ವಸಂತಕುಮಾರ್‌ ಕತಗಾಲ

ಕಾರವಾರ [ಜ.20]:  ಸಾಗರಮಾಲಾ ಯೋಜನೆ ವಿರೋಧಿಸಿ ಹೋರಾಟ ನಡೆಸುತ್ತಿರುವ ಮೀನುಗಾರರು ಕಳೆದ 8 ದಿನಗಳಿಂದ ಮೀನುಗಾರಿಕೆ, ಮೀನು ಮಾರುಕಟ್ಟೆಬಂದ್‌ ಮಾಡಿದ್ದರಿಂದ ಕಾರವಾರದಲ್ಲಿ ಮೀನಿನ ಅಭಾವ ಉಂಟಾಗಿದೆ. ಇದರಿಂದ ಮತ್ಸ್ಯಾಹಾರಿಗಳು ಚಡಪಡಿಸುವಂತಾಗಿದೆ. ಅಷ್ಟೇ ಅಲ್ಲ, ಹೋಟೆಲ್‌ಗಳಲ್ಲಿ ಮೀನನ ಖಾದ್ಯಕ್ಕೂ ಬರ ಬಂದಿದೆ.

ಮೀನುಗಾರರು ಜ.13ರಿಂದ ಮೀನುಗಾರಿಕೆಯನ್ನು ಬಂದ್‌ ಮಾಡಿದ್ದಾರೆ. ಜತೆಗೆ ಮೀನು ಮಾರುಕಟ್ಟೆಯನ್ನೂ ಬಂದ್‌ ಮಾಡಿದ್ದಾರೆ. ಪ್ರತಿಭಟನೆ ನಿರಂತರವಾಗಿ ಮುಂದುವರಿದಿದೆ. ಇದೇ ಕಾರಣಕ್ಕೆ ಮೀನಿಗೆ ಅಭಾವ ಉಂಟಾಗಿದೆ. 

ಕಾರವಾರದ ಬಂಗುಡೆ, ಇಸೋಣ, ಪಾಪ್ಲೇಟ್‌ ಮತ್ತಿತರ ಮೀನಿಗೆ ಎಲ್ಲಿಲ್ಲಡ ಡಿಮ್ಯಾಂಡ್‌. ಇಲ್ಲಿನ ಕೆಲವು ಹೋಟೆಲ್‌ಗಳಿಗೆ ಮೀನಿನ ಖಾದ್ಯ ತಿನ್ನಲೆಂದೆ ಉತ್ತರ ಕರ್ನಾಟಕ, ಗೋವಾದಿಂದಲೂ ಜನರು ಆಗಮಿಸುತ್ತಿದ್ದರು. ಕಾರವಾರಿಗರಿಗಂತೂ ಪ್ರತಿದಿನ ಫ್ರೆಶ್‌ ಮೀನು ಬೇಕೆ ಬೇಕು. ಬೆಳಗ್ಗೆ ಎದ್ದು ಮೀನು ಮಾರುಕಟ್ಟೆಯಿಂದ ಮೀನು ತಂದು ಅಡುಗೆ ಮಾಡುವುದು ಸಂಪ್ರದಾಯ. ಆದರೆ ಸದಾ ಜನರಿಂದ ತುಂಬಿರುತ್ತಿದ್ದ ಮೀನು ಮಾರುಕಟ್ಟೆಕಳೆದ 8 ದಿನಗಳಿಂದ ಬಿಕೋ ಎನ್ನುತ್ತಿದೆ. ಇಡೀ ಕಾರವಾರ ತಾಲೂಕಿನಲ್ಲಿ ಮೀನು ಎಲ್ಲೂ ಸಿಗುತ್ತಿಲ್ಲ.

ಸಾಗರಮಾಲಾ ಯೋಜನೆ ತಾತ್ಕಾಲಿಕ ಸ್ಥಗಿತ...

ಮತ್ಸ್ಯಾಹಾರಿಗಳಲ್ಲಿ ಮೀನಿಲ್ಲದೆ ಚಡಪಡಿಕೆ ಉಂಟಾಗಿದೆ. ಹೋಟೆಲ್‌ಗಳಲ್ಲೂ ಕೆಲವು ದಿನ ಗೋವಾ, ಅಂಕೋಲಾದಿಂದ ತರಲಾಯಿತು. ಈಗ ಅದೂ ಕಷ್ಟವಾಗಿದ್ದರಿಂದ ಕೆಲವೆಡೆ ಫಿಶ್‌ ಫ್ರೈ, ಫಿಶ್‌ ಕರಿಗಳು ಸಿಗುತ್ತಿಲ್ಲ. ದರವೂ ದುಬಾರಿಯಾಗುತ್ತಿದೆ.