ಕುದೂರು [ಮಾ.05]:  ರಾಮನಗರ ಜಿಲ್ಲಾ ಕೇಂದ್ರವಾಗಿ ಹತ್ತು ವರ್ಷಗಳಾದರೂ ಮಾಗಡಿಯಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ಇದ್ದರೂ ಕುದೂರು, ಸೋಲೂರು, ತಿಪ್ಪಸಂದ್ರ ಹೋಬಳಿಗಳಿಗೆ ಜಿಲ್ಲಾ ಕೇಂದ್ರಕ್ಕೆ ನೇರ ಬಸ್ಸುಗಳಿಲ್ಲ. ಸಮುದ್ರದ ನಂಟಸ್ತನ, ಉಪ್ಪಿಗೆ ಬರ ಎನ್ನುವಂತಹ ಸ್ಥಿತಿ ಎದು​ರಾ​ಗಿ​ದೆ.

ಜಿಲ್ಲಾ ಕೇಂದ್ರ ರಾಮನಗರಕ್ಕೆ ಹೋಗಬೇಕಾದರೆ ತಾಲೂಕು ಕೇಂದ್ರ ಮಾಗಡಿಗೆ ಹೋಗಿ ಅಲ್ಲಿಂದ ಮತ್ತೊಂದು ಬಸ್ಸು ಬದಲಿಸಬೇಕು. ತಾಲೂಕಿನ ಮೂರು ಹೋಬಳಿಗಳ ಜನರು ರಾಮನಗರ ಬಸ್ಸುಗಳನ್ನು ಕಾಣದೆ ಅಕ್ಷರಶಃ ದ್ವೀಪಜೀವಿಗಳಂತೆ ಬದುಕು ಸವೆಸುವಂತಾಗಿದೆ ಎಂದು ಕುದೂರು, ತಿಪ್ಪಸಂದ್ರ ಮತ್ತು ಸೋಲೂರು ಹೋಬಳಿಯ ಜನರು ತಾಲೂಕು ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಡಿಪೋ ಆದ ನಂತರ ಸಮಸ್ಯೆ ಹೆಚ್ಚಳ:

ಮಾಗಡಿಯಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ಆಗುವ ಮುನ್ನ ಕುದೂರು ಗ್ರಾಮದಿಂದ ಬೆಂಗಳೂರಿಗೆ ಹತ್ತು ಸರ್ಕಾರಿ ಬಸ್ಸುಗಳು ಓಡಾಡುತ್ತಿದ್ದವು. ಆದರೆ, ಈಗ ಕೇವಲ ಮೂರು ಬಸ್ಸುಗಳು ಮಾತ್ರ ಓಡಾಡುತ್ತಿವೆ. ಜನರು ಬೆಂಗಳೂರಿಗೆ ಪ್ರಯಾಣ ಮಾಡಬೇಕಾದರೆ ಸೋಲೂರು ಗ್ರಾಮದ ಹೆದ್ದಾರಿಗೆ ಹೋಗಿ ಅಲ್ಲಿಂದು ಬೇರೆ ಬಸ್ಸುಗಳನ್ನು ಹಿಡಿದು ಪ್ರಯಾಣ ಮಾಡಬೇಕಾದ ಸ್ಥಿತಿ.

‘ಕಾಂಗ್ರೆಸ್ ಶಿಸ್ತಿನ ಸಿಪಾಯಿಯಾದ ನಾನು ರಾಜೀನಾಮೆಗೆ ಸಿದ್ಧನಿದ್ದೇನೆ’...

