ಕಾಂಗ್ರೆಸ್ ಮುಗಿಸಲು ಬ್ಯಾಂಕ್ ಖಾತೆಗಳ ಜಪ್ತಿ: ಖರ್ಗೆ ಆಕ್ರೋಶ
ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನದ ಆಶಯಗಳು ಉಳಿಯಬೇಕಾದರೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಹಾಗಾಗಿ ಕಾಂಗ್ರೆಸ್ ಅನ್ನು ಇನ್ನಷ್ಟು ಬಲಗೊಳಿಸಬೇಕು. ಬಿಜೆಪಿ ಸರ್ಕಾರ ಈಗಲೇ ನ್ಯಾಯಾಂಗ, ಇ.ಡಿ, ಐಟಿ ಸೇರಿ ಎಲ್ಲ ಸ್ವಾಯತ್ತ ಸಂಸ್ಥೆಗಳನ್ನೂ ನಿಯಂತ್ರಣ ಮಾಡುತ್ತಿದೆ. ಮುಂಬರುವ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಶಕ್ತಿ ಏನಾದರೂ ಕಡಿಮೆಯಾದರೆ ಮೋದಿ ಸರ್ವಾಧಿಕಾರಿ ಆಗುತ್ತಾರೆ. ಮುಂದೆ ದೇಶದಲ್ಲಿ ಚುನಾವಣೆಯೇ ನಡೆಯಲ್ಲ. ಹೀಗಾಗಿ ಅಂಥವರಿಗೆ ಅಧಿಕಾರ ನೀಡಬೇಡಿ ಎಂದು ಹೇಳಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಮಂಗಳೂರು(ಫೆ.18): ಬಿಜೆಪಿಯವರು ಕಾಂಗ್ರೆಸ್ ಅನ್ನು ಸಂಪೂರ್ಣ ನಿರ್ನಾಮ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ದುಡ್ಡೇ ಇರಬಾರದೆಂದು ನಮ್ಮ ಪಕ್ಷದ ಎಲ್ಲ ಖಾತೆಗಳನ್ನು ಜಪ್ತಿ ಮಾಡಿದರು. ತೀವ್ರ ವಿರೋಧ ಬಂದ ಮೇಲೆ ಬಿಡುಗಡೆ ಮಾಡಿದರು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ನಗರದ ಹೊರವಲಯದ ಅಡ್ಯಾರಿನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಶನಿವಾರ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಆದಾಯ ತೆರಿಗೆ ಇಲಾಖೆಯವರು ಪಕ್ಷದ ಖಾತೆಗಳನ್ನು ಮುಟ್ಟುಗೋಲು ಹಾಕಿದ ಕ್ರಮದ ವಿರುದ್ಧ ತೀವ್ರ ಹರಿಹಾಯ್ದರು. ಕಾಂಗ್ರೆಸ್ ಖಾತೆಗಳನ್ನು ಜಪ್ತಿ ಮಾಡಿದ ಬಿಜೆಪಿ ತಾನು ಮಾತ್ರ ಆರು ಸಾವಿರ ಕೋಟಿ ರು. ಚುನಾವಣಾ ಬಾಂಡ್‌ಗಳನ್ನು ಕಾಳಧನಿಕರಿಂದ ಪಡೆದಿದೆ ಎಂದು ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆಗೆ ಕಪ್ಪು ಪಟ್ಟಿ ಪ್ರದರ್ಶನ ಸಿದ್ಧತೆ: ಬಿಜೆಪಿ ಕಾರ್ಯಕರ್ತರ ಬಂಧನ
ಮೋದಿ ಸರ್ವಾಧಿಕಾರಿ ಆಗ್ತಾರೆ:
ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನದ ಆಶಯಗಳು ಉಳಿಯಬೇಕಾದರೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಹಾಗಾಗಿ ಕಾಂಗ್ರೆಸ್ ಅನ್ನು ಇನ್ನಷ್ಟು ಬಲಗೊಳಿಸಬೇಕು. ಬಿಜೆಪಿ ಸರ್ಕಾರ ಈಗಲೇ ನ್ಯಾಯಾಂಗ, ಇ.ಡಿ, ಐಟಿ ಸೇರಿ ಎಲ್ಲ ಸ್ವಾಯತ್ತ ಸಂಸ್ಥೆಗಳನ್ನೂ ನಿಯಂತ್ರಣ ಮಾಡುತ್ತಿದೆ. ಮುಂಬರುವ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಶಕ್ತಿ ಏನಾದರೂ ಕಡಿಮೆಯಾದರೆ ಮೋದಿ ಸರ್ವಾಧಿಕಾರಿ ಆಗುತ್ತಾರೆ. ಮುಂದೆ ದೇಶದಲ್ಲಿ ಚುನಾವಣೆಯೇ ನಡೆಯಲ್ಲ. ಹೀಗಾಗಿ ಅಂಥವರಿಗೆ ಅಧಿಕಾರ ನೀಡಬೇಡಿ ಎಂದು ಹೇಳಿದರು.
