ಲಂಚ ಕೇಸ್: ಡೀಸಿ ವಿರುದ್ಧ ತನಿಖೆಗೆ ಇಲ್ಲ ತಡೆ
ಕಂದಾಯ ವ್ಯಾಜ್ಯವೊಂದರಲ್ಲಿ ಅನುಕೂಲಕರವಾದ ತೀರ್ಪು ನೀಡುವುದಕ್ಕಾಗಿ 5 ಲಕ್ಷ ಲಂಚ ಪಡೆದ ಆರೋಪ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ವಿರುದ್ಧದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ತನಿಖೆಗೆ ತಡೆ ನೀಡಲು ಹೈಕೋರ್ಟ್ ಮೌಖಿಕವಾಗಿ ನಿರಾಕರಿಸಿದ್ದು, ತನಿಖೆ ಮುಂದುವರಿಯಲಿ ಎಂದು ತಿಳಿಸಿದೆ.
ಬೆಂಗಳೂರು (ಜೂ.29): ಕಂದಾಯ ವ್ಯಾಜ್ಯವೊಂದರಲ್ಲಿ ಅನುಕೂಲಕರವಾದ ತೀರ್ಪು ನೀಡುವುದಕ್ಕಾಗಿ 5 ಲಕ್ಷ ಲಂಚ ಪಡೆದ ಆರೋಪ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ವಿರುದ್ಧದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ತನಿಖೆಗೆ ತಡೆ ನೀಡಲು ಹೈಕೋರ್ಟ್ ಮೌಖಿಕವಾಗಿ ನಿರಾಕರಿಸಿದ್ದು, ತನಿಖೆ ಮುಂದುವರಿಯಲಿ ಎಂದು ತಿಳಿಸಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧದ ಎಸಿಬಿ ತನಿಖೆ ರದ್ದುಪಡಿಸುವಂತೆ ಕೋರಿ ಜೆ.ಮಂಜುನಾಥ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ತನಿಖೆಗೆ ತಡೆಯಾಜ್ಞೆ ನೀಡಲು ಮೌಖಿಕವಾಗಿ ನಿರಾಕರಿಸಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಎಸಿಬಿ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಜು.13ಕ್ಕೆ ಮುಂದೂಡಿತು.
ಮೇಕೆದಾಟು ಪಾದಯಾತ್ರೆ: ಡಿಕೆಶಿ, ಸಿದ್ದು ವಿರುದ್ಧದ ಚಾರ್ಜ್‌ಶೀಟ್‌ಗೆ ತಡೆ
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು, ಪ್ರಕರಣದಲ್ಲಿ 2022ರ ಮೇ 18ರಂದು ಅಪರಾಧ ನಡೆದಿದೆ ಎನ್ನಲಾಗಿದೆ. ಆದರೆ, ಅರ್ಜಿದಾರರಾದ ಜಿಲ್ಲಾಧಿಕಾರಿ ಮಂಜುನಾಥ್ ವಿರುದ್ಧ 2022ರ ಮೇ 21ರಂದು ಭ್ರಷ್ಟಚಾರ ನಿಗ್ರಹ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ಸೆಕ್ಷನ್ 7 (ಎ) ಅನುಸಾರ ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿ ಅಥವಾ ನೌಕರ ಲಂಚಕ್ಕೆ ನಿರ್ದಿಷ್ಟಬೇಡಿಕೆಯಿಟ್ಟಮತ್ತು ಲಂಚ ಪಡೆದ ಬಗ್ಗೆ ಮೇಲ್ನೋಟಕ್ಕೆ ಸಾಕಷ್ಟುಸಾಕ್ಷ್ಯಾಧಾರಗಳಿರಬೇಕು. ಆದರೆ, ಈ ಪ್ರಕರಣದಲ್ಲಿ ಅಂತಹ ಯಾವುದೇ ಬಲವಾದ ಸಾಕ್ಷ್ಯಗಳಿಲ್ಲ ಎಂದು ವಾದ ಮಂಡಿಸಿದರು.
