ಮಂಡ್ಯ/ಪಾಂಡವಪುರ[ಜ.07]: ಕೆಆರ್‌ಎಸ್‌ ಡ್ಯಾಮ್‌ಗೆ ಸಮೀಪದಲ್ಲಿಯೇ ಇರುವ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದು ವಿವಾದವಾಗಿದ್ದು, ಇದೀಗ ಮಂಗಳವಾರದಿಂದ ಗಣಿಗಾರಿಕೆಯನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

"

ಇದಕ್ಕೂ ಹಿಂದೆ ಕೂಡ ಜಿಲ್ಲಾಡಳಿತ ಈ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಗಣಿಗಾರಿಕೆಗೆ ಕಡಿವಾಣ ಹಾಕಲು ಮುಂದಾಗಿತ್ತು. ಆದರೆ, ಗಣಿ ಮಾಲಿಕರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದು ಗಣಿಗಾರಿಕೆ ಮುಂದುವರಿಸಿದ್ದರು. ಇದೀಗ ಮತ್ತಷ್ಟುಕಠಿಣ ನಿರ್ಧಾರಕ್ಕೆ ಮುಂದಾಗಿರುವ ಜಿಲ್ಲಾಡಳಿತ ಮಂಗಳವಾರದಿಂದ ಕೆಆರ್‌ಎಸ್‌ ವ್ಯಾಪ್ತಿಯ 5 ಕಿ.ಮೀ. ಅಂತರದಲ್ಲಿ ಗಣಿಗಾರಿಕೆ ನಿಷೇಧಿಸಲಾಗಿದೆ ಎಂದು ಆದೇಶ ಹೊರಡಿಸಿದೆ. ಹೀಗಾಗಿ ಬೇಬಿ ಬೆಟ್ಟಿ5 ಕಿ.ಮೀ. ವ್ಯಾಪ್ತಿಯ ಒಳಗಡೆ ಬರುವುದರಿಂದ ಗಣಿಗಾರಿಕೆಗೆ ತಡೆ ಬೀಳಲಿದೆ.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಸೋಮವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ರೈತರು, ಪ್ರಗತಿಪರರು, ಮಠಾಧೀಶರು ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ಭಾರೀ ಗಂಡಾಂತರ ಆಗಲಿದೆ ಎಂಬ ಆತಂಕದ ದೂರುಗಳು ಬರುತ್ತಲೇ ಇವೆ. ಹೀಗಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮತ್ತೆ ಗಣಿಗಾರಿಕೆ ಪುನರಾರಂಭಿಸಿದರೆ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಸ್ವಾಮೀಜಿಗೆ ಬೆದರಿಕೆ:

ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ನಡೆಸುವವರ ವಿರುದ್ಧ ತಾವು ದನಿ ಎತ್ತಿದ್ದಕ್ಕೆ ಗಣಿ ಮಾಲಿಕರು ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ರಾಮಯೋಗೇಶ್ವರ ಮಠದ ಶ್ರೀಗಳು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಗಣಿ ಮಾಲಿಕರ ಸಂಘ ಆಡಿಯೋ ಬಿಡುಗಡೆ ಮಾಡಿ ಗದ್ದುಗೆ ನಿರ್ಮಾಣಕ್ಕೆ ಸಾಮಗ್ರಿಗಳನ್ನು ಕಿರಿಯ ಸ್ವಾಮೀಜಿ ಕೇಳಿದ್ದರು, ಕೊಡದಿದ್ದಕ್ಕೆ ಆರೋಪ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.