ನಮ್ಮ ಶಕ್ತಿ ನೋಡಿ ಮೋದಿ ಬೈತಾರೆ:
ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮೂಲಕ ಜನರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದರೆ ಮೋದಿ ಗೇಲಿ ಮಾಡ್ತಾರೆ. ನಾನು ಬ್ಯಾಕ್‌ವರ್ಡ್ ಅಂತಾರೆ. ನಾವೇನು ಟಾಟಾ ಬಿರ್ಲಾಗಳಾ? ನಾವೂ ಕಷ್ಟಪಟ್ಟೇ ಗದ್ದುಗೆ ಹಿಡಿದಿದ್ದೇವೆ. ರಾಹುಲ್ ಗಾಂಧಿ ಕುಚ್ ನಹೀ ಎಂದು ಮೋದಿ ಹೇಳುತ್ತಾರೆ. ನಮ್ಮಲ್ಲಿ ಶಕ್ತಿ ಇದೆ ಎನ್ನುವುದು ಗೊತ್ತಾಗಿಯೇ ದಿನಾ ಎದ್ದು ಬೈತಾರೆ ಎಂದು ಖರ್ಗೆ ವ್ಯಂಗ್ಯವಾಡಿದರು.
20 ಸೀಟು ಗೆಲ್ತೇವೆ:
ಜಾತ್ಯತೀತ ಎಂಬ ಹೆಸರಿಟ್ಟುಕೊಂಡ ಪಕ್ಷದ ಎಚ್.ಡಿ.ದೇವೇಗೌಡರು ಈಗ ಮೋದಿ ತೊಡೆ ಮೇಲೆ ಕೂತಿದ್ದಾರೆ. ಒಂದೊಮ್ಮೆ ದೂರುತ್ತಿದ್ದವರು ಈಗ ಮುದ್ದಾಡುತ್ತಿದ್ದಾರೆ. ಅವರು ಏನೇ ಮಾಡಲಿ ನಮ್ಮ ಗ್ಯಾರಂಟಿ ಯೋಜನೆಗಳು, ಬಜೆಟ್ ಅನ್ನು ನೋಡಿದ ಮೇಲೆ ರಾಜ್ಯದಲ್ಲಿ ಕನಿಷ್ಠ 20 ಸೀಟುಗಳನ್ನಾದರೂ ಗೆದ್ದೇ ಗೆಲ್ಲಲಿದ್ದೇವೆ ಎಂಬ ವಿಶ್ವಾಸ ಹುಟ್ಟಿದೆ ಎಂದರು.
ಮೋದಿ ಗ್ಯಾರಂಟಿ ಅಂತಾರೆ:
ನಾವು ಗ್ಯಾರಂಟಿ ಮಾಡಿದ ಮೇಲೆ ಮೋದಿ ಎಚ್ಚರಗೊಂಡಿದ್ದಾರೆ. ನಾನ್ಯಾಕೆ ಕೊಡಬಾರದು ಅಂತ ಶುರು ಮಾಡಿದ್ದಾರೆ. ರಾಜ್ಯದಲ್ಲಿ ಜಾರಿಯಾಗಿರೋದು ಸಿದ್ದರಾಮಯ್ಯ ಗ್ಯಾರಂಟಿ ಎಂದು ನಾವು ಹೇಳುತ್ತಿಲ್ಲ. ಕಾಂಗ್ರೆಸ್ ಗ್ಯಾರಂಟಿ ಎನ್ನುತ್ತೇವೆ. ಆದರೆ ಅವರು ಮಾತ್ರ ಮೋದಿ ಗ್ಯಾರಂಟಿ ಅಂತಾರೆ. ದೇಶ ಇದ್ದರೆ ತಾನೇ ಮೋದಿ ಎಂದು ಖರ್ಗೆ ಟೀಕಿಸಿದರು.
