನಂಬಿದ್ರೆ ನಂಬಿ ಬಿಟ್ರೆ ಬಿಡಿ.. ವಿಚಿತ್ರವಾದರೂ ಇದು ಸತ್ಯ.! ಕೊರೋನಾ ಎರಡನೇ ಅಲೆ ಜಿಲ್ಲೆಯಾದ್ಯಂತ ತೀವ್ರವಾಗಿ ವ್ಯಾಪಿಸಿ ಜನರನ್ನು ಬೆಂಬಿಡದೆ ಕಾಡಿತಾದರೂ 313 ಹಳ್ಳಿಗಳಿಗೆ ಸೋಂಕು ತಟ್ಟದಿರುವುದು ನಿಜಕ್ಕೂ ಅಚ್ಚರಿಯ ಸಂಗತಿ.

ಮಂಡ್ಯದ ಈ ಗ್ರಾಮಗಳಲ್ಲಿ ಇದುವರೆವಿಗೂ ಒಂದೇ ಒಂದು ಕೊರೋನಾ ಸೋಂಕು ಪ್ರಕರಣ ವರದಿಯಾಗಿಲ್ಲ. ಸೋಂಕಿನ ಲಕ್ಷಣಗಳೂ ಜನರನ್ನು ಬಾಧಿಸಿಲ್ಲ. ಯಾವುದೇ ಭಯ, ಆತಂಕವಿಲ್ಲದೆ ಈ ಗ್ರಾಮಗಳ ಜನರು ನೆಮ್ಮದಿಯ ಬದುಕನ್ನು ನಡೆಸಿದ್ದಾರೆ.

ಸೋಂಕು ವ್ಯಾಪಿಸದಿರುವ ಗ್ರಾಮಗಳ ಸಂಖ್ಯೆಯಲ್ಲಿ ನಾಗಮಂಗಲ ತಾಲೂಕು ಮೊದಲ ಸ್ಥಾನದಲ್ಲಿದ್ದರೆ ಶ್ರೀರಂಗಪಟ್ಟಣ ತಾಲೂಕು ಕೊನೆಯ ಸ್ಥಾನದಲ್ಲಿದೆ. ಕೊರೋನಾ ಸೋಂಕಿನಿಂದ ಮುಕ್ತವಾಗಿರುವ ಈ ಗ್ರಾಮಗಳು ಜನಸಂಪರ್ಕದಿಂದ ದೂರವೇ ಇರುವ ಗ್ರಾಮಗಳಾಗಿವೆ. ಹಾಗಾಗಿ ಆ ಗ್ರಾಮಗಳಿಗೆ ಸೋಂಕು ತಟ್ಟಿಲ್ಲ ಎನ್ನುವುದು ಒಂದು ವಾದವಾದರೆ, ಊರಿನ ಜನರೇ ಎಚ್ಚೆತ್ತುಕೊಂಡು ಮುನ್ನೆಚ್ಚರಿಕೆ ವಹಿಸುವುದರೊಂದಿಗೆ ಹೊರಗಿನಿಂದ ಬರುವವರಿಗೆ ನಿಷೇಧ ವಿಧಿಸಿಕೊಂಡಿದ್ದು ಸೋಂಕು ಮುಕ್ತಕ್ಕೆ ಕಾರಣ ಎನ್ನುವುದು ಮತ್ತೊಂದು ವಾದವೂ ಇದೆ.

3ನೇ ಅಲೆ ಎದುರಿಸಲು ಸರ್ಕಾರ ಸಿದ್ಧ : ತಜ್ಞರ ಸಮಿತಿ ವರದಿ ಆಧರಿಸಿ ಕ್ರಮ

ಜಿಲ್ಲೆಯ ಇತರೆ ಗ್ರಾಮಗಳಲ್ಲಿ ಕೊರೋನಾ ಎರಡನೇ ಅಲೆ ತೀವ್ರಗತಿಯಲ್ಲಿ ಹರಡುವುದಕ್ಕೆ ಜನರ ನಿರ್ಲಕ್ಷ್ಯವೂ ಒಂದು ಕಾರಣವೆಂಬ ಮಾತು ಕೇಳಿಬಂದಿವೆ. ಮೊದಲ ಅಲೆಯಲ್ಲಿದ್ದಂತೆ ಸೋಂಕಿತರನ್ನು ಆಸ್ಪತ್ರೆ ಅಥವಾ ಕೋವಿಡ್‌ ಕೇಂದ್ರಗಳಲ್ಲಿ ತಂದಿರಿಸದೆ, ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸದಿದ್ದ ಕಾರಣ ಹೆಚ್‌ಚು ವ್ಯಾಪಿಸಲು ಕಾರಣವಾಯಿತು. ಸೋಂಕಿತರಿಗೆ ಸೂಕ್ತ ವ್ಯವಸ್ಥೆ ಇಲ್ಲದಿದ್ದರೂ ಹಳ್ಳಿಗಳಲ್ಲೇ ಹೋಂ ಕ್ವಾರಂಟೈನ್‌ಗೆ ಅವಕಾಶ ನೀಡಿದ್ದು, ಪಾಸಿಟೀವ್‌ ಇದ್ದವರೂ ಹೊರಗಡೆ ನಿರ್ಭೀತಿಯಿಂದ ಓಡಾಡುತ್ತಿದ್ದ ಕಾರಣ ಸೋಂಕು ತೀವ್ರವಾಗಿ ವ್ಯಾಪಿಸುವುದಕ್ಕೆ ಕಾರಣವಾಯಿತು.

