ಚುನಾವಣೆಯಲ್ಲಿ ಗೆದ್ದ ಬಳಿಕ ಜಿಲ್ಲೆಯಲ್ಲಿ ಯಾವ ಯಾವ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶವಿದೆ ಎಂಬ ಕುರಿತಂತೆ ಅಧಿಕಾರಿಗಳಿಂದ ಎಚ್.ಡಿ.ಕುಮಾರಸ್ವಾಮಿ ಅವರು ಮಾಹಿತಿ ಪಡೆದುಕೊಂಡಿದ್ದರು. ಅದನ್ನು ಆಧರಿಸಿ ಉದ್ಯೋಗಾಧಾರಿತ ಕೈಗಾರಿಕೆಗಳು ಜಿಲ್ಲೆಗೆ ಬರಬಹುದೆಂಬ ಆಶಾಭಾವನೆ ಜಿಲ್ಲೆಯ ನಿರುದ್ಯೋಗಿಗಳಲ್ಲಿತ್ತು. ಅವರ ಆಶಾಗೋಪುರ ಈಗ ಗಾಳಿಗೋಪುರವಾಗಿದೆ.
ಮಂಡ್ಯ(ಫೆ.02): ಅಭಿವೃದ್ಧಿ ವಿಷಯವಾಗಿ ಕನಸು ಕಾಣುವುದು ಈ ಜಿಲ್ಲೆಯ ಜನರ ಹಣೆಬರಹ. ನಿರಾಸೆ ಎನ್ನುವುದು ಕಟ್ಟಿಟ್ಟಬುತ್ತಿ. ರಾಜಕೀಯವಾಗಿ ಯಾರು ಎಷ್ಟೇ ಉನ್ನತ ಹುದ್ದೆಗೇರಿದರೂ ಜಿಲ್ಲೆಯ ಅಭಿವೃದ್ಧಿಯ ಚಿತ್ರಣವನ್ನು ಬದಲಿಸುವುದಕ್ಕೆ ಇದುವರೆಗೂ ಸಾಧ್ಯವಾಗದಿರುವುದು ದೊಡ್ಡ ದುರಂತ.
ಕೇಂದ್ರದಲ್ಲಿ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯ ಸಂಸದರೂ ಆಗಿದ್ದಾರೆ. ಹಾಗಾಗಿ ಜಿಲ್ಲೆಯೊಳಗೆ ಕೈಗಾರಿಕೆಗಳ ಸ್ಥಾಪನೆಗೆ ಬಜೆಟ್‌ನಲ್ಲಿ ಒಲವು ತೋರಿಸಬಹುದೆಂಬ ಬಗ್ಗೆ ಹೆಚ್ಚಿನ ನಿರೀಕ್ಷೆ ಇತ್ತು. ಆದರೆ, ಬಜೆಟ್ ಪ್ರಕಟವಾದ ನಂತರದಲ್ಲಿ ಸಣ್ಣ ಕೃಷಿ ಆಧಾರಿತ ಕೈಗಾರಿಕೆಯನ್ನು ಪಡೆಯುವ ಅದೃಷ್ಟವೂ ಜಿಲ್ಲೆಯ ಪಾಲಿಗೆ ಇಲ್ಲದೇ ಹೋಯಿತು. ಇದರಿಂದ ಸಾವಿರಾರು ಮಹಿಳೆಯರು, ಯುವಕ-ಯುವತಿಯರು ಉದ್ಯೋಗಕ್ಕಾಗಿ ವಲಸೆ ಹೋಗುವುದು ಅನಿವಾರ್ಯವಾಗಿದೆ.
Union Budget 2025: ₹50,000 ಎಫ್‌ಡಿ ಬಡ್ಡಿಗೆ ಟಿಡಿಎಸ್ ಇಲ್ಲ!
ಚುನಾವಣೆಯಲ್ಲಿ ಗೆದ್ದ ಬಳಿಕ ಜಿಲ್ಲೆಯಲ್ಲಿ ಯಾವ ಯಾವ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶವಿದೆ ಎಂಬ ಕುರಿತಂತೆ ಅಧಿಕಾರಿಗಳಿಂದ ಎಚ್.ಡಿ.ಕುಮಾರಸ್ವಾಮಿ ಅವರು ಮಾಹಿತಿ ಪಡೆದುಕೊಂಡಿದ್ದರು. ಅದನ್ನು ಆಧರಿಸಿ ಉದ್ಯೋಗಾಧಾರಿತ ಕೈಗಾರಿಕೆಗಳು ಜಿಲ್ಲೆಗೆ ಬರಬಹುದೆಂಬ ಆಶಾಭಾವನೆ ಜಿಲ್ಲೆಯ ನಿರುದ್ಯೋಗಿಗಳಲ್ಲಿತ್ತು. ಅವರ ಆಶಾಗೋಪುರ ಈಗ ಗಾಳಿಗೋಪುರವಾಗಿದೆ.
