ಮಂಡ್ಯ(ಜ.07): ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಿಲ್ಲಿಸಿರುವ ಬಗ್ಗೆ ಇದೀಗ ಸ್ಥಳೀಯರಿಂದ ಆರೋಪ ವ್ಯಕ್ತವಾಗಿದೆ. ದಿನಗೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಜನರ ಹೊಟ್ಟೆಗೆ ಪೆಟ್ಟು ಬಿದ್ದಿದ್ದು, ಈ ಬಗ್ಗೆ ಕೂಲಿ ಕಾಮರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಣಿಗಾರಿಕೆ ನಿಷೇಧ ಹಿನ್ನಲೆ ಕಲ್ಲುಕುಟಿಕರಿಂದ ಪ್ರತಿಭಟನೆ ನಡೆದಿದ್ದು, ಬೇಬಿಬೆಟ್ಟದ ತಪ್ಪಲು ಕಾವೇರಿ ಪುರ ಗ್ರಾಮದಲ್ಲಿ ಪ್ರತಿಭಟನೆ ನಡೆದಿದೆ. ಬೇಬಿಬೆಟ್ಟದಲ್ಲಿ ಗಣಿಗಾರಿಕೆ ನಿಷೇಧಿಸಿದ್ದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇಬಿ ಬೆಟ್ಟದಲ್ಲಿ ಇಂದಿನಿಂದಲೇ ಗಣಿಗಾರಿಕೆ ನಿಷೇಧ: ಆದೇಶ

ಸಾರ್ವಜನಿಕರು, ಮಠಾಧೀಶರು,ಹಲವು ಹೋರಾಟಗಾರರ ದೂರು ಆಧರಿಸಿ ಗಣಿಗಾರಿಕೆಗೆ ಮಂಡ್ಯ ಜಿಲ್ಲಾಡಳಿತ ಬ್ರೇಕ್ ಹಾಕಿತ್ತು. ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆಗೆ ತೊಂದರೆಯಿದೆ. ರಾಮಯೋಗೀಶ್ವರ ಮಠದಲ್ಲಿ ನಿರ್ಮಾಣವಾಗ್ತಿರುವ ಲಿಂಗೈಕ ಸದಾಶಿವ ಸ್ವಾಮೀಜಿಯವರ ಗದ್ದುಗೆ ಬಿರುಕು ಬಿಟ್ಟಿದೆ ಎಂದು ದೂರು ಬಂದಿತ್ತು.

ಬೇಬಿಬೆಟ್ಟದಲ್ಲಿರುವ ರಾಮಯೋಗೀಶ್ವರ ಮಠದ ಕಿರಿಯ ಶ್ರೀ ಗುರು ಸಿದ್ದೇಶ್ವರ ಸ್ವಾಮೀಜಿ ಗಣಿಗಾರಿಕೆಯಿಂದ ತೊಂದರೆಯಾಗ್ತಿದೆ ಎಂದು ಆರೋಪ ಮಾಡಿದ್ದರು. ಡಿಸಿ ಆದೇಶದಿಂದ ಬೇಬಿಬೆಟ್ಟದಲ್ಲಿ ಗಣಿಗಾರಿಕೆ ಸ್ತಬ್ಧವಾಗಿದೆ.

ಕನ್ನಂಬಾಡಿಯ ಭದ್ರತೆಗೆ ಆತಂಕ : ಬಿತ್ತು ಬೀಗ ಮುದ್ರೆ

ಗಣಿಗಾರಿಕೆ ನಿಂತಿದ್ದಕ್ಕೆ ಬೀದಿಗಿಳಿದ ಕಲ್ಲುಕುಟಿಕರು ಗಣಿಗಾರಿಕೆ ನಿಷೇಧವಾಗಿದ್ದಕ್ಕೆ ನಮ್ಮ ಜೀವನ ಬೀದಿಪಾಲಾಗಿದೆ ಎಂದು ಆರೋಪಿಸಿದ್ದಾರೆ. ಬ್ಲಾಸ್ಟಿಂಗ್, ಕ್ರಷಿಂಗ್ ಮಾಡುವವರ ವಿರುದ್ಧ ಕ್ರಮಗೈಗೊಳ್ಳಲಿ. ನಾವು ಕೈಕೂಲಿ ಮೂಲಕ ಜೀವನ ನಡೆಸುತ್ತಿದ್ದೇವೆ. ಗಣಿಗಾರಿಕೆ ನಿರ್ಬಂಧದಿಂದ ಜೀವನ ನಡೆಸಲು ಕಷ್ಟವಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ.