ವಿಜಯಪುರ(ಮಾ.12): ಮಹಾಮಾರಿ ಕೊರೋನಾ ವೈರಸ್‌ ಜಗತ್ತನ್ನೇ ತಲ್ಲಣಗೊಳಿಸಿದ ಸಂದ​ರ್ಭ​ದಲ್ಲಿ ಜಿಲ್ಲೆಯ 10 ಜನರು ವಿದೇಶದಿಂದ ವಾಪಸಾದ ಬೆನ್ನಲ್ಲೇ ಜಿಲ್ಲೆಯ ಜನರಲ್ಲೂ ಕೊರೋನಾ ವೈರಸ್‌ ಆತಂಕ ಮನೆ ಮಾಡಿದೆ.

10 ಮಂದಿ ವಿದೇಶದಿಂದ ವಾಪಸಾಗಿದ್ದಾರೆ. ಹೀಗಾಗಿ ಜಿಲ್ಲೆಯ ಜನರು ಹೆಚ್ಚಿನ ಪ್ರಮಾಣದಲ್ಲಿ ಜನನಿಬಿಡ ಪ್ರದೇಶದಲ್ಲಿ ಬೇರೆಯವ​ರಿಂದ ದೂರ ಉಳಿದಿದ್ದಾರೆ. ಜನವರಿ 31 ರಿಂದ ಇಲ್ಲಿಯವರೆಗೆ ವಿದೇಶದಲ್ಲಿ ವಾಸಿಸುತ್ತಿದ್ದ ಐವರು ಯುವಕರು ಹಾಗೂ ವಿದೇಶ ಪ್ರವಾಸಕ್ಕೆ ತೆರಳಿದ್ದ ಐವರು ತವರಿಗೆ ವಾಪಸಾಗಿದ್ದಾರೆ. ಅವರ ಬಗ್ಗೆ ವಿಶೇಷ ನಿಗಾ ವಹಿಸುವಂತೆ ಬೆಂಗಳೂರು ಏರ್‌ಪೋರ್ಟ್‌ದಿಂದ ಸೂಚನೆ ಬಂದಿದೆ. ಕೊರೋನಾ ಭಯದಿಂದ ಈ 10 ಮಂದಿ ತವರಿಗೆ ಮರಳಿದ್ದಾರೆ. ವಿದೇಶಿ ಪ್ರವಾಸಕ್ಕೆ ತೆರಳಿದ್ದ ಐವರು ಹಾಗೂ ವಿದೇಶದಲ್ಲಿ ಉದ್ಯೋಗದಲ್ಲಿ ತೊಡಗಿದ್ದ ಐವರು ಯುವಕರಲ್ಲಿಯೂ ಯಾವುದೇ ಕೊರೋನಾ ವೈರಸ್‌ ಲಕ್ಷಣಗಳು ಬೆಳಕಿಗೆ ಬಂದಿಲ್ಲ. ಈ ಯುವಕರ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ. ಅವರ ಕುಟುಂಬದ ಸದಸ್ಯರ ಮೇಲೂ ನಿಗಾ ವಹಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ಯಾರಿಸ್‌ನಿಂದ ಬಂದಿದ್ದ ಯುವಕನನ್ನು ನೆಗಡಿ, ಜ್ವರ ಹಿನ್ನೆಲೆಯಲ್ಲಿ ಬಿಎಲ್‌ಡಿಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನಿಗೆ ಕೊರೋನಾ ವೈರಸ್‌ ಶಂಕೆ ಇರಬಹುದೆಂದು ಗಂಟಲು ದ್ರವ ತೆಗೆದುಕೊಂಡು ಮಣಿಪಾಲ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ಯುವಕನ ಗಂಟಲು ದ್ರವ ಪರೀಕ್ಷೆ ನಂತರ ನೆಗೆಟಿವ್‌ ವರದಿ ಬಂದಿದೆ. ಆತನಿಗೆ ಕೊರೋನಾ ವೈರಸ್‌ ಇಲ್ಲ ಎಂಬುವುದು ವೈದ್ಯಕೀಯ ತಪಾಸಣೆ ವರದಿಯಿಂದ ದೃಢಪಟ್ಟಿದೆ.

ಐವರ ಹೆಸರನ್ನು ಆರೋಗ್ಯ ಇಲಾಖೆ ಗೌಪ್ಯವಾಗಿ ಇಡಲಾಗಿದೆ. ಅವರಿಗೆ ಎ, ಬಿ, ಸಿ, ಡಿ, ಇ ಎಂದು ಹೆಸರಿಸಲಾಗಿದೆ. ಎ ಹೆಸರಿನ ಎಂಬಿಬಿಎಸ್‌ ವಿದ್ಯಾರ್ಥಿ ಜನವರಿ 31ರಂದು ಜಿಲ್ಲೆಗೆ ಮರಳಿದ್ದಾನೆ. ಕಳೆದ ವಾರ ಬಿ ಹೆಸರಿನ ಒಬ್ಬ ಯುವಕ ಪ್ಯಾರಿಸ್‌ನಿಂದ ಆಗಮಿಸಿದ್ದು, ಆತನ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. ನೆಗೆಟಿವ್‌ ಬಂದಿದೆ.

