ಆರ್ಥಿಕ ಸಮಸ್ಯೆಯಿಂದ ಸಮತೋಲಿತ ಆಹಾರದಿಂದ ಬಡಜನರು ವಂಚಿತರಾಗಬಾರದು ಎಂಬ ಉದ್ದೇಶಕ್ಕಾಗಿ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ಗಳನ್ನು ನಗರದಲ್ಲಿ ಮತ್ತಷ್ಟೂಹೆಚ್ಚಿಸಬೇಕು. ಕಂಪ್ಲಿ ಹಾಗೂ ಕುರುಗೋಡು ತಾಲೂಕಗಳಲ್ಲೂ ಕ್ಯಾಂಟೀನ್‌ಗಳನ್ನು ಆರಂಭಿಸಬೇಕು ಎಂಬ ಕೂಗು ಕೇಳಿ ಬಂದಿದೆ.

ಕೆ.ಎಂ. ಮಂಜುನಾಥ್‌

ಬಳ್ಳಾರಿ (ಮೇ.31) : ಆರ್ಥಿಕ ಸಮಸ್ಯೆಯಿಂದ ಸಮತೋಲಿತ ಆಹಾರದಿಂದ ಬಡಜನರು ವಂಚಿತರಾಗಬಾರದು ಎಂಬ ಉದ್ದೇಶಕ್ಕಾಗಿ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ಗಳನ್ನು ನಗರದಲ್ಲಿ ಮತ್ತಷ್ಟೂಹೆಚ್ಚಿಸಬೇಕು. ಕಂಪ್ಲಿ ಹಾಗೂ ಕುರುಗೋಡು ತಾಲೂಕಗಳಲ್ಲೂ ಕ್ಯಾಂಟೀನ್‌ಗಳನ್ನು ಆರಂಭಿಸಬೇಕು ಎಂಬ ಕೂಗು ಕೇಳಿ ಬಂದಿದೆ.

ಬಳ್ಳಾರಿ ನಗರದ ವಿಮ್ಸ್‌ ಆಸ್ಪತ್ರೆ(VIMS Hospital) ಬಳಿ, ಜಿಲ್ಲಾ ಸರ್ಕಾರಿ ಆಸ್ಪತ್ರೆ, ಮೋತಿ ವೃತ್ತ, ಎಪಿಎಂಸಿ ಬಳಿ ಸೇರಿದಂತೆ 5 ಕಡೆ ಕ್ಯಾಂಟೀನ್‌ಗಳನ್ನು ಶುರು ಮಾಡಲಾಗಿದೆ. ಇಲ್ಲಿ ನಿತ್ಯ ಬೆಳಗ್ಗೆ ಉಪಾಹಾರ ಹಾಗೂ ಮಧ್ಯಾಹ್ನ ಊಟ ನೀಡಲಾಗುತ್ತಿದೆ. ಆದರೆ, ಇದು ಸಾಲದು. ನಗರದ ವಿವಿಧೆಡೆಗಳಲ್ಲಿ ಮತ್ತಷ್ಟುಕ್ಯಾಂಟೀನ್‌ಗಳನ್ನು ಆರಂಭಿಸಬೇಕು. ಪ್ರಮುಖವಾಗಿ ಸರ್ಕಾರಿ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳ ಬಳಿ, ಹೆಚ್ಚು ಜನ ಓಡಾಟ ಇರುವ ಬೆಂಗಳೂರು ರಸ್ತೆ, ಸಂಗನಕಲ್ಲು ರಸ್ತೆ, ಜಿಲ್ಲಾಧಿಕಾರಿ ಕಚೇರಿ ಬಳಿ ಕ್ಯಾಂಟೀನ್‌ಗಳನ್ನು ಆರಂಭಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಹಾವೇರಿ: ಮೊದಲಿನಷ್ಟು ರುಚಿ ಇಲ್ಲಾರೀ', ಇಂದಿರಾ ಕ್ಯಾಂಟಿನ್‌ ಶುರುವಿದ್ದರೂ ಅತ್ತ ಸುಳಿಯುತ್ತಿಲ್ಲ ಮಂದಿ!

