ಶಿವಕುಮಾರ ಕುಷ್ಟಗಿ 

ಗದಗ(ಸೆ.18): ಕೊರೋನಾ ದಿನ ಕಳೆದಂತೆ ಅಬ್ಬರಿಸುತ್ತಿದೆ ಸಾವಿನ ಪ್ರಮಾಣ ನಿತ್ಯವೂ ಹೆಚ್ಚುತ್ತಲೇ ಇದೆ. ಈ ನಡುವೆ ಜಿಲ್ಲೆಯ ಜನರಿಗೆ ರುದ್ರಭೂಮಿಯ ಕೊರತೆಯ ದೊಡ್ಡ ಆತಂಕ ಎದುರಾಗಿದೆ. ಕೊರೋನಾ ಪೀಡಿತರು ಹಾಗೂ ಸಾಮಾನ್ಯ ಮೃತರ ಅಂತ್ಯಸಂಸ್ಕಾರಕ್ಕೆ ತೀವ್ರ ಸಮಸ್ಯೆ ಎದುರಾಗುತ್ತಿದೆ.

ಇನ್ನು ಜಿಲ್ಲೆಯ ಗ್ರಾಮಗಳಲ್ಲಿ ಅಂತ್ಯಸಂಸ್ಕಾರಕ್ಕೆ ಸ್ಮಶಾನವೇ ಇಲ್ಲ ಎಂದಾದರೆ ಆ ಗ್ರಾಮಗಳ ಸ್ಥಿತಿ ಹೇಗಿರಬೇಡ? ಎನ್ನುವುದನ್ನು ಊಹಿಸಿಕೊಂಡರೂ ಭಯವಾಗುತ್ತದೆ. ಈ ಸಮಸ್ಯೆ ಇಂದು ನಿನ್ನೆಯದಲ್ಲ, ಹಲವಾರು ವರ್ಷಗಳಿಂದ ಹಲವಾರು ಗ್ರಾಮಗಳು ಸ್ಮಶಾನ (ರುದ್ರಭೂಮಿ) ಕೊರತೆಯನ್ನು ಎದುರಿಸುತ್ತಿದ್ದು, ಈ ಬಗ್ಗೆ ಗಮನ ಹರಿಸಬೇಕಾದ ಜಿಲ್ಲಾಡಳಿತ, ತಾಲೂಕು ಆಡಳಿತಗಳ ನಿರ್ಲಕ್ಷ್ಯದಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ.

111 ಗ್ರಾಮಗಳಿಗೆ ಸ್ಮಶಾನವೇ ಇಲ್ಲ:

ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 330 ಗ್ರಾಮಗಳಿದ್ದು ಅವುಗಳಲ್ಲಿ 111 ಗ್ರಾಮಗಳಿಗೆ ಇಂದಿಗೂ ಸ್ಮಶಾನವೇ ಇಲ್ಲ. ಇದರಿಂದಾಗಿ ಸಾರ್ವಜನಿಕರು ತಮ್ಮ ಗ್ರಾಮಗಳಲ್ಲಿ ಸಾವುಗಳು ಸಂಭವಿಸಿದಲ್ಲಿ ಹಳ್ಳಗಳ ಅಕ್ಕಪಕ್ಕದಲ್ಲಿ, ತಮ್ಮ ಸಂಪ್ರದಾಯಗಳನ್ನು ಹೊರತುಪಡಿಸಿ ಶವಗಳನ್ನು ಬೆಂಕಿ ಹಚ್ಚಿ ಅಂತ್ಯ ಸಂಸ್ಕಾರ ಮಾಡುತ್ತಾರೆ. ಇನ್ನು ಉಳ್ಳುವರು ತಮ್ಮ ತಮ್ಮ ಜಮೀನುಗಳಲ್ಲಿ ಅಂತ್ಯ ಸಂಸ್ಕಾರ ನಡೆಸಿಕೊಳ್ಳುತ್ತಾರೆ. ಜಮೀನುಗಳಿಲ್ಲದ ಬಡವರು, ಮಧ್ಯಮ ವರ್ಗದ ಮನೆಯಲ್ಲಿ ಸಾವು ಸಂಭವಿಸಿದರೆ ಹೇಗೆ ಎನ್ನುವಂತಹ ಆತಂಕದ ಸ್ಥಿತಿ ನಿರ್ಮಾಣವಾಗಿದೆ.