ಮೂರು ದಿನಗಳ ಹಿಂದೆ ದುಬೈನಿಂದ ಸಿ ಹೆಸರಿನ ಯುವಕ ಜಿಲ್ಲೆಗೆ ಆಗಮಿಸಿದ್ದಾನೆ. ಇಂದು ಇಟಲಿ ಹಾಗೂ ಜರ್ಮನಿಯಿಂದ ವಾಪಸ್ಸಾದ ಡಿ ಮತ್ತು ಇ ಹೆಸರಿನ ಯುವಕರಲ್ಲೂ ಕೊರೋನಾ ವೈರಸ್‌ ಇಲ್ಲ. ವಿದೇಶದಲ್ಲಿ ಉದ್ಯೋಗದಲ್ಲಿ ತೊಡಗಿದ್ದ ಮೂವರು ಯುವಕರು ಸಾಫ್ಟವೇರ್‌ ಎಂಜಿನಿಯರಾಗಿ ಕೆಲಸ ಮಾಡುತ್ತಿದ್ದರು.

ವಿದೇಶ ಪ್ರವಾಸಕ್ಕೆ ತೆರಳಿದ್ದ ದಂಪತಿ ಹಾಗೂ ಮಕ್ಕಳು ಸೇರಿ ಐವರು ವಾಪಸಾದ ಬಗ್ಗೆ ಬೆಂಗಳೂರಿನ ಏರ್‌ಪೋರ್ಟ್‌ ಆಥಾರಿಟಿ ವಿಜಯಪುರ ಜಿಲ್ಲಾ ಆರೋಗ್ಯ ಇಲಾಖೆ ಗಮನಕ್ಕೆ ತಂದಿದೆ. ಅವರ ಬಗ್ಗೆ ನಿಗಾವಹಿಸಲಾಗಿದೆ. 10 ಜನರಲ್ಲಿಯೂ ಕೊರೋನಾ ವೈರಸ್‌ ಲಕ್ಷಣಗಳು ಇಲ್ಲ.

ಆತಂಕದಲ್ಲಿಯೇ ಜೀವನ:

ಕೆಲವರು ಕೈ, ಬಾಯಿ, ಮೂಗಿಗೆ ಗ್ಲೌಸ್‌ ಹಾಕಿಕೊಂಡು ತಿರುಗಾಡುತ್ತಿದ್ದಾರೆ. ಇನ್ನೂ ಕೆಲವರು ವಿಜಯಪುರ ಜಿಲ್ಲೆಯಲ್ಲಿ ಭಾರಿ ಬಿಸಿಲು ಇರುವುದರಿಂದಾಗಿ ಯಾವುದೇ ವೈರಸ್‌ಗಳಿಗೆ ಬಹಳ ದಿನ ಉಳಿಗಾಲವಿರುವುದಿಲ್ಲ. ಅವು ಬಹು ಬೇಗನೆ ಬಿಸಿಲಿನ ತಾಪಕ್ಕೆ ನಶಿಸಿ ಹೋಗುತ್ತವೆ ಎಂಬ ಧೈರ್ಯದಿಂದ ಇದ್ದಾರೆ.

ವಿಶ್ವವಿಖ್ಯಾತ ಗೋಳಗುಮ್ಮಟ ವೀಕ್ಷಣೆಗೆ ವಿದೇಶಿಗರು ಆಗಮಿಸಬಹುದು ಎಂಬ ಕಾರಣದಿಂದಾಗಿ ಬಹಳಷ್ಟುಪ್ರವಾಸಿಗರು ಗೋಳಗುಮ್ಮಟದ ಕಡೆಗೆ ಸುಳಿಯುತ್ತಿಲ್ಲ. 2018-19ರಲ್ಲಿ 2032 ವಿದೇಶಿಗರು ಗೋಳಗುಮ್ಮಟಕ್ಕೆ ಭೇಟಿ ನೀಡಿದ್ದರು. 2019-20ರಲ್ಲಿ ಫೆಬ್ರವರಿ ವರೆಗೆ 1603 ವಿದೇಶಿಗರು ಭೇಟಿ ನೀಡಿದ್ದಾರೆ. ತೀರ ಇತ್ತಿತ್ತಲಾಗಿ ಕೊರೋನಾ ಭೀತಿಯಿಂದ ವಿದೇಶ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.

10 ಜನರಲ್ಲಿ ಕೊರೋನಾ ಇಲ್ಲ

ವಿದೇಶದಲ್ಲಿ ಉದ್ಯೋಗದಲ್ಲಿ ತೊಡಗಿದ್ದ ಐವರು ಯುವಕರು ಹಾಗೂ ವಿದೇಶ ಪ್ರವಾಸಕ್ಕೆ ತೆರಳಿದ್ದ ಐವರು ಜಿಲ್ಲೆಗೆ ವಾಪಸಾಗಿದ್ದಾರೆ. ಅವರಲ್ಲಿ ಕೊರೋನಾ ವೈರಸ್‌ ಲಕ್ಷಣಗಳು ಕಂಡು ಬಂದಿಲ್ಲ. ಇವರೆಲ್ಲರಿಗೂ ಅವರ ಮನೆಗಳಲ್ಲಿಯೇ ಆರೋಗ್ಯ ಇಲಾಖೆ ನಿಗಾ ವಹಿಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಕೊರೋನಾ ವೈರಸ್‌ ಸಂಬಂಧ ಯಾರೂ ಭೀತಿಗೆ ಒಳಗಾಗಬೇಕಿಲ್ಲ. ಧೈರ್ಯದಿಂದ ಇರಬೇಕು ಎಂದು ವಿಜಯಪುರ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಲ್ಲನಗೌಡ ಬಿರಾದಾರ ಹೇಳಿದ್ದಾರೆ.