ಕರಾವಳಿ ಜಿಲ್ಲೆಗಳಲ್ಲಿ ಲಕ್ಷಾಂತರ ಜನ ಕಡು ಬಡವರು ಕಾಂಗ್ರೆಸ್‌ನ ಭೂ ಮಸೂದೆ ಕಾನೂನಿನಿಂದ ಭೂ ಮಾಲೀಕರಾಗಿ ಶ್ರೀಮಂತರಾಗಿದ್ದಾರೆ. ಕಾಂಗ್ರೆಸ್ ತಮಗೆ ಮಾಡಿದ ಉಪಕಾರವನ್ನೀಗ ಅವರು ಮರೆತು ಭಗವಾ ಝಂಡಾ ಹಿಡಿದಿದ್ದಾರೆ. ಇಷ್ಟು ಅಗಾಧ ಸಂಖ್ಯೆಯ ಜನರು ಭೂ ಒಡೆಯರಾಗಲು ಮೋದಿ ಏನಾದರೂ ಜಮೀನು ನೀಡಿದ್ರಾ? ಇಲ್ಲದಿದ್ದರೆ ಮೋದಿ ಝಂಡಾ ಹಿಡಿದುಕೊಂಡು ಯಾಕೆ ತಿರುಗಾಡ್ತೀರಿ, ಕರಾವಳಿಯಲ್ಲಿ ನೂರಾರು ಸೇತುವೆಗಳನ್ನು, ದೊಡ್ಡ ದೊಡ್ಡ ಕೈಗಾರಿಕೆಗಳು, ಸಾರ್ವಜನಿಕ ಆಸ್ತಿಗಳನ್ನು ಕಟ್ಟಿದ್ದು ಕಾಂಗ್ರೆಸ್. ನಮ್ಮಿಂದ ಫಲ ಪಡೆದು ನಮ್ಮನ್ನೇ ಮರೆತರೆ ಯಾವ ನ್ಯಾಯ ಎಂದು ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಇದ್ದಿದ್ರೆ ಮನುಸ್ಮೃತಿ ಬರ್ತಿತ್ತು?
ಬಿಜೆಪಿಯವರು ಶ್ರೀಮಂತರ ಪರ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಅವರು ಬಡವರು, ದಲಿತರನ್ನು ತುಳಿಯುವ ಗುರಿ ಇಟ್ಟುಕೊಂಡಿದ್ದಾರೆ. ಅಂಥವರ ಪಕ್ಷಕ್ಕೆ ಮತಹಾಕ್ತೀರಾ ಎಂದು ಪ್ರಶ್ನಿಸಿದ ಖರ್ಗೆ, ಕಾಂಗ್ರೆಸ್ ಇದ್ದ ಕಾರಣ ಸಂವಿಧಾನ ಬಂದ ಮೇಲೆ ಮಹಿಳೆಯರಿಗೆ ಮತದಾನದ ಅಧಿಕಾರ ಸಿಕ್ಕಿದೆ. ನಮ್ಮ ದೇಶದಲ್ಲಿ ಈ ಕಾನೂನು ಜಾರಿ ಮಾಡಿದ ಮೇಲೆ ಇತರ ದೇಶಗಳೂ ಮಹಿಳೆಯರಿಗೆ ಮತದಾನದ ಅಧಿಕಾರ ನೀಡಿವೆ. ಬಿಜೆಪಿಯವರ ತತ್ವದ ಪ್ರಕಾರ ಆಗಿದ್ದರೆ ಎಲ್ಲೆಡೆ ಮನುಸ್ಮೃತಿ ಜಾರಿಯಾಗುತ್ತಿತ್ತು. ಹೆಣ್ಣುಮಕ್ಕಳಿಗೆ ಯಾವುದೇ ಸ್ಥಾನಮಾನ ಸಿಗುತ್ತಿರಲಿಲ್ಲ ಎಂದು ಖರ್ಗೆ ಆರೋಪಿಸಿದರು.