ಸದ್ಯ ಬಳ್ಳಾರಿ ಮಹಾನಗರದಲ್ಲಿ 5 ಕ್ಯಾಂಟೀನ್‌ಗಳು ಸೇರಿದಂತೆ ಸಿರುಗುಪ್ಪ ಹಾಗೂ ಸಂಡೂರು ತಾಲೂಕು ಕೇಂದ್ರಗಳಲ್ಲಿ ತಲಾ ಒಂದು ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. ಕಂಪ್ಲಿ ಹಾಗೂ ಕುರುಗೋಡು ತಾಲೂಕು ಕೇಂದ್ರಗಳಲ್ಲಿ ಇನ್ನು ಶುರುವಾಗಿಲ್ಲ. ಸಂಡೂರು ಹಾಗೂ ಸಿರುಗುಪ್ಪದಲ್ಲಿ ಕ್ಯಾಂಟೀನ್‌ಗಳ ಸಂಖ್ಯೆ ಹೆಚ್ಚಳ ಮಾಡಬೇಕು ಎಂಬ ಕೂಗು ಈ ಹಿಂದಿನಿಂದಲೂ ಕೇಳಿ ಬಂದಿದ್ದು, ಈ ಎರಡು ತಾಲೂಕು ಕೇಂದ್ರಗಳಲ್ಲಿ ತಲಾ ಐದು ಕ್ಯಾಂಟೀನ್‌ಗಳನ್ನು ಆರಂಭಿಸಿದರೆ ಅನುಕೂಲವಾಗುತ್ತದೆ.

ರಾತ್ರಿ ಊಟ ತಾತ್ಕಾಲಿಕ ಬಂದ್‌:

ಬೆಳಗ್ಗೆ ಉಪಹಾರಕ್ಕೆ ಇಡ್ಲಿ, ಪುಳಿಯೋಗರೆ, ಖಾರಾಬಾತ್‌, ಪೊಂಗಲ್‌, ರವಾ ಕಿಚಡಿ, ಚಿತ್ರಾನ್ನ, ವಾಂಗಿಬಾತ್‌, ಕೇಸರಿಬಾತ್‌, ಚಿತ್ರಾನ್ನ ನೀಡಲಾಗುತ್ತಿದ್ದು, ಉಪಾಹಾರಕ್ಕೆ .5 ನಿಗದಿ ಮಾಡಲಾಗಿದೆ. ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ .10 ನಿಗದಿ ಮಾಡಲಾಗಿದ್ದು, ಅನ್ನ, ಸಾಂಬಾರ್‌, ಮೊಸರನ್ನ, ಬಿಸಿಬೇಳೆಬಾತ್‌ ಅಥವಾ ಮೊಸರನ್ನ ನೀಡಲಾಗುತ್ತಿದೆ.

ಗ್ರಾಹಕರು ಇಲ್ಲ ಎಂಬ ಕಾರಣಕ್ಕಾಗಿ ಕಳೆದ ನಾಲ್ಕು ತಿಂಗಳಿನಿಂದ ರಾತ್ರಿ ಊಟ ಬಂದ್‌ ಮಾಡಲಾಗಿದೆ. ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಾತ್ರಿ ಜನರು ಊಟಕ್ಕೆ ಬರುತ್ತಿಲ್ಲವಾದ್ದರಿಂದ ಸದ್ಯಕ್ಕೆ ಬಂದ್‌ ಮಾಡಲಾಗಿದೆ. ಊಟದ ದರ ಇನ್ನು ಪರಿಷ್ಕರಣೆ ಮಾಡಲಾಗಿಲ್ಲ. ಹೀಗಾಗಿ ಈ ಹಿಂದಿನ ದರದಂತೆ ಉಪಾಹಾರ ಹಾಗೂ ಊಟ ನೀಡಲಾಗುತ್ತಿದೆ ಎಂದು ಇಂದಿರಾ ಕ್ಯಾಂಟೀನ್‌ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ಅಧಿಕಾರಿ ಮನ್ಸೂರು ಅಲಿ ತಿಳಿಸಿದ್ದಾರೆ.