ಹಾಗೆಯೇ, ಅರ್ಜಿದಾರರ ವಿರುದ್ಧ ದೂರು ದಾಖಲಿಸಿರುವುದು ಏಕಪಕ್ಷೀಯವಾಗಿದೆ. ಕೇವಲ ಕಿರುಕುಳ ನೀಡುವ ದುರುದ್ದೇಶದಿಂದ ದೂರು ದಾಖಲಿಸಲಾಗಿದೆ. ಇನ್ನು ತನಿಖಾಧಿಕಾರಿಗಳು ಎಫ್‌ಐಆರ್ ದಾಖಲಿಸುವ ಮುನ್ನ ಮಂಜುನಾಥ್ ಅವರ ಹೇಳಿಕೆ ಪಡೆದಿಲ್ಲ ಹಾಗೂ ಪೂರ್ವಾನುಮತಿ ಪಡೆಯದೇ ತನಿಖೆ ಕೈಗೊಳ್ಳಲಾಗಿದೆ. ಅರ್ಜಿದಾರರನ್ನು ತೇಜೋವಧೆ ಮಾಡಲು, ಅವರ ಕಳಂಕ ರಹಿತ ಸೇವೆಗೆ ಧಕ್ಕೆ ತರುವ ಉದ್ದೇಶದಿಂದ ಸಂಚು ರೂಪಿಸಲಾಗಿದೆ. ಆದ್ದರಿಂದ, ಪ್ರಕರಣ ರದ್ದುಗೊಳಿಸಬೇಕು ಮತ್ತು ಮಧ್ಯಂತರ ಆದೇಶವಾಗಿ ಅರ್ಜಿದಾರರ ವಿರುದ್ಧದ ಮುಂದಿನ ತನಿಖೆಗೆ ತಡೆ ನೀಡಬೇಕು ಎಂದು ಕೋರಿದರು.
ಈ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಈ ಹಂತದಲ್ಲಿ ಎಸಿಬಿ ತನಿಖೆಗೆ ಯಾವುದೇ ಮಧ್ಯಂತರ ಆದೇಶ ನೀಡುವುದಿಲ್ಲ. ಅರ್ಜಿದಾರರು ತನಿಖೆ ಎದುರಿಸಲಿ. ತನಿಖಾಧಿಕಾರಿಗಳು ಬಲವಂತದ ಕ್ರಮಕ್ಕೆ ಮುಂದಾದರೆ ಅರ್ಜಿದಾರರು ಜಾಮೀನು ಪಡೆಯಬಹುದು. ಆದರೆ, ಸದ್ಯ ತನಿಖೆಗೆ ತಡೆ ನೀಡಲಾಗದು ಎಂದು ನುಡಿದರು.
ಹೊರಟ್ಟಿ ವಿರುದ್ಧದ ಜಾತಿ ನಿಂದನೆ ಕೇಸ್ ತನಿಖೆ ವರದಿ ಹೈಕೋರ್ಟ್‌ಗೆ
ಆನೇಕಲ್ ತಾಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯದಲ್ಲಿ ಅನುಕೂಲಕರ ಆದೇಶ ನೀಡಲು ಬೇಗೂರು ನಿವಾಸಿ ಅಜಂ ಪಾಷಾ ಎಂಬುವವರಿಂದ ಜಿಲ್ಲಾಧಿಕಾರಿ ಮಂಜುನಾಥ್ .5 ಲಕ್ಷ ಲಂಚ ಪಡೆದ ಆರೋಪ ಸಂಬಂಧ ಎಸಿಬಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದೆ. ತಮ್ಮ ವಿರುದ್ಧದ ಎಫ್‌ಐಆರ್ ಹಾಗೂ ಎಸಿಬಿ ತನಿಖೆ ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.