Omicron variant : ಚಿಕ್ಕಬಳ್ಳಾಪುರದಲ್ಲಿ ಒಂದೂ ಒಮಿಕ್ರೋನ್ ಕಾಣಿಸಿಕೊಂಡಿಲ್ಲ
- ಇಲ್ಲಿ ಒಂದೂ ಒಮಿಕ್ರೋನ್ ಕಾಣಿಸಿಕೊಂಡಿಲ್ಲ
- ಮಕ್ಕಳ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಆರ್. ಲತಾ
ಚಿಕ್ಕಬಳ್ಳಾಪುರ (ಜ.04): ಜಿಲ್ಲೆಯಲ್ಲಿ ಪ್ರಸ್ತುತ 12 ಕೊರೊನಾ ಸಕ್ರಿಯ ಪ್ರಕರಣಗಳು ಮಾತ್ರ ಇದ್ದು ಕಳೆದ ಮೂರು ನಾಲ್ಕು ದಿನಗಳಿಂದ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಹಾಗೇ ಒಮಿಕ್ರಾನ್ (Omicron) ಪ್ರಕರಣಗಳು ಕೂಡ ಇಲ್ಲಿಯವರೆಗೂ ಜಿಲ್ಲೆಯಲ್ಲಿ ಕಂಡು ಬಂದಿಲ್ಲ ಎಂದು ಜಿಲ್ಲಾಧಿಕಾರಿ (DC) ಆರ್.ಲತಾ ತಿಳಿಸಿದರು. ಜಿಲ್ಲೆಯಲ್ಲಿನ 15 ರಿಂದ 18 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಕೋವಿಡ್ -19 ರ (Covid 19) ಲಸಿಕಾ (Vaccination) ಅಭಿಯಾನ ಕಾರ್ಯಕ್ರಮಕ್ಕೆ ನಗರದ ಜೂನಿಯರ್ ಕಾಲೇಜಿನಲ್ಲಿ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಜಿಲ್ಲೆಯ ಸಾರ್ವಜನಿಕರು ಸರ್ಕಾರದ ಕೋವಿಡ್ ನಿಯಂತ್ರಣ ಮಾರ್ಗಸೂಚಿ ನಿಯಮಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕೆಂದರು.
ಜಿಲ್ಲೆಯ 65 ಶಾಲಾ ಕಾಲೇಜಿನಲ್ಲಿ ಲಸಿಕೆ : ದೇಶದಾದ್ಯಂತ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯ ಆರಂಭವಾಗಿದೆ. ಜಿಲ್ಲೆಯಲ್ಲಿ ಈ ವಯೋಮಾನದ 65,648 ಮಕ್ಕಳಿದ್ದಾರೆ. ಜಿಲ್ಲೆಯ ವಿವಿಧ ಪಿಎಚ್ ಸಿ (PHC) ವ್ಯಾಪ್ತಿಯ ಗ್ರಾಮ ಮತ್ತು ನಗರ ಪ್ರದೇಶಗಳ 65 ಶಾಲಾ ಕಾಲೇಜುಗಳಲ್ಲಿ (School - College) ಇಂದು ಸತ್ರಗಳನ್ನು ಆಯೋಜಿಲಾಗಿದ್ದು, ಯಶಸ್ವಿಯಾಗಿ ನಡೆಯುತ್ತಿದೆ. ಮಕ್ಕಳಿಗೆ ಲಸಿಕೆ ತುಂಬಾ ಅತ್ಯಗತ್ಯವಾಗಿದ್ದು, ಜಿಲ್ಲೆಯ ಮಕ್ಕಳೂ ಸಹ ತುಂಬಾ ಉತ್ಸಾಹದಿಂದ ಲಸಿಕೆ ಪಡೆಯುತ್ತಿದ್ದಾರೆ ಎಂದರು.