ಕೃಷಿ ಪ್ರಧಾನ ಜಿಲ್ಲೆಯಲ್ಲಿ ಕೃಷಿಯೊಂದಿಗೆ ಬದುಕು ಕಟ್ಟಿಕೊಳ್ಳುವುದಕ್ಕೆ ಕೈಗಾರಿಕೆಗಳೂ ಸ್ಥಾಪನೆಯಾಗುತ್ತಿಲ್ಲ. ಕೈಗಾರಿಕೆಗಳ ಸ್ಥಾಪನೆಯ ಅವಶ್ಯಕತೆ ತೀವ್ರವಾಗಿದ್ದರೂ ಅವುಗಳನ್ನು ಜಿಲ್ಲೆಗೆ ತರುವ ಇಚ್ಛಾಶಕ್ತಿ ಮತ್ತು ಬದ್ಧತೆಯನ್ನು ಯಾರೊಬ್ಬರೂ ಪ್ರದರ್ಶಿಸುತ್ತಿಲ್ಲ. ರಾಜಕೀಯವನ್ನು ಉಸಿರಾಗಿಸಿಕೊಂಡಿರುವ ಜಿಲ್ಲೆಯೊಳಗೆ ರಾಜಕೀಯ ಮಾತ್ರ ಮೇಲುಗೈ ಸಾಧಿಸಿ ಅಭಿವೃದ್ಧಿ ಹಳ್ಳ ಹಿಡಿದಿದೆ.
ನಷ್ಟದ ಕೂಪದೊಳಗೆ ನರಳಾಡುತ್ತಿರುವ ಜಿಲ್ಲೆಯ ಮೈಷುಗರ್ ಕಾರ್ಖಾನೆಗೆ ಆರ್ಥಿಕ ಬಲ ತುಂಬಿದ್ದರೂ ಹೆಚ್ಚು ಅನುಕೂಲವಾಗುತ್ತಿತ್ತು. ಹಣಕಾಸಿನ ನೆರವಿನೊಂದಿಗೆ ಎಥೆನಾಲ್ ಘಟಕ ಸ್ಥಾಪನೆಗೆ ಪ್ರಾಮುಖ್ಯತೆಯನ್ನು ನೀಡಿದ್ದರೂ ಆರ್ಥಿಕ ಚೇತರಿಕೆ ಕಾಣುತ್ತಿತ್ತು. ಬಜೆಟ್‌ನಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಕ್ಷೇತ್ರವನ್ನು ಕತ್ತಲಲ್ಲಿಟ್ಟಿದ್ದರೂ ಅದು ಅವರಿಗೆ ಕಾಣಿಸುತ್ತಿಲ್ಲವೋ ಅಥವಾ ಕಂಡೂ ಕಾಣದಂತಿದ್ದಾರೋ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಸೋಮನಹಳ್ಳಿ, ಗೆಜ್ಜಲಗೆರೆ, ತೂಬಿನಕೆರೆ ಕೈಗಾರಿಕಾ ಪ್ರದೇಶಗಳ ಮಾದರಿಯಲ್ಲಿ ಜಿಲ್ಲೆಯ ವಿವಿಧೆಡೆ ಕೈಗಾರಿಕಾ ಪ್ರದೇಶಗಳ ಸ್ಥಾಪನೆಗೆ ಆಸಕ್ತಿ ತೋರಿಸಿಲ್ಲ. ಕೃಷಿಗೆ ಪೂರಕವಾಗುವಂತೆ ಉದ್ದಿಮೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡುವುದರೊಂದಿಗೆ ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸಿ ಮಂಡ್ಯ ಜಿಲ್ಲೆಯ ಬೆಳವಣಿಗೆಗೆ ಹೊಸ ರೂಪ ನೀಡಬಹುದಿತ್ತು. ಸುಮಾರು ೨.೮೫ ಲಕ್ಷ ಮತಗಳ ಅಂತರದಿಂದ ಲೋಕಕಸಭೆಗೆ ಆಯ್ಕೆಯಾದ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಆಸಕ್ತಿ, ಬದ್ಧತೆ ಪ್ರದರ್ಶಿಸಬೇಕಿತ್ತು ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಈ ಮೊದಲು ೧೨.೭೫ ಲಕ್ಷ ರು.ವರೆಗೆ ಯಾವುದೇ ತೆರಿಗೆ ಇರಲಿಲ್ಲ. ಈ ಮಿತಿಯನ್ನು ೧೦ ಲಕ್ಷ ರು.ವರೆಗೆ ಹೆಚ್ಚಿಸಬಹುದೆಂದು ನಿರೀಕ್ಷಿಸಲಾಗಿತ್ತು. ಜನರ ನಿರೀಕ್ಷೆಗೂ ಮೀರಿ ಬಜೆಟ್‌ನಲ್ಲಿ ಮಿತಿಯನ್ನು ನಿಗದಿಪಡಿಸಿರುವುದು ಸಾಮಾನ್ಯ ಹಾಗೂ ಮಧ್ಯಮವರ್ಗದವರಿಗೆ ಹೆಚ್ಚಿನ ಅನುಕೂಲವಾಗಿದೆ. ಇದು ಸಣ್ಣ ಪುಟ್ಟ ವ್ಯಾಪಾರಿಗಳು, ವೇತನದಾರರು, ತೆರಿಗೆದಾರರಿಗೆ ಬಂಪರ್ ಕೊಡುಗೆ ನೀಡಿದಂತಾಗಿದೆ.