ಮಾಗಡಿ ಡಿಪೋ ಆದ ನಂತರ ಈ ಮೂರು ಹೋಬಳಿಗಳ ಸಣ್ಣಪುಟ್ಟಗ್ರಾಮಗಳಿಗೂ ಬಸ್ಸುಗಳ ಸೌಲಭ್ಯ ಸಿಗುತ್ತದೆ. ಈ ಮೂಲಕ ಜನರಿಗೆ ಅನುಕೂಲವಾಗುತ್ತದೆ ಎಂದು ಭಾವಿಸಿದ್ದರು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ತೊಂದರೆಯೇ ಹೆಚ್ಚಾಯಿತು ಎಂದು ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಅವರು ಪತ್ರಿಕಾಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಬೇಜ​ವಾ​ಬ್ದಾರಿ ಜನ​ಪ್ರ​ತಿ​ನಿ​ಧಿ​ಗ​ಳು:  ಮಾಗಡಿ ಶಾಸಕರು ಮತ್ತು ಇಲ್ಲಿನ ಜನಪ್ರತಿನಿಧಿಗಳು ಎಚ್ಚರಗೊಂಡು ಜನರ ತೊಂದರೆಯನ್ನು ಗಮನಿಸಿ ಅದನ್ನು ಬಗೆಹರಿಸುವ ಕೆಲಸ ಮಾಡುತ್ತಿಲ್ಲ. ಮಾಗಡಿ ಡಿಪೋದವರು ಬಸ್ಸುಗಳನ್ನು ಬಿಡಲಿ ಎಂದು ನೆಲಮಂಗಲ ಡಿಪೋದವರು ಯೋಚಿಸುತ್ತಾರೆ. ನೆಲಮಂಗಲ ಡಿಪೋ ಹತ್ತಿರವಿದ್ದಾಗ ಮಾಗಡಿಯವರು ಏಕೆ ಬಿಡಬೇಕು ಎಂದು ಇವರು ಯೋಚಿಸುತ್ತಾರೆ. ಈ ಮೊದಲು ಕುಣಿಗಲ್‌ ಡಿಪೋ ಬಸ್ಸುಗಳು ಗ್ರಾಮಕ್ಕೆ ಬರುತ್ತಿದ್ದವು. ಮಾಗಡಿ ಡಿಪೋ ಆದ ನಂತರ ಈ ಎಲ್ಲಾ ಸೌಲಭ್ಯಗಳು ನಿಂತುಹೋಯಿತು. ಜವಾಬ್ದಾರಿ ಇಲ್ಲದ ಜನಪ್ರತಿನಿಧಿಗಳ ನಡುವೆ ನಾವುಗಳಿದ್ದೇವೆ ಎಂದು ಸಾಮಾ​ಜಿಕ ಕಾರ್ಯ​ಕರ್ತ ನರಸಿಂಹಮೂರ್ತಿ, ನೇಕಾರ ಸಂಘದ ಮಾಜಿ ಅಧ್ಯಕ್ಷ ಜಯರಾಂ, ಯುವ ಮುಖಂಡ ಚಂದ್ರಶೇಖರ್‌ ಸುದ್ದಿ​ಗೋ​ಷ್ಠಿ​ಯಲ್ಲಿ ಆಕ್ರೋಶ ವ್ಯಕ್ತ​ಪ​ಡಿ​ಸಿ​ದರು.

ರಾಮನಗರಕ್ಕೆ ಹೋಗಲು ಮಾಗಡಿಗೆ ಬರಬೇಕು. ಬೆಂಗಳೂರಿಗೆ ಹೋಗಬೇಕಾದರೆ ನೆಲಮಂಗಲ ಡಿಪೋ ಸಂಪರ್ಕಿಸಿ. ಕುದೂರು ತಿಪ್ಪಸಂದ್ರ, ಸೋಲೂರು ಹೋಬಳಿಗಳು ಜಿಲ್ಲೆಯ ಗಡಿಗ್ರಾಮಗಳಾಗಿರುವ ಕಾರಣ ಸೌಲಭ್ಯ ನೀಡಲಾಗುತ್ತಿಲ್ಲ. ಮತ್ತು ನಮಗೆ ಬಸ್ಸುಗಳ ಕೊರತೆ ಇರುವುದರಿಂದ ನೇರ ಬಸ್ಸುಗಳನ್ನು ಬಿಡಲು ಸಾಧ್ಯವಿಲ್ಲ. ಆದ್ದರಿಂದ ರಾಮನಗರಕ್ಕೆ ಹೋಗಬೇಕಾದರೆ ಮಾಗಡಿಗೆ ಬಂದು ಬಸ್ಸು ಬದಲಿಸಿಕೊಂಡು ಹೋಗಬೇಕೆ ಹೊರತು ಬೇರೆ ದಾರಿಯಿಲ್ಲ.

- ನಟರಾಜು, ವ್ಯವ​ಸ್ಥಾ​ಪ​ಕ​ರು, ಮಾಗಡಿ ಕೆಎಸ್‌ಆರ್‌ ಟಿಸಿ ಡಿಪೋ.

 ಈ ಸಂಬಂಧವಾಗಿ ನಮಗೆ ದೂರುಗಳು ಬಂದಿವೆ. ನೆಲಮಂಗಲ, ಕುಣಿಗಲ…, ಮಾಗಡಿ ಡಿಪೋ​ಗ​ಳ​ವ​ರ ಪೈಪೋಟಿಯಿಂದಾಗಿ ಇಲ್ಲಿನ ಜನರಿಗೆ ಬಸ್ಸು ಸೌಲಭ್ಯ ಸರಿಯಾಗಿ ಸಿಗದಂತಾಗಿದೆ. ಬಸ್ಸುಗಳ ಕೊರತೆ ಇದ್ದರೆ ಸರ್ಕಾರಕ್ಕೆ ಮನವಿ ಮಾಡಿ ಹೆಚ್ಚಿನ ಬಸ್ಸುಗಳ ಸಂಪರ್ಕ ಕಲ್ಪಿಸಿಕೊಡಲು ಅಲ್ಲಿನ ಅಧಿಕಾರಿಗಳು ಕೆಲಸ ಮಾಡಬೇಕು. ಈ ಸಂಬಂಧವಾಗಿ ನಾನು ಶಾಸಕರು ಹಾಗೂ ಸಂಸದರ ಬಳಿ ಚರ್ಚಿಸುತ್ತೇನೆ.

- ಬಿ.ಅಣ್ಣೇಗೌಡ, ಸದ​ಸ್ಯರು, ಕುದೂರು ಜಿಪಂ ಕ್ಷೇತ್ರ.