ಸೋಂಕು ಮುಕ್ತ ಗ್ರಾಮಗಳಲ್ಲಿರುವ ಜನರು ನಗರ-ಪಟ್ಟಣ ಸಂಪರ್ಕದಿಂದ ಅಂತರ ಕಾಯ್ದುಕೊಂಡಿದ್ದು, ಹೊರಗಿನಿಂದ ಊರಿಗೆ ವಲಸೆ ಬಂದವರು ಕಡಿಮೆ ಸಂಖ್ಯೆಯಲ್ಲಿದ್ದರು. ಅವರಾರ‍ಯರೂ ಸೋಂಕನ್ನು ಹೊತ್ತು ತರದಿರುವುದು ಊರಿನವರ ಅದೃಷ್ಟವೂ ಆಗಿದೆ. ಹೊರಗಿನಿಂದ ಈ ಊರುಗಳಿಗೆ ಯಾರೂ ಹೆಚ್ಚು ಬಾರದಿದ್ದರಿಂದ ಸೋಂಕು ಹರಡುವುದಕ್ಕೆ ನಿಯಂತ್ರಣ ಬಿದ್ದಿತು. ಅಲ್ಲದೆ, ಊರಿನವರು ಸ್ವಯಂಪ್ರೇರಿತರಾಗಿ ಹೊರಗೆ ಹೋಗದೆ ಗ್ರಾಮದೊಳಗೇ ಉಳಿದುಕೊಂಡಿದ್ದರಿಂದ ಸೋಂಕು ವ್ಯಾಪಿಸುವುದು ತಪ್ಪಿತು. ಹೀಗಾಗಿ ಕೊರೋನಾ ಗ್ರಾಮಗಳನ್ನು ತಲುಪುವುದಕ್ಕೆ ಸಾಧ್ಯವಾಗಲೇ ಇಲ್ಲ.

ಮತ್ತೆ ರಾಜ್ಯದಲ್ಲಿ 5% ಗಡಿ ದಾಟಿದ ಪಾಸಿಟಿವಿಟಿ ದರ .

ಈ ಊರಿನವರಿಗೆ ಕೊರೋನಾ ಭಯ ಎಂದಿಗೂ ಕಾಡಲೇ ಇಲ್ಲ. ಅಕ್ಕ-ಪಕ್ಕದ ಗ್ರಾಮಗಳ ಜನರು ಕೊರೋನಾದಿಂದ ನೆಮ್ಮದಿ ಕಳೆದುಕೊಂಡು ಬದುಕು ನಡೆಸುತ್ತಿದ್ದರೂ ಇವರು ಮಾತ್ರ ನಿರಾಳರಾಗಿದ್ದರು. ಹಾಗಂತ ಬೇಜವಾಬ್ದಾರಿತನ, ನಿರ್ಲಕ್ಷ್ಯ ತೋರಿಸಲಿಲ್ಲ. ಸ್ವಯಂ ತಮಗೆ ತಾವೇ ದಿಗ್ಬಂಧನ ಹಾಕಿಕೊಂಡು ಬದುಕನ್ನು ನಡೆಸಿದರು. ಯಾವುದಕ್ಕೂ ಧಾವಂತ ತೋರಲಿಲ್ಲ. ಆತುರವನ್ನೂ ಪಡಲಿಲ್ಲ. ಗ್ರಾಮದಲ್ಲಿ ಏನು ಸಿಗುವುದೋ ಅದಕ್ಕಷ್ಟೇ ತೃಪ್ತಿಪಟ್ಟುಕೊಂಡು ಜೀವನ ನಡೆಸಿದರು. ಈ ಗ್ರಾಮಗಳ ಜನರು ಹಿಂದಿನಿಂದ ಬೆಳೆಸಿಕೊಂಡು ಬಂದ ರೂಢಿಯೋ ಅಥವಾ ಕೊರೋನಾ ಸಮಯದಲ್ಲಿ ಜೀವನ ಪದ್ಧತಿಯಲ್ಲಿ ಕಂಡುಕೊಂಡ ಬದಲಾವಣೆಯೋ ಗೊತ್ತಿಲ್ಲ. ಒಟ್ಟಾರೆ ಊರಿನವರು ವಹಿಸಿದ ಮುಂಜಾಗ್ರತೆಯ ಕಾರಣದಿಂದಲೇ ಗ್ರಾಮಗಳು ಸೋಂಕು ಮುಕ್ತವಾಗಿ ಉಳಿದುಕೊಂಡವು.