ಜಿಲ್ಲೆಯಲ್ಲಿ ಈಗಾಗಲೇ 18 ವರ್ಷ ಮೇಲ್ಪಟ್ಟವರಿಗೆ ಮೊದಲ ಡೋಸ್ ಲಸಿಕೆಯನ್ನು ಶೇ.100 ರಷ್ಟುಮತ್ತು ಎರಡನೇ ಡೋಸ್ ಲಸಿಕೆಯನ್ನು ಶೇ. 81 ರಷ್ಟುನೀಡಲಾಗಿದ್ದು, ಉಳಿದವರಿಗೆ2 ನೇ ಡೋಸ್ ಲಸಿಕೆ ನೀಡಲು ಸಂಪೂರ್ಣ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ನಿತ್ಯ ಓಡಾಡುವರ ಮೇಲೆ ನಿಗಾ
ಜಿಲ್ಲೆಯಿಂದ ಬೆಂಗಳೂರು (bengaluru) ಹತ್ತಿರವಿರುವ ಕಾರಣ ಸಾಕಷ್ಟುಜನ ಕೆಲಸಕ್ಕೆ ದಿನ ನಿತ್ಯ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ ಹಾಗಾಗಿ ಅಂತಹವರ ಮೇಲೆ ಹೆಚ್ಚು ನಿಗಾವಹಿಸಿದ್ದು, ಜಿಲ್ಲೆಗೆ ಹೊರ ಪ್ರದೇಶಗಳಿಂದ ಬರುವ ಎಲ್ಲರಿಗೂ ಕೊರೊನಾ ಟೆಸ್ಟ್ ಮಾಡುತ್ತಿದೆ. ಪ್ರಸ್ತುತ 2, 800 ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ರಾಜ್ಯದಲ್ಲಿ ಕಳೆದ ಎರಡು ಮೂರು ದಿನಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ (Covid) ನಿಯಂತ್ರಣ ಟಾಸ್ಕ್ ಪೋರ್ಸ್ ಸಮಿತಿಯ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಲು ಸೂಚನೆಗಳನ್ನು ನೀಡಲಾಗಿದೆ. ಜಿಲ್ಲೆಯ ಸಾರ್ವಜನಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಪ್ರತಿಯೊಬ್ಬರು ಕೋವಿಡ್ -19 ರ ಲಸಿಕೆಯನ್ನು ಪಡೆದುಕೊಂಡು, ಮಾಸ್ಕ್ (Mask) ಧರಿಸಿ ಸಾಮಾಜಿಕ ಅಂತರ ಕಾಪಾಡಬೇಕೆಂದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಪಿ.ಶಿವಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ, ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕರಾದ ಡಾ.ರುದ್ರಮೂರ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ.ಮಂಜುಳ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಚೆನ್ನಕೇಶವ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಅಧಿಕಾರಿಗಳು ಉಪಸ್ಥಿತರಿದ್ದರು.
ಮಕ್ಕಳಿಗೆಕೋವಿಡ್ ಲಸಿಕೆ ಶ್ಲಾಘನೆ : ಗುಡಿಬಂಡೆ: ಮಕ್ಕಳ ಆರೋಗ್ಯ ದೃಷ್ಟಿಯಿಂದ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ಕೆ ಆದೇಶ ಮಾಡಿರುವ ಸರ್ಕಾರದ ಕೆಲಸ ಶ್ಲಾಘನೀಯ ಎಂದು ತಹಸೀಲ್ದಾರ್ ಸಿಗ್ಬತ್ತುಲ್ಲಾ ತಿಳಿಸಿದರು. ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆವರು, ಮಕ್ಕಳ ಆರೋಗ್ಯದ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೃಢ ನಿರ್ಧಾರ ತೆಗೆದುಕೊಂಡು ಮಕ್ಕಳಿಗೆ ಲಸಿಕೆ ನೀಡುವ ನಿರ್ಧಾರಕೈಗೊಳ್ಳಲಾಗಿದೆ ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ ಮಾತನಾಡಿ, ಇಡೀ ವಿಶ್ವದಲ್ಲಿಯೇ ಭಾರತ ಸರ್ಕಾರ ಮಕ್ಕಳಿಗೆ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ಕೆ ಚಾಲನೆ ನೀಡಿದೆ. ತಾಲೂಕಿನ 1494 ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ನೀಡುವ ಗುರಿ ಹೊಂದಲಾಗಿದೆ ಎಂದರು.
ಈ ವೇಳೆ ತಾ.ಪಂ ಇ.ಒ ರವೀಂದ್ರ, ಶಿಕ್ಷಣ ಇಲಾಖೆಯ ಟಿಪಿಒ ಡಾ.ಪ್ರಕಾಶ…, ಇಸಿಒ ಚಂದ್ರಶೇರ್ಖ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಾಲಾಜಿ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.