ಹಾವೇರಿ(ನ.09): ಕುರುಬ ಸಮಾಜವನ್ನು ಪರಿಶಿಷ್ಟಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ಮುಂದಿಟ್ಟಹೆಜ್ಜೆ ಹಿಂದಿಡುವುದಿಲ್ಲ. ಗುರಿ ಮುಟ್ಟುವ ವರೆಗೂ ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಕೇಂದ್ರ ಸರ್ಕಾರದ ಟೇಬಲ್‌ ಗುದ್ದಿ ಹಕ್ಕೊತ್ತಾಯ ಮಾಡಲು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನುಡಿದರು.

ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವಂತೆ ಒತ್ತಾಯಿಸಲು ಜಿಲ್ಲೆಯ ಬ್ಯಾಡಗಿ ತಾಲೂಕು ಕಾಗಿನೆಲೆಯಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ಕುರುಬ ಸಮಾಜ ಎಸ್ಟಿ ಹೋರಾಟ ಸಮಿತಿ ಮಹಿಳಾ ಚಿಂತನಾ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಜಾತಿ ಕೋಟಾದಲ್ಲಿ ಅಧಿಕಾರ ಅನುಭವಿಸಿದ ಸಮಾಜದ ನಾಯಕರಲ್ಲಿ ಕೈಮುಗಿದು ಕೇಳುತ್ತೇನೆ. ಸಮಾಜದ ಋುಣ ತೀರಿಸಲು ಎಸ್ಟಿ ಮೀಸಲಾತಿ ಜಾರಿಗೆ ಕೈಜೋಡಿಸಬೇಕು. ಈ ಹೋರಾಟದಲ್ಲಿ ಕೆಲವರು ಕೈಹಿಸುಕುವ ಕೆಲಸ ಮಾಡುತ್ತಿದ್ದಾರೆ. ಅಂಥವರ ಹೆಸರನ್ನು ಬೇಕಾದರೆ ಬಹಿರಂಗವಾಗಿಯೇ ಹೇಳುತ್ತೇನೆ. ಆದರೆ, ಯಾರೂ ಆ ರೀತಿ ಮಾಡಬೇಡಿ. ಅದರ ಬದಲು ಕೈ ಸೇರಿಸೋ ಕೆಲಸ ಮಾಡಿ. ನಿಮ್ಮಿಂದ ಕೈಜೋಡಿಸಲು ಸಾಧ್ಯವಿಲ್ಲದಿದ್ದರೆ ತೆಪ್ಪಗಿರಿ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಈ ಹೋರಾಟದಲ್ಲಿ ಎಂಥಾ ತಿಮಿಂಗಿಲ ಬಂದರೂ ಪರವಾಗಿಲ್ಲ, ನಾವು ಸತ್ತರೂ ತೊಂದರೆಯಿಲ್ಲ. ಎಸ್ಟಿ ಮೀಸಲಾತಿ ಪಡೆಯಲು ಎಲ್ಲ ರೀತಿಯ ತಯಾರಿ ಮಾಡುತ್ತೇವೆ. ಮೀಸಲಾತಿಯನ್ನು ಪ್ರೀತಿಯಿಂದಲೇ ಕೇಳೋಣ. ಪ್ರೀತಿಯಿಂದ ಸಿಗದಿದ್ದರೆ ಹೋರಾಟದ ಮೂಲಕವಾದರೂ ನಮ್ಮ ಹಕ್ಕು ಪಡೆಯೋಣ. ಎಸ್ಟಿಮೀಸಲಾತಿಗಾಗಿ ನಾವು ಇಟ್ಟ ಹೆಜ್ಜೆಯಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದರು.

ಎಂಟಿಬಿಗೆ ಸಚಿವ ಸ್ಥಾನ ಫಿಕ್ಸ್ : ಯಾವ ಖಾತೆ ಹೊಣೆ..?

ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಲು ಆಗ್ರಹಿಸಿ ಜ. 15ರಿಂದ ಫೆಬ್ರವರಿ 7ರ ವರೆಗೆ ಕಾಗಿನೆಲೆಯಿಂದ ಬೆಂಗಳೂರಿನವರೆಗೆ 340 ಕಿಮೀ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರು ಈಗಿನಿಂದಲೇ ವಾಕ್‌ ಮಾಡಿ. ನಾನು ಕೂಡ ಈಗಿನಿಂದಲೇ ತಯಾರಿ ನಡೆಸುತ್ತಿದ್ದೇನೆ. ದಿನಕ್ಕೆ 20 ಕಿಮೀ ನಡೆಯುವ ಗುರಿಯಿದೆ ಎಂದು ಹೇಳಿದರು.

ಹೋರಾಟ ರೂವಾರಿ, ಸಚಿವ ಕೆ.ಎಸ್‌. ಈಶ್ವರಪ್ಪ ಮಾತನಾಡಿ, ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಸಮುದಾಯದ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಸಂಬಂಧವಾಗಿ ನಮ್ಮ ಹೋರಾಟ ನಡೆಯುತ್ತಿದೆ. ಸಮಾಜದವರಿಗೆ ಉಚಿತ ಮನೆ, ಜಮೀನು, ಶಿಕ್ಷಣ, ಉದ್ಯೋಗ ಸಿಗಬೇಕು. ಯಾವುದೇ ಕಾರಣಕ್ಕೂ ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಮೀಸಲಾತಿ ಸಿಗುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದರು.

ಮಾಜಿ ಸಚಿವ, ಶಾಸಕ ಎಂಟಿಬಿ ನಾಗರಾಜ್‌ ಮಾತನಾಡಿ, ರಾಜಕೀಯ ಬದಲಾವಣೆ ಕಾರಣಕ್ಕೆ ನಾನು ಬಿಜೆಪಿ ಸೇರಿದ್ದೇನೆ. ನಮ್ಮ ಸಮಾಜದ ಎಲ್ಲ ರಾಜಕೀಯ ಮುಖಂಡರು ಒಟ್ಟಾಗಿ ಈ ಹೋರಾಟಕ್ಕೆ ಕೈಜೋಡಿಸಬೇಕು. ಆ ಮೂಲಕ ಈಶ್ವರಪ್ಪ ಅವರಿಗೆ ಬಲ ತುಂಬಬೇಕು. ಎಸ್ಟಿಮೀಸಲಾತಿ ಹೋರಾಟಕ್ಕೆ ಜಯ ಸಿಗಬೇಕು. ಕಾಗಿನೆಲೆಯಿಂದ ದೆಹಲಿವರೆಗೂ ಹೋರಾಟ ನಡೆಸೋಣ. ಯಾವುದೇ ಕಾರಣಕ್ಕೆ ಹಿನ್ನಡೆ ಆಗಬಾರದು ಎಂದರು. ಮಾಜಿ ಸಚಿವ ಎಚ್‌.ಎಂ. ರೇವಣ್ಣ, ಪ್ರಮುಖರಾದ ಮುಕಡಪ್ಪ, ಶಾಖಾ ಮಠಗಳ ಸ್ವಾಮಿಗಳು, ಸಮಾಜದ ಸಾವಿರಾರು ಮಹಿಳೆಯರು ