ಈ ಕ್ಯಾಂಟೀನ್‌ನಲ್ಲಿ ತಿನಿಸಿಗೆ ಬೆಲೆ ನಿಗದಿ ಇಲ್ಲ: ಇಚ್ಛಾನುಸಾರ ಪಾವತಿ, ಮೋದಿ ಅಭಿಮಾನಿಯಿಂದ ವಿನೂತನ ಸೇವೆ..!

ಕುಟ್ಯಣ್ಣ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿ. ಹತ್ತು ವರ್ಷಗಳ ಹಿಂದೆ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಅವರು ಈ ಮಾದರಿಯ ಕ್ಯಾಂಟೀನ್‌ ನಡೆಸುತ್ತಿದ್ದು, ಅವರ ಕ್ಯಾಂಟೀನಿಗೂ ಈಗ ಹತ್ತರ ಹರೆಯ.

No Fixed Price for Food in the Canteen at Mangaluru grg

ಮಂಗಳೂರು(ಫೆ.21):  ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳು ತಮ್ಮ ಅಭಿಮಾನವನ್ನು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸುವುದನ್ನು ಸಾಮಾನ್ಯ. ಕಾಸರಗೋಡು ತಾಲೂಕಿನ ಮೋದಿ ಅಭಿಮಾನಿಯೊಬ್ಬರು ತಮ್ಮ ಕ್ಯಾಂಟೀನಿನಲ್ಲಿ ಗ್ರಾಹಕರು ತಿನ್ನುವ ಆಹಾರಕ್ಕೆ ಯಾವುದೇ ದರ ವಿಧಿಸದೆ, ನೀಡಿದ ದುಡ್ಡು ಸ್ವೀಕರಿಸಿ ಉದ್ದಿಮೆ ನಡೆಸಿ ಗಮನ ಸೆಳೆದಿದ್ದಾರೆ.

ಕಾಸರಗೋಡು ತಾಲೂಕಿನ ಕುಂಬ್ಡಾಜೆ ಸಮೀಪದ ಅಗಲ್ಪಾಡಿಯ ಉಪ್ಪಂಗಳ ಕುಟ್ಯಣ್ಣ ಈ ಪ್ರಯೋಗ ಮಾಡಿದವರು. ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿ ವರ್ಷ ಐದು ದಿನಗಳ ವರ್ಷಾವಧಿ ಜಾತ್ರೆ ಜರಗುತ್ತದೆ. ಈ ಸಂದರ್ಭ ಕುಟ್ಯಣ್ಣ ವಿಶಿಷ್ಟ ಕ್ಯಾಂಟೀನ್‌ ನಡೆಸುತ್ತಾರೆ. ಈ ವರ್ಷವೂ ಅವರು ಕ್ಯಾಂಟೀನ್‌ ತೆರೆದಿದ್ದು, ಜಾತ್ರೆ ಮಂಗಳವಾರ ಸಂಪನ್ನಗೊಂಡಿದೆ. ಕುಟ್ಯಣ್ಣ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿ. ಹತ್ತು ವರ್ಷಗಳ ಹಿಂದೆ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಅವರು ಈ ಮಾದರಿಯ ಕ್ಯಾಂಟೀನ್‌ ನಡೆಸುತ್ತಿದ್ದು, ಅವರ ಕ್ಯಾಂಟೀನಿಗೂ ಈಗ ಹತ್ತರ ಹರೆಯ.

ಕಾಂಗ್ರೆಸ್‌ ಮುಗಿಸಲು ಬ್ಯಾಂಕ್‌ ಖಾತೆಗಳ ಜಪ್ತಿ: ಖರ್ಗೆ ಆಕ್ರೋಶ

ಹೊಸ ಪ್ರಯೋಗ: 

ಕ್ಯಾಂಟೀನ್ ಆರಂಭಿಸಿದ ಉಪ್ಪಂಗಳ ಕುಟ್ಯಣ್ಣ ಜನರಲ್ಲಿ ಪರಸ್ಪರ ವಿಶ್ವಾಸ ಮೂಡಿಸುವ, ನಂಬಿಕೆಯ ಕಲ್ಪನೆಯನ್ನು ಕ್ಯಾಂಟೀನ್ ನಡೆಸುವುದರ ಮೂಲಕ ತಂದಿದ್ದಾರೆ. ತಾವು ತಿಂಡಿ ತಿಂದ ಅಥವಾ ಕಾಫಿ ಕುಡಿದ ನಂತರ ಸಂತೋಷವಾದರೆ ಮಾತ್ರ ಅಲ್ಲಿಟ್ಟಿರುವ ಒಂದು ಪಾತ್ರೆಯಲ್ಲಿ ಹಣವನ್ನು ಹಾಕಬಹುದು. ಕುಟ್ಯಣ್ಣ ಬಿಲ್‌ ನೀಡುವುದಿಲ್ಲ. ಅಲ್ಲಿ ದರ ಪಟ್ಟಿಯೂ ಹಾಕಲ್ಪಟ್ಟಿಲ್ಲ. ಕ್ಯಾಂಟೀನಿನಲ್ಲಿ ಎಷ್ಟು ಬೇಕಾದರೂ ತಿನ್ನಬಹುದು. ನಂತರ ಅಲ್ಲಿಟ್ಟಿರುವ ಪಾತ್ರೆಗೆ ದುಡ್ಡು ಹಾಕಿದರಾಯಿತು. ದುಡ್ಡು ಹಾಕಬಹುದು ಅಥವಾ ಹಾಕದೆಯೂ ಇರಬಹುದು.

ನಷ್ಟ ಆಗಿಲ್ಲ:

‘ದೇವಿಯ ದಯೆಯಿಂದ ಕ್ಯಾಂಟೀನ್‌ ಚೆನ್ನಾಗಿ ನಡೆಯುತ್ತದೆ. ನನಗಂತೂ ಇದರಿಂದ ನಷ್ಟವಾಗಿಲ್ಲ’ ಎನ್ನುತ್ತಾರೆ ಈ ನಮೋ ಕ್ಯಾಂಟೀನ್‌ನ ವೆಂಕಟರಮಣ ಭಟ್ ಅವರು. 

ಹತ್ತು ವರ್ಷಗಳಿಂದ ಸತತವಾಗಿ ಈ ಕ್ಯಾಂಟೀನ್‌ನ್ನು ಗಮನಿಸಿದ್ದ ಈ ಹೊಸ ಕಲ್ಪನೆ ಬಗ್ಗೆ ಮಾತನಾಡಿದ ಸ್ಥಳೀಯರಾದ ವೇಣು ಶರ್ಮ ಅವರು, ‘ಮನೆ ಒಳಗೆ ಪ್ರತಿ ಕೋಣೆಗೆ ಬೀಗ ಹಾಗೂ ಪರಸ್ಪರ ನಂಬಿಕೆ ಇಲ್ಲದ ಈ ಕಾಲಘಟ್ಟದಲ್ಲಿ ಈ ಕ್ಯಾಂಟೀನ್ ಊರಿನಲ್ಲಿ ಮನೆ ಮಾತಾಗಿದೆ. ಹಾಗೆಯೇ ಊರಿನ ಜನರು ಹಿಂದಿನದ್ದಕ್ಕಿಂತಲೂ ಹೆಚ್ಚಾಗಿ ಹಣವನ್ನು ಹಾಕಿ ಶುಭ ಹಾರೈಸುತಿದ್ದಾರೆ. ಈ ಕಲ್ಪನೆಗೆ ಮೆಚ್ಚುಗೆ ನೀಡುತ್ತಿದ್ದಾರೆ’ ಎನ್ನುತ್ತಾರೆ.

ಅಂದ ಹಾಗೆ ಕುಟ್ಯಣ್ಣ ಅಯೋಧ್ಯೆಯ ಕರಸೇವಕರೂ ಹೌದು. ಫೆ.22ರಂದು ಅವರು ಅಯೋಧ್ಯೆಗೆ ತೆರಳಿ ರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ.

Latest Videos
Follow Us:
Download App:
  • android
  • ios