2 ವರ್ಷದಿಂದ ಒಂದು ಪೈಸೆಯೂ ಅನುದಾನ ಬಂದಿಲ್ಲ: ಡಾ. ಯತೀಂದ್ರ
ನಾವು ಹಲವು ಕಾಮಗಾರಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ| ಶಾಸಕರು ಕೇಳಿದ ಕಾಮಗಾರಿ ಬದಲು ಬೇರೆ ಕಾಮಗಾರಿಗೆ ಅನುದಾನ ನೀಡುತ್ತಿದ್ದಾರೆ| ಹಣ ಬಿಡುಗಡೆ ಮಾಡಲು ಕೋರಿದರೇ ಸರ್ಕಾರ ಬೇಕಾಬಿಟ್ಟಿ ಉತ್ತರ ನೀಡುತ್ತಿದೆ: ಡಾ. ಯತೀಂದ್ರ ಸಿದ್ದರಾಮಯ್ಯ|
ಮೈಸೂರು(ಏ.05): ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದ ಬಂದ ಎರಡು ವರ್ಷಗಳಿಂದ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ನೀಡುತ್ತಿಲ್ಲ. ಎಲ್ಲಾ ಶಾಸಕರದೂ ಇದೇ ಪಾಡಾಗಿದೆ ಎಂದು ಕಾಂಗ್ರೆಸ್ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ವರುಣ ಕ್ಷೇತ್ರಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಒಂದು ಪೈಸೆ ಸಹ ಅನುದಾನ ಬಂದಿಲ್ಲ. ಹೀಗಾಗದರೇ, ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಚರಂಡಿಗಳನ್ನು ನಿರ್ಮಿಸುವುದು ಹೇಗೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
ಸಮ್ಮಿಶ್ರ ಸರ್ಕಾರ ಸಂದರ್ಭದಲ್ಲಿ ವರುಣ ಕ್ಷೇತ್ರಕ್ಕೆ ನಿಗದಿಯಾಗಿದ್ದ 8 ಕೋಟಿ ಅನುದಾನವನ್ನು ವಿಳಂಬ ಮಾಡಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಗೊಳಿಸಿದ್ದಾರೆ. ನಾವು ಹಲವು ಕಾಮಗಾರಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆದರೆ, ಪ್ರಸ್ತಾವನೆ ಇಲ್ಲದೇ 42 ಕೋಟಿ ಅನುದಾನವನ್ನು ವರುಣ ಕ್ಷೇತ್ರಕ್ಕೆ ಬಿಡುಗಡೆ ಮಾಡಿ, ಕಾಮಗಾರಿ ಆರಂಭಿಸಲು ಮುಂದಾಗಿದ್ದರು. ಇದರ ವಿರುದ್ಧ ಧ್ವನಿ ಎತ್ತಿದ್ದರಿಂದ ಕಾಮಗಾರಿ ನಿಲ್ಲಿಸಿದ್ದಾರೆ. ಶಾಸಕರು ಕೇಳಿದ ಕಾಮಗಾರಿ ಬದಲು ಬೇರೆ ಕಾಮಗಾರಿಗೆ ಅನುದಾನ ನೀಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಕೆಲವರ ನಂಬಿ ಬಿಎಸ್‌ವೈ ಬಿಜೆಪಿ ಬಿಟ್ಟಿದ್ದು : ಪಶ್ಚಾತ್ತಾಪವಾಗಿ ವಾಪಸ್
ವರುಣ ಕ್ಷೇತ್ರದಲ್ಲಿ 3 ಸಾವಿರಕ್ಕೂ ಹೆಚ್ಚಿನ ಮನೆ ನಿರ್ಮಾಣ ಕಾಮಗಾರಿಗಳನ್ನು ಬ್ಲಾಕ್ ಮಾಡಿದ್ದಾರೆ. ಆನ್ ಬ್ಲಾಕ್ ಮಾಡಿ, ಹಣ ಬಿಡುಗಡೆ ಮಾಡಲು ಕೋರಿದರೇ ಸರ್ಕಾರ ಬೇಕಾಬಿಟ್ಟಿ ಉತ್ತರ ನೀಡುತ್ತಿದೆ. ಸರ್ಕಾರದಿಂದ ಅನುದಾನ ಬರುತ್ತೇ ಎಂದು ಈಗಾಗಲೇ ಅರ್ಧ ಮನೆ ಕಟ್ಟಿಸಿಕೊಂಡವರ ಪಾಡೇನು ಎಂದು ಅವರು ಪ್ರಶ್ನಿಸಿದರು.
ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಅರ್ಜಿ ಸಲ್ಲಿಸಿದ್ದರೂ ಈ ಸಾಲಿನ ಸಾಲ ಸೌಲಭ್ಯ ಇನ್ನೂ ನೀಡಿಲ್ಲ. ಯಡಿಯೂರಪ್ಪ ಪುತ್ರ ವಿಜಯೇಂದ್ರ ವರುಣ ಕ್ಷೇತ್ರಕ್ಕೆ ಬರುತ್ತಾರೆಂದು ಹೆಚ್ಚಿನ ಅನುದಾನ ಯಾವುದು ಬಂದಿಲ್ಲ. ಲೋಕೋಪಯೋಗಿ ಇಲಾಖೆಯಿಂದ ಮಾತ್ರ ಕೆಲವು ಅನುದಾನ ಬಿಡುಗಡೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಶಾಸಕ ಎಚ್.ಪಿ. ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ, ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು ಇದ್ದರು.