ಪಾವತಿಯಾಗದ ಬಾಕಿ ಮೊತ್ತ

ಇಂದಿರಾ ಕ್ಯಾಂಟೀನ್‌ ಯೊಜನೆಯನ್ನು ಗುತ್ತಿಗೆ ಪಡೆದು ನಿತ್ಯ ಆಹಾರ ಸರಬರಾಜು ಮಾಡುವ ಗುತ್ತಿಗೆದಾರರಿಗೆ ಸಕಾಲಕ್ಕೆ ಹಣ ಪಾವತಿಯಾಗುತ್ತಿಲ್ಲ. ಇದು ಗುತ್ತಿಗೆದಾರರನ್ನು ತೀವ್ರ ಸಂಕಷ್ಟಕ್ಕೀಡು ಮಾಡಿದೆ. ಬಳ್ಳಾರಿಯಿಂದ .385.49 ಲಕ್ಷ, ಸಿರುಗುಪ್ಪ .42.82 ಲಕ್ಷ ಹಾಗೂ ಸಂಡೂರಿನ .26.96 ಸೇರಿದಂತೆ .455.27 ಲಕ್ಷಗಳನ್ನು ಸರ್ಕಾರ ಪಾವತಿ ಮಾಡದೆ ಬಾಕಿ ಇಟ್ಟುಕೊಂಡಿತ್ತು. ಕೆಲ ದಿನಗಳ ಹಿಂದೆಯಷ್ಟೇ ಒಂದಷ್ಟುಪಾವತಿ ಮಾಡಿದ್ದು, ಇನ್ನು .318 ಲಕ್ಷವನ್ನು ಪಾವತಿ ಮಾಡಬೇಕಾಗಿದೆ. ಟೆಂಡರ್‌ನ ಷರತ್ತಿನ್ವಯ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಮಾಡಲಾಗುತ್ತಿದೆ. ಉಳಿದ ಬಾಕಿ ಹಣ ಪಾವತಿಗೆ ಸಂಬಂಧಿಸಿದಂತೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶಾಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಇಂದಿರಾ ಕ್ಯಾಂಟೀನ್‌ ಹಿಂದಿನಂತೆ ಸೇವೆ ಸ್ವಾಗತಾರ್ಹ: ರೂಪೇಶ್‌ ಕೃಷ್ಣಯ್ಯ

ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಹೆಚ್ಚಿಸುವ ಸಂಬಂಧಿಸಿದಂತೆ ಈವರೆಗೆ ಯಾವುದೇ ಚರ್ಚೆ ನಡೆದಿಲ್ಲ. ಸರ್ಕಾರ ನೀಡುವ ನಿರ್ದೇಶನದಂತೆಯೆ ಮುಂದಿನ ಹಂತದ ಕ್ರಮ ಕೈಗೊಳ್ಳುತ್ತೇವೆ. ಈವರೆಗೆ ಸರ್ಕಾರ ಮಟ್ಟದಲ್ಲೂ ಇಂದಿರಾ ಕ್ಯಾಂಟೀನ್‌ಗಳ ಚರ್ಚೆ ನಡೆದಿಲ್ಲ. ಸರ್ಕಾರ ಸೂಚನೆಯ ಬಳಿಕವೇ ನಾವು ಕ್ರಮ ಜರುಗಿಸಲು ಸಾಧ್ಯವಾಗುತ್ತದೆ.

ಪವನಕುಮಾರ ಮಾಲಪಾಟಿ, ಜಿಲ್ಲಾಧಿಕಾರಿ, ಬಳ್ಳಾರಿ ಜಿಲ್ಲೆ

ಇಂದಿರಾ ಕ್ಯಾಂಟೀನ್‌ನಿಂದ ಬಡವರಿಗೆ ಅನುಕೂಲವಾಗಿದೆ. ದರ ಹೆಚ್ಚಳ ಮಾಡಿದರೆ ಕಷ್ಟವಾಗುತ್ತದೆ. ಈ ಹಿಂದೆ ಇದ್ದಂತೆಯೇ .5ಕ್ಕೆ ಟಿಫಿನ್‌, .10ಕ್ಕೆ ಊಟ ಕೊಡಲಿ. ನಾನು ಕ್ಯಾಂಟೀನ್‌ನಲ್ಲಿಯೇ ಮಧ್ಯಾಹ್ನ ಊಟ ಮಾಡ್ತಾ ಇದ್ದೀನಿ.

ರಾಮಕ್ಕ, ಬೀದಿಬದಿಯ ವ್ಯಾಪಾರಿ, ಬಳ್ಳಾರಿ

ಬಳ್ಳಾರಿ ನಗರದಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಮತ್ತಷ್ಟೂಆರಂಭಿಸಬೇಕು. ಅತಿ ಹೆಚ್ಚು ವಿದ್ಯಾರ್ಥಿಗಳು ಇರುವ ಕಡೆ ಕ್ಯಾಂಟೀನ್‌ ಶುರು ಮಾಡಿದರೆ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಅದೆಷ್ಟೋ ವಿದ್ಯಾರ್ಥಿಗಳು ಬೆಳಗ್ಗೆ ಟಿಫಿನ್‌ ಮಾಡದೆ ಕಾಲೇಜಿಗೆ ಬರುತ್ತಾರೆ.

ವಿಜಯ್‌, ಪಿಯುಸಿ ವಿದ್ಯಾರ್ಥಿ, ಎಸ್‌ಜಿ, ಕಾಲೇಜು, ಬಳ್ಳಾರಿ