ಗದಗ(ಸೆ.18): ಇನ್ನು ಮುಂದೆ ಪಿಂಚಣಿ ಹಣವನ್ನು ನೇರವಾಗಿ ಅರ್ಹರ ಬ್ಯಾಂಕ್‌ ಖಾತೆಗೆ ಜಮೆ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುತ್ತದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದರು.

ಅವರು ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ನಡೆದ ಪ್ರಕೃತಿ ವಿಕೋಪ ಹಾಗೂ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದಾದ್ಯಂತ ಪಿಂಚಣಿದಾರರಿಗೆ ಪ್ರತಿವರ್ಷ 7 ಸಾವಿರ ಕೋಟಿ ಪಿಂಚಣಿ ನೀಡಲಾಗುತ್ತಿದೆ. ನೇರ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡಿದರೆ ಅನರ್ಹ ಫಲಾನುಭವಿಗಳನ್ನು ಸುಲಭವಾಗಿ ಗುರುತಿಸಬಹುದು. ಇದರಿಂದ ಸರ್ಕಾರಕ್ಕೆ ಪ್ರತಿವರ್ಷ ಆರು ನೂರು ಕೋಟಿಯಷ್ಟು ಉಳಿತಾಯವಾಗಲಿದೆ.

ಸಾಮಾಜಿಕ ಭದ್ರತೆಯ ಪಿಂಚಣಿ ಹಣವನ್ನು ಪೋಸ್ಟ್‌ ಆಫೀಸ್‌ ಮೂಲಕ ನೀಡದೇ, ವೃದ್ಧ ನಾಗರಿಕ ಅಲೆದಾಟ ತಪ್ಪಿಸಲು ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುತ್ತದೆ. ಪಿಂಚಣಿದಾರರ ಆಧಾರ್‌ ಕಾರ್ಡ್‌ ಕಡ್ಡಾಯವಾಗಿ ಲಿಂಕ್‌ ಮಾಡುವ ಮೂಲಕ ಬ್ಯಾಂಕ್‌ ವಿವರ ಪಡೆದುಕೊಳ್ಳಬೇಕು. ಅಲ್ಲದೇ, ಖೊಟ್ಟಿದಾಖಲೆಗಳನ್ನು ಸೃಷ್ಟಿಸಿ ಪಿಂಚಣಿ ಪಡೆಯುತ್ತಿರುವವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಗದಗ: ಕೂಲಿ ಕಾರ್ಮಿಕನ ಪುತ್ರಿ ಖೇಲೋ ಇಂಡಿಯಾ ಕ್ಯಾಂಪ್‌ಗೆ ಆಯ್ಕೆ..!

