ದೇವೇಗೌಡರ ಬದುಕಿನ ತಪಸ್ಸಿಗೆ ಫಲ ಸಿಗಲಿದೆ: ನಿರ್ಮಲಾನಂದನಾಥ ಶ್ರೀ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಶ್ರಮ, ಕಾಳಜಿಯನ್ನು ನಾವೆಲ್ಲಾ ನೋಡಿದ್ದೇವೆ. ಅವರ ಶ್ರಮಕ್ಕೆ ತಕ್ಕ ಫಲ ಸಿಕ್ಕಿಲ್ಲ. ಆದರೆ ಮುಂದೆ ಖಂಡಿತವಾಗಿಯೂ ಸಿಗಲಿದೆ ಎಂದು ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವದಿಸಿದರು.
ಬೆಂಗಳೂರು (ಆ.28): ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಶ್ರಮ, ಕಾಳಜಿಯನ್ನು ನಾವೆಲ್ಲಾ ನೋಡಿದ್ದೇವೆ. ಅವರ ಶ್ರಮಕ್ಕೆ ತಕ್ಕ ಫಲ ಸಿಕ್ಕಿಲ್ಲ. ಆದರೆ ಮುಂದೆ ಖಂಡಿತವಾಗಿಯೂ ಸಿಗಲಿದೆ ಎಂದು ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವದಿಸಿದರು. ದುಬೈ ಕನ್ನಡಿಗರ ಕನ್ನಡ ಕೂಟದಿಂದ ಚಾಮರಾಜಪೇಟೆಯ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಭಾನುವಾರ ಆಯೋಜಿಸಿದ್ದ ‘ದೇವೇಗೌಡ ದಂಪತಿಗೆ ಹುಟ್ಟೂರ ಸನ್ಮಾನ’ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು. ಅನಾರೋಗ್ಯದ ನಡುವೆಯೂ ಗೌಡರು ಯುವಕರಿಗೆ ಶಕ್ತಿ ತುಂಬಲು ಆಗಮಿಸಿದ್ದಾರೆ.
ತಮ್ಮ ಬದುಕಿನುದ್ದಕ್ಕೂ ಕ್ಷೇತ್ರವೊಂದನ್ನು ಆಯ್ಕೆ ಮಾಡಿಕೊಂಡು ಗೌಡರು ಬಹಳಷ್ಟು ಶ್ರಮಪಟ್ಟಿದ್ದಾರೆ. ಬದುಕಿನಲ್ಲಿ ಸಿಗಬೇಕಾದ ಫಲ ಅವರಿಗೆ ಸರಿಯಾಗಿ ಸಿಕ್ಕಿಲ್ಲ. ಆದರೆ ಈ ತಪಸ್ಸಿನ ಫಲ ಮುಂದೆ ಅವರಿಗೆ ಸಿಗಲಿದೆ ಎಂದು ಹರಸಿದರು. ದೇವೇಗೌಡರ ಕುರಿತು ಹೊರಬಂದಿರುವ ‘ನೇಗಿಲ ಗೆರೆಗಳು’ ಅತ್ಯುತ್ತಮ ಪುಸ್ತಕವಾಗಿದೆ. ಗೌಡರು ದೇಶದ ಪ್ರಧಾನಿಯಾಗಿ 11 ತಿಂಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಆದರ್ಶಗಳ ಕೊರತೆಯೇ ಎದ್ದು ಕಾಣುತ್ತಿರುವ ಈ ದಿನಗಳಲ್ಲಿ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಉತ್ತಮ ಕಾರ್ಯವಾಗಿದೆ. ಮಕ್ಕಳಿಗೆ ಈ ಪುಸ್ತಕ ಓದಿಸಿದರೆ ದಿಗ್ದರ್ಶನ ಮೂಡುತ್ತದೆ ಎಂದು ಬಣ್ಣಿಸಿದರು.
ಮುನೇನಕೊಪ್ಪ, ಚಿಕ್ಕನಗೌಡ್ರ ಕಾಂಗ್ರೆಸ್‌ಗೆ ಬರ್ತಾರೆ: ಸಚಿವ ಸಂತೋಷ್ ಲಾಡ್
ನೈಸ್ ‘ಸಂಧಾನ’ಕ್ಕೆ ಒಪ್ಪಲಿಲ್ಲ: ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಉದ್ಯಮಿ ಜಫ್ರುಲ್ಲಾ ಖಾನ್ ಮಾತನಾಡಿ, ಈ ಹಿಂದೆ ನೈಸ್ ಸಂಸ್ಥೆಯ ವಿರುದ್ಧ ದೇವೇಗೌಡರು ಹೋರಾಟ ನಡೆಸುತ್ತಿದ್ದರು. ಆಗ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಅವರೊಂದಿಗೆ ನಾನೊಮ್ಮೆ ‘ಮಾತುಕತೆ’ ನಡೆಸಲು ಹೋಗಿದ್ದೆ. ಇದನ್ನು ತಿಳಿದ ದೇವೇಗೌಡರು ನನ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ‘ನನ್ನ ರೈತರನ್ನು ಕೊಂದವನ ಜೊತೆ ಮಾತುಕತೆ ಬೇಕಾಗಿಲ್ಲ. ನನ್ನ ಮಕ್ಕಳ ಆಸ್ತಿ ಮಾರಿ ಮಾನನಷ್ಟಮೊಕದ್ದಮೆ ಎದುರಿಸುತ್ತೇನೆ’ ಎಂದಿದ್ದರು ಎಂದು ನೆನಪಿಸಿಕೊಂಡರು.
