‘ಕಾಂಗ್ರೆಸ್ ಶಿಸ್ತಿನ ಸಿಪಾಯಿಯಾದ ನಾನು ರಾಜೀನಾಮೆಗೆ ಸಿದ್ಧನಿದ್ದೇನೆ’
ಕಾಂಗ್ರೆಸ್ ಶಿಸ್ತಿನ ಸಿಪಾಯಿಯಾಗಿರುವ ನಾನು ರಾಜೀನಾಮೆಗೆ ಸಿದ್ಧನಿದ್ದೇನೆ ಎಂದು ಕೈ ಮುಖಂಡರೋರ್ವರು ಹೇಳಿದ್ದಾರೆ.
ರಾಮನಗರ [ಮಾ.05]: ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಹೈಕಮಾಂಡ್ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿರುವ ತಾವು, ನಮ್ಮ ಪಕ್ಷದ ವರಿಷ್ಠರು ಹಾಗೂ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅಧ್ಯಕ್ಷ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಲು ಸೂಚಿಸಿದರೆ ಪದತ್ಯಾಗ ಮಾಡುವುದಾಗಿ ರಾಮನಗರ ತಾಪಂ ಅಧ್ಯಕ್ಷ ಗಾಣಕಲ್ ನಟರಾಜು ಪ್ರತಿಕ್ರಿಯಿಸಿದರು.
ತಾಪಂ ಸಭೆಯನ್ನು ಮುಂದೂಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 20 ವರ್ಷಗಳಿಂದಲೂ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ. ಎನ್‌ಎಸ್ ಯುಐ, ಯುವ ಕಾಂಗ್ರೆಸ್ ಪ್ರಮುಖ ಪದಾಧಿಕಾರಿಯಾಗಿ, ಪ್ರಸ್ತುತ ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನನಗೆ ಅಧಿಕಾರಕ್ಕಿಂತ ಪಕ್ಷವೇ ಮುಖ್ಯ. ಈ ನಿಟ್ಟಿನಲ್ಲಿ ನಮ್ಮ ನಾಯಕರ ಆಣತಿಯಂತೆ ನಡೆಯುತ್ತೇನೆ ಸ್ಪಷ್ಟಪಡಿಸಿದರು.
ನಾನೇ ಗೌರವದಿಂದ ನಿರ್ಗಮಿಸುತ್ತಿದ್ದೆ:
ಇವತ್ತಿನ ಸಾಮಾನ್ಯ ಸಭೆಯಲ್ಲಿ ನಾನು ಸುಗಮವಾಗಿ ಹಾಗೂ ದಕ್ಷತೆಯಿಂದ ಆಡಳಿತ ನಡೆಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಗೌರವದಿಂದ ನಿರ್ಗಮಿಸಬೇಕು ಎಂಬ ಉದ್ದೇಶವಿತ್ತು. ಆದರೆ, ವಸ್ತು ಸ್ಥಿತಿಯನ್ನು ಅರ್ಥ ಮಾಡಿಕೊಳ್ಳದ ಜೆಡಿಎಸ್ ಸದಸ್ಯರು, ತಮ್ಮ ಮೇಲೆ ವಿನಾಕಾರಣ ಅರೋಪ ಮಾಡುತ್ತಿದ್ದಾರೆ. ಮಾತ್ರವಲ್ಲ, ಅಧಿಕಾರ ಬಿಟ್ಟುಕೊಡುವ ಸಂಬಂಧ ನಾನು ಈಗಾಗಲೇ ನಾಲ್ಕರಿಂದ ಐದು ಗಡುವುಗಳನ್ನು ಮೀರಿದ್ದೇನೆಂದು ಎಲ್ಲೆಡೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅಧ್ಯಕ್ಷರ ವಿರುದ್ಧ ಇಲ್ಲಸಲ್ಲದ ಆರೋಪ:
ಕಾಂಗ್ರೆಸ್ ತಾಪಂ ಸದಸ್ಯ ರೇಣುಕಾಪ್ರಸಾದ್ ಮಾತನಾಡಿ, ರಾಮನಗರ ತಾಪಂನ ಐದು ವರ್ಷಗಳ ಅವಧಿಯಲ್ಲಿ ಜೆಡಿಎಸ್ 3 ವರ್ಷ ಹಾಗೂ ಕಾಂಗ್ರೆಸ್ 2 ವರ್ಷ ಅಧಿಕಾರ ನಡೆಸುವುದು. ಒಟ್ಟು ಐದು ಮಂದಿ ಒಂದೊಂದು ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದು ಎಂದು ಒಡಬಂಡಿಕೆಯಾಗಿತ್ತು. ಅದರಂತೆ ಮೊದಲ ವರ್ಷ ಜೆಡಿಎಸ್ ಹಾಗೂ 2ನೇ ವರ್ಷ ಕಾಂಗ್ರೆಸ್, 3ನೇ ವರ್ಷ ಜೆಡಿಎಸ್, ಇನ್ನುಳಿದ 2 ವರ್ಷದಲ್ಲಿ ಕಾಂಗ್ರೆಸ್‌ಗೆ ಒಂದು ವರ್ಷ ಹಾಗೂ ಜೆಡಿಎಸ್‌ಗೆ ಒಂದು ವರ್ಷ ಎಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಸ್ಪೀಕರ್, ಯತ್ನಾಳ್ ವಿರುದ್ಧ ಗೌರ್ನರ್‌ಗೆ ಕಾಂಗ್ರೆಸ್ ದೂರು...
ಆದರೆ, ಮೊದಲು ಅಧ್ಯಕ್ಷರಾದ ಡಿ.ಎಂ.ಮಹದೇವಯ್ಯ ಸತತ ಎರಡೂವರೆ ವರ್ಷ ಅಧಿಕಾರ ಚಲಾಯಿಸಿದರು. ಆದರೆ, ಒಪ್ಪಂದಂತೆ ಮೊದಲ ಮೂರು ವರ್ಷದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಸಿಗಲೇ ಇಲ್ಲ. ಇದೀಗ ಒಂದು ವರ್ಷ 5 ತಿಂಗಳಷ್ಟೇ ಆಡಳಿತ ನಡೆಸಿರುವ ಕಾಂಗ್ರೆಸ್‌ಗೆ ತನ್ನ ಪಾಲಿನ ಇನ್ನೂ 6 ತಿಂಗಳ ಅಧಿಕಾರವಿದೆ. ಆದರೆ, ಇದನ್ನು ಅರ್ಥ ಮಾಡಿಕೊಳ್ಳದ ಜೆಡಿಎಸ್ ಸದಸ್ಯರು ಹಾಲಿ ಅಧ್ಯಕ್ಷರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಸಭೆ ಸೇರಿ ಮಾತನಾಡೋಣ ಎಂದರೂ ಬರುತ್ತಿಲ್ಲ ಎಂದು ಆರೋಪಿಸಿದರು.