ಮಾರ್ಚ್ 31ರವರೆಗೆ ಅಧಿಕಾರಿಗಳಿಗೆ ರಜೆ ನಿಷಿದ್ಧ
ಮಾರ್ಚ್ 31ರವರೆಗೆ ಅಧಿಕಾರಿಗಳು ಒಂದು ದಿನವೂ ರಜೆ ತೆಗೆದುಕೊಳ್ಳುವಂತಿಲ್ಲ. ನಿಗದಿತ ಅವಧಿಯೊಳಗೆ ಎಲ್ಲಾ ಕಾಮಾಗರಿಗಳನ್ನು ಮುಗಿಸಬೇಕು ಎಂದು ಸೂಚನೆ ನೀಡಲಾಗಿದೆ.
ಶಿವಮೊಗ್ಗ [ಫೆ.28]: ಮಾರ್ಚ್ 31ರವರೆಗೆ ಅಧಿಕಾರಿಗಳು ಭಾನುವಾರ ಹೊರತುಪಡಿಸಿ ಕರ್ತವ್ಯದ ದಿನಗಳಲ್ಲಿ ರಜೆ ಹಾಕುವಂತಿಲ್ಲ. ಕೈಗೆತ್ತಿಕೊಂಡಿರುವ ಕಾಮಗಾರಿ ಮಾರ್ಚ್ 31 ರೊಳಗೆ ಪೂರೈಸಿ, ಅಗತ್ಯ ದಾಖಲೆ ಸಲ್ಲಿಸುವ ಮೂಲಕ ಹಣ ಮಂಜೂರಾತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಸೂಚನೆ ನೀಡಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಚದರವಳ್ಳಿ ಶ್ರೀಧರ್ ಅವರಿಗೆ ನಾಲ್ಕು ಚಕ್ರದ ಬೈಕ್ ವಿತರಣೆ ಮಾಡಿ, ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿ, ಅನೇಕ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹಣವಿದ್ದೂ ಕಾಮಗಾರಿ ಮಾಡದೆ ಹೋದಲ್ಲಿ ಸಂಬಂಧಪಟ್ಟ ಎಂಜಿನಿಯರ್ ಹೊಣೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಗರಸಭೆ ವ್ಯಾಪ್ತಿಯಲ್ಲಿ ಕೊಳವೆಬಾವಿ ತೆರೆಯಲು ಅವಕಾಶ ನೀಡಬೇಡಿ. ಶುದ್ಧವಾದ ಶರಾವತಿ ನೀರು ನಗರಕ್ಕೆ ಬರುತ್ತಿದ್ದು ಅದನ್ನು ನಮ್ಮೂರಿನ ಜನ ಕುಡಿಯಬೇಕು. ಅನಗತ್ಯವಾಗಿ ಬೋರ್‌ವೆಲ್ ಕೊರೆದು ಅಂತರ್ಜಲ ಬತ್ತಿಸಲು ಯಾವುದೆ ಕಾರಣಕ್ಕೂ ಅವಕಾಶ ನೀಡಬೇಡಿ ಎಂದು ಹೇಳಿದರು.
