ಬೆಂಗಳೂರು [ಜು.19]:  ಬೆಂಗಳೂರು ಜಲಮಂಡಳಿಯ ಮೂರು ಪ್ರಮುಖ ಪಂಪಿಂಗ್‌ ಕೇಂದ್ರಗಳಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜು.21 ಮತ್ತು 22ರಂದು ಬೆಂಗಳೂರು ನಗರಾದ್ಯಂತ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಟಿ.ಕೆ.ಹಳ್ಳಿ, ತಾತಗುಣಿ ಹಾಗೂ ಹಾರೋಹಳ್ಳಿ ಪಂಪಿಂಗ್‌ ಕೇಂದ್ರಗಳಲ್ಲಿ ದುರಸ್ತಿ ಕೆಲಸ ಕೈಗೊಳ್ಳುವುದರಿಂದ ಕಾವೇರಿ ನೀರು ಸರಬರಾಜು ಯೋಜನೆ 1, 2, 3 ಹಾಗೂ 4ನೇ ಹಂತಗಳ ನೀರು ಪೂರೈಕೆ ಪಂಪಿಂಗ್‌ ಕಾರ್ಯ ಸ್ಥಗಿತಗೊಳಿಸಲಾಗುತ್ತಿದೆ. ಜು.21ರ ಬೆಳಗ್ಗೆ 8ರಿಂದ ಜು.22ರ ಮುಂಜಾನೆ 2ರವರೆಗೆ ಈ ದುರಸ್ತಿ ಕಾರ್ಯ ಜರುಗಲಿದೆ. ಇದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಜಲಮಂಡಳಿ ಮನವಿ ಮಾಡಿದೆ.

ಪ್ರೊಟೆಕ್ಷನ್‌ ಸಿಸ್ಟಂ ದುರಸ್ತಿ:  ಪಂಪಿಂಗ್‌ ಕೇಂದ್ರಗಳಿಂದ ನೀರು ಪಂಪಿಂಗ್‌ ಮಾಡುವಾಗ ವಿದ್ಯುತ್‌ ಕಡಿತಗೊಂಡರೆ ನೀರು ಹಿಮ್ಮುಖವಾಗಿ ಚಲಿಸುತ್ತದೆ. ಈ ನೀರು ರಭಸವಾಗಿ ಹೋಗಿ ಪಂಪಿಂಗ್‌ ಯಂತ್ರ ಮತ್ತು ಮೋಟಾರ್‌ಗೆ ಬಡಿಯುವುದರಿಂದ ಎರಡಕ್ಕೂ ಹಾನಿಯಾಗುತ್ತದೆ. ಈ ರಭಸವಾಗಿ ಬರುವ ನೀರು ಪಂಪಿಂಗ್‌ ಯಂತ್ರ ಹಾಗೂ ಮೋಟಾರ್‌ಗೆ ಬಡಿಯದಂತೆ ತಡೆಯಲು ಸರ್ಜ್ ವಿಷಲ್‌ ಅಳವಡಿಸಲಾಗಿರುತ್ತದೆ. ಇದೀಗ ಈ ಸರ್ಜ್ ವಿಷಲ್‌ ದುರಸ್ತಿಗೆ ಬಂದಿರುವುದರಿಂದ ದುರಸ್ತಿ ಮಾಡಲು ಸುಮಾರು 18 ತಾಸು ಕಾವೇರಿ ನೀರು ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ ಎಂದು ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.