ಪ್ರತಿ ಕುಟುಂಬಕ್ಕೆ ₹5000 ಗ್ಯಾರಂಟಿ: ಡಿಕೆಶಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳಿಂದ ಅನೇಕರ ಮನೆ ದೀಪ ಬೆಳಗುತ್ತಿದೆ. ಅದರ ಉಪಕಾರವನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರು ತೀರಿಸಲಿದ್ದು, ಕನಿಷ್ಠ 20 ಸೀಟುಗಳನ್ನಾದರೂ ನಾವು ರಾಜ್ಯದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭರವಸೆ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ನಡೆದ ಕಾಂಗ್ರೆಸ್‌ನ ರಾಜ್ಯಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದಾಗಿ ಪ್ರತಿ ಕುಟುಂಬ ತಿಂಗಳಿಗೆ 5 ಸಾವಿರ ರು.ಗೂ ಅಧಿಕ ಹಣವನ್ನು ತಮ್ಮ ಜೀವನೋಪಾಯಕ್ಕಾಗಿ ಉಳಿಸಿ, ಬಳಸುತ್ತಿದೆ ಎಂದರು.
ಈಗ ಬಿಜೆಪಿ-ಜೆಡಿಎಸ್ ಎರಡೂ ಪಕ್ಷಗಳು ಜತೆಯಾಗಿವೆ. ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದ ದೇವೇಗೌಡರು ಈಗ ಬಿಜೆಪಿಯತ್ತ ಹೋಗಿದ್ದಾರೆ. ಅವರು ಬೇಕಾದರೆ ತಮ್ಮ ಸಿದ್ಧಾಂತಗಳನ್ನು ಬದಲಾವಣೆ ಮಾಡಿಕೊಳ್ಳಲಿ, ಹೊಂದಾಣಿಕೆ ಮಾಡಿಕೊಳ್ಳಲಿ. ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತ ಮಾತ್ರ ಎಂದೂ ಬದಲಾಗಲ್ಲ. ಎಲ್ಲರನ್ನೂ ಜತೆಗೂಡಿಸಿಕೊಂಡು ಒಟ್ಟಾಗಿ ಹೋಗುವ ಸಿದ್ಧಾಂತವನ್ನು ನಾವು ಉಳಿಸಿಕೊಂಡು ಹೋಗುತ್ತೇವೆ ಎಂದ ಡಿ.ಕೆ.ಶಿವಕುಮಾರ್, ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ. ಉಡುಪಿ- ಚಿಕ್ಕಮಗಳೂರಿನಲ್ಲಿ ಗೆದ್ದಿದ್ದ ಸ್ಥಾನಕ್ಕೆ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಡಿ.ವಿ.ಸದಾನಂದ ಗೌಡರು ರಾಜೀನಾಮೆ ನೀಡಿದ್ದರು. ಆ ಸಂದರ್ಭದಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಸಂಸತ್‌ಗೆ ಕಳುಹಿಸಿದ ಇತಿಹಾಸ ಇದೆ ಎಂದರು.
ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಅಭಿವೃದ್ಧಿಗಾಗಿ 56 ಸಾವಿರ ಕೋಟಿ ರು.ಗಳನ್ನು ನೀಡುತ್ತಿದೆ. ಆದರೂ ಬಜೆಟ್ ವಿರೋಧಿಸಿ ಬಿಜೆಪಿ ಪ್ರತಿಭಟಿಸಿದೆ. ರಾಜ್ಯದಲ್ಲಿ 136 ಕಾಂಗ್ರೆಸ್ ಶಾಸಕರು, ಇಬ್ಬರು ಪಕ್ಷೇತರರು ನಮ್ಮ ಜತೆಗಿದ್ದಾರೆ. ವಿಪಕ್ಷದವರು ಏನೇ ತಂತ್ರ ಮಾಡಲಿ, ಕಾಂಗ್ರೆಸ್ ಸರ್ಕಾರ ಮುಂದಿನ ಐದು ವರ್ಷಪೂರ್ತಿ ಅಧಿಕಾರ ನಡೆಸಲಿದೆ. ನಂತರವೂ ಅಧಿಕಾರಕ್ಕೆ ಬರಲಿದೆ ಎಂದು ಶಿವಕುಮಾರ್ ಭರವಸೆ ವ್ಯಕ್ತಪಡಿಸಿದರು.