'ಪಿಂಚಣಿ ಹಣ ನೇರವಾಗಿ ಅರ್ಹರ ಬ್ಯಾಂಕ್‌ ಖಾತೆಗೆ'

ಹತ್ತಾರು ಸಮಸ್ಯೆಗಳಿವೆ

111 ಗ್ರಾಮಗಳಲ್ಲಿ ಹಲವಾರು ವರ್ಷಗಳಿಂದ ಈ ಸಮಸ್ಯೆ ಇದೆ ಎಂದರೂ ಮೊದ ಮೊದಲು ಊರ ಸಮೀಪದಲ್ಲಿಯೇ ಇರುವ ಹೊಲಗಳಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತಿತ್ತು. ಆದರೆ ಕಾಲ ನಂತರದಲ್ಲಿ ಆ ಜಮೀನುಗಳ ಮಾಲೀಕರು ಅಂತ್ಯಸಂಸ್ಕಾರಕ್ಕೆ ಕಿರಿಕಿರಿ ತೆಗೆಯಲು ಆರಂಭಿಸಿದ್ದಲ್ಲದೇ, ತಮ್ಮ ಜಮೀನುಗಳಲ್ಲಿ ಅಂತ್ಯಸಂಸ್ಕಾರ ಮಾಡುವುದು ಬೇಡ ಎಂದು ಪಟ್ಟುಹಿಡಿದ ಹಿನ್ನೆಲೆಯಲ್ಲಿ ಈಗ ಸಮಸ್ಯೆ ಉಲ್ಬಣವಾಗುತ್ತಿವೆ. ಇನ್ನು ಕೆಲ ಗ್ರಾಮಗಳಲ್ಲಿ ಊರವರ ಅಂತ್ಯ ಸಂಸ್ಕಾರಕ್ಕಾಗಿ ಊರಿನ ಗೌಡರು ಈ ಹಿಂದೆ ಭೂಮಿ ದಾನ ಮಾಡಿದ್ದರು. ಆದರೆ ಈಗ ಜಮೀನು ದಾನ ಪಡೆದವರು ತೀರಿ ಹೋದ ನಂತರ ಇದು ನಮ್ಮ ಸ್ವಂತ ಆಸ್ತಿ ಇದರಲ್ಲಿ ಅಂತ್ಯ ಸಂಸ್ಕಾರ ಮಾಡಬೇಡಿ ಎಂದು ಕ್ಯಾತೆ ತೆಗೆದ ಹಲವಾರು ಉದಾಹರಣೆಗಳು ಜಿಲ್ಲೆಯಲ್ಲಿವೆ.

ಮಾನವ ಹಕ್ಕುಗಳ ಉಲ್ಲಂಘನೆ

ಕೊರೋನಾದಿಂದಾಗಿ ಸಾವಿನ ಪ್ರಮಾಣ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಲೇ ಇದೆ. ಅದರಲ್ಲಿಯೂ ವಯೋವೃದ್ಧರು ಹೆಚ್ಚಾಗಿ ಮೃತಪಡುತ್ತಿದ್ದಾರೆ. ಇವರೆಲ್ಲರ ಅಂತ್ಯಸಂಸ್ಕಾರ ದಿನ ಕಳೆದಂತೆ ಸಮಸ್ಯೆಯಾಗುತ್ತಿದೆ. ಓರ್ವ ವ್ಯಕ್ತಿ ಬದುಕುವುದು ಹೇಗೆ ಮೂಲಭೂತ ಹಕ್ಕೋ, ಅದೇ ರೀತಿ ಅವನು ತೀರಿ ಹೋದ ಸಂದರ್ಭ ಗೌರಯುತವಾಗಿ ಅಂತ್ಯ ಸಂಸ್ಕಾರವಾಗಬೇಕು. ಆದರೆ ಸದ್ಯಕ್ಕೆ ಜಿಲ್ಲೆಯ 111 ಗ್ರಾಮಗಳಲ್ಲಿ ಅಂತಾ ಸ್ಥಿತಿ ಇಲ್ಲ. ಹಾಗಾಗಿ ಇದು ಮಾನವ ಹಕ್ಕುಗಳು ಸ್ಪಷ್ಟ ಉಲ್ಲಂಘನೆಯಾಗುತ್ತದೆ.

ಜಿಲ್ಲೆಯ 7 ತಾಲೂಕು ವ್ಯಾಪ್ತಿಯಲ್ಲಿ 330 ಗ್ರಾಮಗಳಿದ್ದು, ಅವುಗಳಲ್ಲಿ 219 ಗ್ರಾಮಗಳಿಗೆ 695.38 ಎಕರೆ ಪ್ರದೇಶದಷ್ಟು ವಿಸ್ತೀರ್ಣದ ರುದ್ರಭೂಮಿ ಇದೆ. ಬಾಕಿ ಉಳಿದಿರುವ 111 ಗ್ರಾಮಗಳ ಪೈಕಿ, 40 ಗ್ರಾಮಗಳಿಗೆ ರುದ್ರಭೂಮಿ ಕಲ್ಪಿಸುವ ಸಲುವಾಗಿ ಖಾಸಗಿ ಅವರಿಂದ ಭೂಮಿ ಖರೀದಿಸಬೇಕಾದ ಅವಶ್ಯಕತೆ ಇದ್ದು ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನುಳಿದ ಗ್ರಾಮಗಳಲ್ಲಿರುವ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಎಂ ಅವರು ತಿಳಿಸಿದ್ದಾರೆ.