ಬಿಬಿಎಂಪಿ ವಿಶೇಷ ಆಯುಕ್ತ ಜಯರಾಮ್ ರಾಯಪುರ ಮಾತನಾಡಿ, ವಿಮಾನ ನಿಲ್ದಾಣ, ಮೆಟ್ರೋ, ಹೊರವರ್ತುಲ ರಸ್ತೆ ಮತ್ತಿತರ ಮಹತ್ವದ ಯೋಜನೆಗಳಿಗೆ ದೇವೇಗೌಡರು ಮುಖ್ಯಮಂತ್ರಿ ಅಗಿದ್ದಾಗ ಚಾಲನೆ ನೀಡಿದ್ದರು. ಗೌಡರು ಪ್ರಧಾನಿಯಾಗದೇ ರಾಜ್ಯದ ಮುಖ್ಯಮಂತ್ರಿಯಾಗಿಯೇ ಇದ್ದಿದ್ದರೆ 15 ವರ್ಷ ಆಡಳಿತ ನಡೆಸುತ್ತಿದ್ದರು. ಇನ್ನಷ್ಟುಅಭಿವೃದ್ಧಿ ಆಗುತ್ತಿತ್ತು. ಆದರೆ ಪ್ರಧಾನಿಯಾಗಿದ್ದು ಒಂದು ಕಡೆ ನಮಗೆ ಸೌಭಾಗ್ಯವಾಯಿತು. ಆದರೆ ನಾಡು ಇನ್ನಷ್ಟುಅಭಿವೃದ್ಧಿ ಆಗದಿದ್ದರಿಂದ ದೌರ್ಭಾಗ್ಯವಾಯಿತು ಎಂದು ವ್ಯಾಖ್ಯಾನಿಸಿದರು. ದೇವೇಗೌಡ, ಚನ್ನಮ್ಮ ದಂಪತಿಯನ್ನು ಇದೇ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಅಭಿಮಾನಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಟಿ.ವೆಂಕಟೇಶ್, ದುಬೈ ಕನ್ನಡಿಗರ ಕನ್ನಡ ಕೂಟದ ಅಧ್ಯಕ್ಷ ಸಾದನ್ ದಾಸ್ ಉಪಸ್ಥಿತರಿದ್ದರು.
ಸೌಜನ್ಯ ಕೇಸ್ ಮರುತನಿಖೆಗಾಗಿ ವೀರೇಂದ್ರ ಹೆಗ್ಗಡೆ ಕುಟುಂಬ ಹೈಕೋರ್ಟ್‌ಗೆ
ಭಾವುಕರಾದ ದೇವೇಗೌಡರು: ‘ನನಗೆ 91 ವರ್ಷವಾಗಿದೆ. ನಾಡಿನ ಸಮಸ್ಯೆಗಳನ್ನು ನೋಡಿದಾಗ ಮನಸ್ಸಿಗೆ ನೋವಾಗುತ್ತದೆ. ಸಮಸ್ಯೆಗಳ ಬಗ್ಗೆ ಮಾತನಾಡಲು ಆ.28ರಂದು ಪತ್ರಿಕಾಗೋಷ್ಠಿ ಕರೆದಿದ್ದೇನೆ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಭಾವುಕರಾಗಿ ನುಡಿದರು. ರಾಷ್ಟ್ರೀಯ ವಿಷಯಗಳ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಕನ್ನಡಿಗ. ನಾಡಿನ ಸಮಸ್ಯೆಗಳನ್ನು ನೋಡಿ ಮನಸ್ಸಿಗೆ ಬಹಳ ನೋವಾಗಿದೆ. ಆದ್ದರಿಂದ 91ನೇ ವಯಸ್ಸಿನಲ್ಲೂ ಸೋಮವಾರ ಪತ್ರಿಕಾಗೋಷ್ಠಿ ಕರೆದಿದ್ದೇನೆ. ರಾಜ್ಯದ ಪರಿಸ್ಥಿತಿ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಸಮಸ್ಯೆಗಳ ಬಗ್ಗೆ ವಿವರಿಸುತ್ತೇನೆ ಎಂದು ಗದ್ಗದಿತರಾದ ಅವರು, ನಾಲ್ಕು ಗಂಟೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದಕ್ಕೆ ನಿಮಗೆಲ್ಲಾ ನಮಿಸುತ್ತೇನೆ ಎಂದು ಕೈಮುಗಿದರು.