ಗುಂಟೆವಾರು ಭೂಮಿ ಖರೀದಿಗೆ ಅವಕಾಶ ಕಲ್ಪಿಸಿದರೆ ನಗರ ಪ್ರದೇಶಗಳಲ್ಲಿ ಅಧಿಕ ಪ್ರಮಾಣದಲ್ಲಿ ಸೈಟ್‌ಗಳು ತಲೆ ಎತ್ತುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ 5 ಗುಂಟೆಗೂ ಅಧಿಕ ಭೂಮಿಗೆ ಮಾತ್ರ ನೋಂದಣಿಗೆ ಅವಕಾಶ ನೀಡಲಾಗುವುದು. ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಮೀನುಗಳನ್ನು ತೆರವುಗೊಳಿಸುವ ಮೂಲಕ ಒತ್ತುವರಿಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಕೋವಿಡ್‌-19 ಸೋಂಕು ನಿಯಂತ್ರಿಸಲು ಮುಂಜಾಗ್ರತಾ ಕ್ರಮವಹಿಸಿ ಅಭಿವೃದ್ಧಿ ಕಾಮಗಾರಿಗಳತ್ತ ಹೆಚ್ಚು ಒತ್ತು ನೀಡಬೇಕು. ಸರ್ಕಾರದಲ್ಲಿ ಹಣಕಾಸಿನ ಸಮಸ್ಯೆ ಇಲ್ಲ. ಆರೋಗ್ಯ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ಯಾವುದೇ ನಿರ್ಬಂಧವಿಲ್ಲ. ಆದರೆ, ಖರೀದಿಯ ಬಗ್ಗೆ ಸರಿಯಾದ ಲೆಕ್ಕ ಇರಬೇಕು. ಸದ್ಯ ಕೋವಿಡ್‌ಗೆ ಔಷಧಿ ಇಲ್ಲದಿರುವುದರಿಂದ ಈ ಕುರಿತು ಸರ್ಕಾರದ ನಿರ್ದೇಶನಗಳು ಕಟ್ಟುನಿಟ್ಟಾಗಿ ಪಾಲನೆ ಆಗುವಂತೆ ಕ್ರಮ ವಹಿಸಬೇಕು. ಮಾರುಕಟ್ಟೆಯಂತಹ ಪ್ರದೇಶಗಳಲ್ಲಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಪ್ರವಾಹ ಪೀಡಿತ ಗ್ರಾಮಗಳಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬೇಕು. ಸಂತ್ರಸ್ತರು ನಿಗದಿತ ಸಮಯದೊಳಗೆ ಮನೆ ನಿರ್ಮಿಸುವಂತೆ ನೋಡಿಕೊಳ್ಳಬೇಕು. ಮನೆ ನಿರ್ಮಿಸದವರಿಗೆ ನೋಟಿಸ್‌ ಜಾರಿ ಮಾಡಿ ‘ಎ’ ಮತ್ತು ‘ಬಿ’ ಕೆಟಗೆರಿಯಿಂದ ‘ಸಿ’ ಕೆಟಗೆರಿಗೆ ತರಲು ಕ್ರಮ ಕೈಗೊಳ್ಳಬೇಕು. ನೆರೆ ಸಂದರ್ಭದಲ್ಲಿ ಹಾನಿಗೊಳಗಾದವರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಸೂಚಿಸಿದ ಅವರು, ಜಿಲ್ಲೆಯ ಪ್ರತಿ ಗ್ರಾಮಕ್ಕೊಂದು ಸ್ಮಶಾನ ವ್ಯವಸ್ಥೆ ಮಾಡಬೇಕು. ನರೇಗಾ ಯೋಜನೆಯಡಿ ರಸ್ತೆ, ಕಾಂಪೌಂಡ್‌ ನಿರ್ಮಾಣಕ್ಕೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ. ಪಾಟೀಲ್‌ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಹಂತ ಹಂತವಾಗಿ ನೀರು ಬಿಟ್ಟಿರುವುದರಿಂದ ನೆರೆಯ ಭೀಕರತೆಯ ಪ್ರಮಾಣ ಕಡಿಮೆ ಇದೆ. ನರಗುಂದ ತಾಲೂಕಿನ ಲಕಮಾಪುರ ಗ್ರಾಮ ಸ್ಥಳಾಂತರಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದು, ಸಮಸ್ಯೆಗಳನ್ನು ಇತ್ಯರ್ಥಗೊಳಿಸಿ ಶೀಘ್ರದಲ್ಲೇ ಸ್ಥಳಾಂತರಿಸಲಾಗುವುದು. ಅಲ್ಲದೆ, ರಾಜ್ಯದ ಇನ್ನುಳಿದ ಜಿಲ್ಲೆಗಳಲ್ಲಿ ಗುಂಟೆವಾರು ಭೂಮಿ ಖರೀದಿಗೆ ಅವಕಾಶವಿದ್ದು, ಗದಗ ಜಿಲ್ಲೆಯಲ್ಲಿಯೂ ಖರೀದಿಗೆ ಅನುಕೂಲ ಮಾಡಿಕೊಡಬೇಕು. ಪ್ರಧಾನ ಮಂತ್ರಿ ಫಸಲ್‌ ಭೀಮಾ ಯೋಜನೆಯಡಿ ಕಳೆದ ಸಾಲಿನಲ್ಲಿ . 560 ಕೋಟಿ ಬಿಡುಗಡೆಯಾಗಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ . 3 ಕೋಟಿ ಮಾತ್ರ ಬಿಡುಗಡೆಯಾಗಿದ್ದು, ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವಂತೆ ಕಂದಾಯ ಸಚಿವರನ್ನು ಕೋರಿದರು.

ಜಿಲ್ಲಾಧಿಕಾರಿ ಎಂ. ಸುಂದರೇಶ್‌ ಬಾಬು ಮಾತನಾಡಿ, ಕೋವಿಡ್‌ ಅಂಕಿ ಅಂಶಗಳ ಕುರಿತು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಎಂ. ಸತೀಶ್‌ಕುಮಾರ್‌ ಪ್ರವಾಹ ಹಾನಿ ಹಾಗೂ ಪರಿಹಾರ, ಸ್ಮಶಾನ ಭೂಮಿ ಕುರಿತು ಸೇರಿದಂತೆ ವಿವಿಧ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಪಂ ಅಧ್ಯಕ್ಷ ರಾಜೂಗೌಡ ಕೆಂಚನಗೌಡ್ರ, ಉಪಾಧ್ಯಕ್ಷೆ ಶೋಭಾ ಮೇಟಿ, ಶಾಸಕ ರಾಮಣ್ಣ ಲಮಾಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಜಿಪಂ ಸಿಇಒ ಡಾ.ಆನಂದ್‌ ಕೆ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌.ಎನ್‌ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.