ಈ ಸಾಲಿನ ಕೇಂದ್ರ ಬಜೆಟ್‌ನಲ್ಲಿ ದೇಶದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟ ಹೆಚ್ಚಿಸುವುದು ಹಾಗೂ ತಾಂತ್ರಿಕವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸಲು ನಿರ್ಧರಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿರುವ ಎಲ್ಲ ಸರ್ಕಾರಿ ಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಬ್ರಾಡ್‌ಬ್ಯಾಂಡ್ ಸಂಪರ್ಕ ವಿಸ್ತರಿಸುವುದಾಗಿ ಘೋಷಿಸಿರುವುದು ಒಳ್ಳೆಯ ಬೆಳವಣಿಗೆ ಎಂಬ ಮಾತುಗಳು ಕೇಳಿಬರುತ್ತಿವೆ.
ಬಡವರು, ಮಧ್ಯಮ ವರ್ಗ, ರೈತರಿಗೆ ಅನುಕೂಲಕರ ಬಜೆಟ್: ಜೋಶಿ
ಪ್ರತಿ ಜಿಲ್ಲೆಯಲ್ಲಿಯೂ ಕ್ಯಾನ್ಸರ್ ಡೇ ಕೇರ್ ಸೆಂಟರ್‌ಗಳ ಸ್ಥಾಪನೆಗೆ ಒತ್ತು ನೀಡಿರುವುದು ಮತ್ತೊಂದು ಆಶಾದಾಯಕ ಸಂಗತಿ. ಕ್ಯಾನ್ಸರ್ ರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಪ್ರತಿ ಜಿಲ್ಲೆಯಲ್ಲಿಯೂ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳು ಸ್ಥಾಪನೆಯಾದರೆ ರೋಗಿಗಳಿಗೆ ಸಮಯಕ್ಕೆ ಚಿಕಿತ್ಸೆ ದೊರೆಯುತ್ತದೆ. ಆರೋಗ್ಯ ಸ್ಥಿತಿ ಸರಿಯಿಲ್ಲದರುವಾಗ ದೂರದ ನಗರ ಪ್ರದೇಶಕ್ಕೆ ಪ್ರಯಾಣಿಸುವ ಅವಶ್ಯಕತೆ ಇರುವುದಿಲ್ಲ, ಕೇಂದ್ರದ ಈ ಯೋಜನೆ ಕ್ಯಾನ್ಸರ್ ರೋಗಿಗಳಿಗೆ ಹಾಗೂ ಅವರ ಮನೆಯವರಿಗೆ ಬಹುದೊಡ್ಡ ಸಹಾಯವಾಗಲಿದೆ ಎಂಬುದು ಜನರ ಅಭಿಪ್ರಾಯವಾಗಿದೆ.
ಜನಸಾಮಾನ್ಯರ ಬಜೆಟ್
ಒಟ್ಟಾರೆ ಕೇಂದ್ರ ಬಜೆಟ್ ಜನಪರವಾಗಿದೆ. ತೆರಿಗೆ ಮಿತಿಯನ್ನು ೧೨ ಲಕ್ಷಕ್ಕೆ ಏರಿಸಿರುವುದು ಸಂತಸದ ವಿಚಾರ. ಇದರಿಂದ ಸಾಮಾನ್ಯ ಹಾಗೂ ಮಧ್ಯಮವರ್ಗದವರಿಗೆ ಹೆಚ್ಚಿನ ಅನುಕೂಲವಾಗಿದೆ. ಕ್ಯಾನ್ಸರ್ ಆಸ್ಪತ್ರೆಗಳನ್ನು ಪ್ರತಿ ಜಿಲ್ಲೆಗಳಿಗೂ ನೀಡಿರುವುದು ಒಳ್ಳೆಯದು. ಕಿಸಾನ್ ಕಾರ್ಡ್ ರೈತರಿಗೆ ೫ ಲಕ್ಷ ರು.ವರೆಗೆ ಸಾಲ ಹೆಚ್ಚಳ ಪ್ರಯೋಜನಕಾರಿಯಾಗಿದೆ ಎಂದು ಲೆಕ್ಕಪರಿಶೋಧಕರು ಆರ್.ರಾಮ್‌ಪ್ರಸಾದ್ ತಿಳಿಸಿದ್ದಾರೆ.
