ಮೈಸೂರು (ಏ.03):  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೆಲವರನ್ನು ನಂಬಿದ್ದೇ ಈ ಹಿಂದೆ ಕರ್ನಾಟಕ ಜನತಾ ಪಕ್ಷ(ಕೆಜೆಪಿ) ಕಟ್ಟಲು ಕಾರಣವಾಗಿದ್ದು, ಈಗಲೂ ಕೆಲವರ ಮಾತು ನಂಬಿ ಇಂತಹ ಘಟನೆ ಆಗಿರಬೇಕು. ಆಗ ಕೆಜೆಪಿ ಆರಂಭಿಸಿ ಪಶ್ಚಾತ್ತಾಪ ಪಟ್ಟಾಗ ಮತ್ತೆ ಬಿಜೆಪಿಗೆ ಸೇರಲು ಅವರ ಪುತ್ರ ರಾಘವೇಂದ್ರ ಮೂಲಕ ಪ್ರಯತ್ನಿಸಿದ್ದರು. ಆಗ ವರಿಷ್ಠರ ಜೊತೆ ಮಾತನಾಡಿ ಪಕ್ಷಕ್ಕೆ ಬರಮಾಡಿಕೊಂಡಿದ್ದೆವು ಎಂದು ಸಚಿವ ಈಶ್ವರಪ್ಪ ಬಹಿರಂಗಪಡಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಬಹಿರಂಗಪಡಿಸಿದ ಅವರು, ತಮ್ಮ ಮತ್ತು ಯಡಿಯೂರಪ್ಪ ಅವರ ದೀರ್ಘಕಾಲದ ಒಡನಾಟವನ್ನು ಸ್ಮರಿಸಿಕೊಂಡರು.

ಕೆಜೆಪಿ ಆರಂಭಿಸಬೇಕು ಅಂದಾಗ ನಾನು ಬೇಡ ಅಂದೆ. ಆಗ ನಾವು ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದೆವು. ನಾವಿಬ್ಬರೂ ಬಿಸಿನೆಸ್‌ ಪಾಟ್ರ್ನರ್‌ ಆಗಿದ್ದೆವು. ಅವರು ಪಕ್ಷದಿಂದಲೇ ಹೊರ ಹೋಗುವಾಗಲೇ ನೋಡಿ ಹೋಗಿ, ವಾಪಸ್‌ ಬರುವುದು ಎಷ್ಟುಸಮಸ್ಯೆ ಅಂತ ಹೇಳಿದ್ದೆ. ಅವರು ಕೆಲವರನ್ನು ತುಂಬಾ ನಂಬಿದ್ದೇ ಅಂದು ಕೆಜೆಪಿ ಕಟ್ಟಲು ಕಾರಣ ಎಂದರು.

'ಸಿಡಿ ಬಗ್ಗೆ ಮಾತನಾಡಲು ನನಗೆ ವಾಕರಿಕೆ ಬರುತ್ತದೆ. ನನಗೆ ಯಾವುದೇ ಆಸಕ್ತಿಯಿಲ್ಲ' .

ಯಡಿಯೂರಪ್ಪ ಅವರು ಮತ್ತೆ ಬಿಜೆಪಿಗೆ ಬರಲು ಅವರ ಮಗ ರಾಘವೇಂದ್ರ ಮೂಲಕ ಸಂಪರ್ಕಿಸಿದ್ದರು. ಅಂದು ಲೇಹರ್‌ ಸಿಂಗ್‌ ಅವರ ಮನೆಯಲ್ಲಿ ನಾನು, ಯಡಿಯೂರಪ್ಪ ಮತ್ತು ಡಿ.ಎಚ್‌.ಶಂಕರಮೂರ್ತಿ ಮೂವರೇ ಮಾತನಾಡಿದ್ದೆವು. ಅಂದು ಕೆಜೆಪಿ ಬಗ್ಗೆ ನೀವು ಮಾಡಿದ್ದು ಸರೀನಾ ಅಂತ ಪ್ರಶ್ನಿಸಿದೆ. ಕೆಲವರ ಹೇಳಿಕೆ ಮಾತು ಕೇಳಿ ಪಕ್ಷ ಕಟ್ಟಿದೆ. ಆದರೆ ಅವರು ನನ್ನ ಜೊತೆ ಈಗ ಇಲ್ಲ ಅಂತ ಬೇಸರವಾಗಿ ಹೇಳಿದ್ದರು. ಅವರು ಅಂದು ಹೇಳಿದ ಪದಗಳನ್ನು ನಾನು ಇಲ್ಲಿ ಹೇಳುವುದಕ್ಕೆ ಆಗುವುದಿಲ್ಲ. ಬೇರೆಯವರ ಮಾತು ಕೇಳಿ ಹೀಗಾಯಿತು ಅಂತ ಅವರೇ ಒಪ್ಪಿಕೊಂಡಿದ್ದರು. ಆಗ ಪಕ್ಷದ ವರಿಷ್ಠರ ಜೊತೆ ಮಾತನಾಡಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದೆವು ಎಂದರು.

ಈಗ ನನ್ನ ಮತ್ತು ಯಡಿಯೂರಪ್ಪ ಇಬ್ಬರ ನಡುವೆ ಕೆಲವು ವಿಷಯಗಳಿಗೆ ಭಿನ್ನಾಭಿಪ್ರಾಯ ಇರಬಹುದು. ಆದರೆ ನಾವಿಬ್ಬರೂ ಅನ್ಯೋನ್ಯವಾಗಿದ್ದೇವೆ ಎಂದು ತಿಳಿಸಿದರು.