ಸೋಂಕು ಮುಕ್ತ ಗ್ರಾಮಗಳಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು, ವೈದ್ಯರು ಯಾರೂ ಸಹ ಭೇಟಿ ನೀಡಿಲ್ಲ. ಅಲ್ಲಿನ ವಾತಾವರಣ ಉತ್ತಮವಾಗಿದೆ ಎಂಬ ಸಮಾಧಾನ ಅವರಲ್ಲಿದೆ. ಹೊರಗಿನಿಂದ ಜನರು ಹೆಚ್ಚಾಗಿ ಊರನ್ನು ಪ್ರವೇಶಿಸಿದಾಗಲೇ ಸೋಂಕು ಗ್ರಾಮವನ್ನು ಆಕ್ರಮಿಸಿಕೊಳ್ಳಲು ಕಾರಣ ಎನ್ನುವುದು ಜನಜನಿತವೂ ಹೌದು.

ಮುತ್ತತ್ತಿ ಗ್ರಾಮವೂ ಕೂಡ ಸೋಂಕು ಮುಕ್ತ ಗ್ರಾಮವಾಗಿಯೇ ಉಳಿದುಕೊಂಡಿತ್ತು. ಅಲ್ಲಿರುವ ಸೋಲಿಗರಿಗೆ ಆಹಾರ ಕಿಟ್‌ಗಳನ್ನು ನೀಡಲು ಹೋದವರು ಸೋಂಕು ಹರಡಿ ಬಂದರು. ಎರಡೇ ದಿನದಲ್ಲಿ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಯಿತು. ಹೀಗೆ ಹೊರಗಿನವರ ಸಂಪರ್ಕದಿಂದ ದೂರ ಉಳಿಯುವ ಗ್ರಾಮಗಳು ಕೊರೋನಾ ಅಲೆಯಿಂದ ತಪ್ಪಿಸಿಕೊಂಡಿರುವುದಕ್ಕೆ 313 ಗ್ರಾಮಗಳೇ ಸಾಕ್ಷೀಭೂತವಾಗಿವೆ.

ಜಿಲ್ಲೆಯಲ್ಲಿ ಸೋಂಕು ಹರಡದ ಗ್ರಾಮಗಳು

ತಾಲೂಕು ಸಂಖ್ಯೆ

ಮಂಡ್ಯ 19

ಮದ್ದೂರು 16

ಮಳವಳ್ಳಿ 31

ಕೆ.ಆರ್‌.ಪೇಟೆ 77

ನಾಗಮಂಗಲ 136

ಪಾಂಡವಪುರ 21

ಶ್ರೀರಂಗಪಟ್ಟಣ 13

ಒಟ್ಟು 313

ಇದುವರೆಗೆ ಸೋಂಕನ್ನು ಅಂಟಿಸಿಕೊಳ್ಳದೆ ಉತ್ತಮ ವಾತಾವರಣವನ್ನು ಹೊಂದಿರುವ ಗ್ರಾಮಗಳು ನಿಜಕ್ಕೂ ಮಾದರಿ ಗ್ರಾಮಗಳು. ಅವರು ಹೊರಗಿನ ಜನರ ಸಂಪರ್ಕದಿಂದ ದೂರ ಉಳಿದು ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಿದ್ದರಿಂದ ಆ ಗ್ರಾಮಗಳಿಗೆ ಸೋಂಕು ತಟ್ಟಲಿಲ್ಲ. ಸೋಂಕಿತ ಗ್ರಾಮಗಳಲ್ಲಿ ಹೋಂ ಕ್ವಾರಂಟೈನ್‌ ಆದವರು ಜವಾಬ್ದಾರಿಯಿಂದ ನಡೆದುಕೊಳ್ಳದಿದ್ದರಿಂದ ಸೋಂಕು ಹರಡುವಿಕೆ ತೀವ್ರವಾಯಿತು. ಮುಂದಿನವಾರ ಸೋಂಕು ರಹಿತ ಗ್ರಾಮಗಳಿಗೆ ಭೇಟಿ ನೀಡಿ ಅವರ ಅಭಿಪ್ರಾಯ ಸಂಗ್ರಹಿಸುವೆ.

- ಜಿ.ಆರ್‌.ಜೆ.ದಿವ್ಯಾಪ್ರಭು, ಸಿಇಓ, ಜಿಲ್ಲಾ ಪಂಚಾಯತ್‌

Latest Videos
Follow Us:
Download App:
  • android
  • ios