370 ಸೀಟ್ ಗೆಲ್ಲಲು ಅಸಾಧ್ಯ: ಪ್ರಧಾನಿಯವರು ಹೇಳುವಂತೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ 370 ಸೀಟು ಗೆಲ್ಲಲು ಸಾಧ್ಯವೇ ಇಲ್ಲ. ಅತ್ತ ರಾಹುಲ್ ಗಾಂಧಿ ದೇಶ ಒಗ್ಗೂಡಿಸುವ ಕೆಲಸ ಮಾಡುತ್ತಿದ್ದರೆ, ಮಹಾತ್ಮಾ ಗಾಂಧಿ, ನೆಹರೂ, ರಾಜೀವ್ ಗಾಂಧಿ ಕುಳಿತ ಜಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಕುಳಿತಿದ್ದಾರೆ. ಅವರ ನಾಯಕತ್ವದಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಮುಂದೆಯೂ ಬರಲಿದೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಝೆಡ್ ಪ್ಲಸ್ ಸೆಕ್ಯೂರಿಟಿ ಕೊಟ್ಟ ಸರ್ಕಾರ
ದೇಶದಲ್ಲಿ ಭಾರತ್ ಜೋಡೋ ಯಾತ್ರೆ ಮೂಲಕ ರಾಹುಲ್ ಗಾಂಧಿ ಜನರ ಮನಸ್ಸನ್ನು ಜೋಡಿಸುವ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲೀಗ ಜನ ಹೊಸ ನಾಯಕತ್ವಕ್ಕೆ ಜನ ಚಿಂತಿಸತೊಡಗಿದ್ದಾರೆ. ವಿರೋಧಿಗಳು ಏನೇ ಮಾಡಲಿ, ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 20 ಸೀಟ್ ಗೆಲ್ಲುವುದರೊಂದಿಗೆ ದೇಶದಲ್ಲಿ ‘ಇಂಡಿಯಾ’ ಒಕ್ಕೂಟ ಸರ್ಕಾರ ರಚನೆ ಮಾಡಲಿದೆ ಎಂದು ಭವಿಷ್ಯ ನುಡಿದರು.
5 ಗ್ಯಾರಂಟಿ ಸೇರಿ ಕೈ ಗಟ್ಟಿಯಾಯ್ತು ಅರಳಿದ ಕಮಲ ಮುದುಡಿತು: ಡಿಕೆಶಿ
ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿದಾಗ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ನಮ್ಮನ್ನು ಯಾವ ರೀತಿಯಾದರೂ ಉಪಯೋಗಿಸಿಕೊಳ್ಳಿ. ನನ್ನನ್ನು ಬಂಡೆ ಎಂದು ಕರೆಯುತ್ತೀರಿ. ಬಂಡೆ ಚಪ್ಪಡಿಯಾಗಲಿ, ಜಲ್ಲಿಯಾಗಲಿ ಎಂದಿದ್ದೆ. ನಂತರ ಐದು ಬೆರಳು ಸೇರಿ ಮುಷ್ಟಿ ಗಟ್ಟಿಯಾಯ್ತು. ಐದು ಗ್ಯಾರಂಟಿ ಸೇರಿ ಕೈ ಗಟ್ಟಿ ಆಯ್ತು. ಇದನ್ನು ನೋಡಿ ಅರಳಿದ ಕಮಲ ಮುದುಡಿ ಹೋಯಿತು. ತೆನೆ ಹೊತ್ತ ಮಹಿಳೆ ತೆನೆ ಎಸೆದು ಬಿಜೆಪಿ ಸೇರಿದಳು. ಕರ್ನಾಟಕ ಸಮೃದ್ಧಿಯಾಯ್ತು, ಪ್ರಗತಿ ಆಯ್ತು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.