ಅರಣ್ಯಾಧಿಕಾರಿಗಳಿಂದ ತೊಂದರೆ: ಕೆಲವು ಭಾಗಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ರಸ್ತೆ ಸೇರಿ ವಿವಿಧ ಅಭಿವೃದ್ಧಿ ಕಾವಗಾರಿ ಮಾಡಲು ಅಡ್ಡಿಪಡಿಸುತ್ತಿದ್ದಾರೆ. ಪ್ರಮುಖವಾಗಿ ವನ್ಯಜೀವಿ ವಿಭಾಗದ ಉಪ ವಲಯ ಅರಣ್ಯಾಧಿಕಾರಿಗಳು ಅನಗತ್ಯ ತೊಂದರೆ ಕೊಡುತ್ತಿದ್ದಾರೆ. ಇದನ್ನು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗುತ್ತದೆ. ಕೆಲವು ಅರಣ್ಯಾಧಿಕಾರಿಗಳಿಂದ ಹಣವಿದ್ದೂ ಕೆಲಸ ಮಾಡದ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಗಣಪತಿ ಕೆರೆ ಇಕ್ಕೆಲಗಳಲ್ಲಿ ಕೈಗೆತ್ತಿಕೊಂಡಿರುವ ಚಾನಲ್ ಕಾಮಗಾರಿ ತಕ್ಷಣ ಮುಗಿಸಬೇಕು. ಜೊತೆಗೆ ಬಿ.ಎಚ್. ರಸ್ತೆಯ ಪಕ್ಕದಲ್ಲಿ ಬಹತ್ ಧ್ವಜಸ್ತಂಭ ನಿರ್ಮಾಣ ಕಾಲಮಿತಿಯೊಳಗೆ ಮುಗಿಸಿ ಮುಂದಿನ ತಿಂಗಳಿನೊಳಗೆ ಉದ್ಘಾಟಿಸಬೇಕು. ಟ್ಯಾಗೂರ್ ಕಲ್ಚರಲ್ ಕಾಂಪ್ಲೆಕ್ಸ್‌ಗೆ ಸಂಬಂಧಪಟ್ಟ ದಾಖಲೆಗಳನ್ನು ತಕ್ಷಣ ಸಿದ್ಧಪಡಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿವಮೊಗ್ಗ-ಚೆನ್ನೈ ರೈಲು ವಾರಕ್ಕೆರಡು ಬಾರಿ ಸಂಚಾರ..
ಕೆಲವು ಕಡೆಗಳಲ್ಲಿ ಸಿ.ಸಿ. ಕ್ಯಾಮರಾ ಗುಣಮಟ್ಟದ ಮರುಪರಿಶೀಲನೆ ಮಾಡಲು ಸೂಚಿಸಿದ ಶಾಸಕರು, ಬೀದಿದೀಪ ಇಲ್ಲದ ಕಡೆಗಳಲ್ಲಿ ಸಿ.ಸಿ. ಕ್ಯಾಮರಾ ಚಿತ್ರಗಳು ಸರಿಯಾಗಿ ಬರುತ್ತಿಲ್ಲ. ಬೀದಿದೀಪ ಅಳವಡಿಸಲು ನಗರಸಭೆ ಕ್ರಮ ಕೈಗೊಳ್ಳಬೇಕು. ಮಾರ್ಚ್ ಕೊನೆ ವಾರದಲ್ಲಿ ಗಣಪತಿ ಜಾತ್ರೆ ನಡೆಯಲಿದ್ದು, ದೇವಸ್ಥಾನದ ಅಕ್ಕಪಕ್ಕ ಸ್ವಚ್ಛಗೊಳಿಸುವುದು ಸೇರಿ ಜಾತ್ರೆ ಯಶಸ್ವಿಗೊಳಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದರು.
ಮಾ. 10 ಕ್ಕೆ ಆನಂದಪುರ ಮಾರಿಜಾತ್ರೆ ಪ್ರಾರಂಭಗೊಳ್ಳಲಿದೆ. ಅಲ್ಲಿನ ಗಾಣಿಗನ ಕೆರೆ ಸ್ವಚ್ಛಗೊಳಿಸಲು ಸರ್ಕಾರದಿಂದ 40 ಲಕ್ಷ ರು. ಹಣ ತಂದುಕೊಡಲಾಗಿದೆ. ಆದರೆ ಕೆರೆ ಸ್ವಚ್ಛತಾ ಕಾಮಗಾರಿ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಜಾತ್ರೆಯೊಳಗೆ ಕೆರೆ ಸ್ವಚ್ಛಗೊಳಿಸದೆ ಹೋದಲ್ಲಿ ನಿಮ್ಮ ತಲೆದಂಡವಾಗುತ್ತದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.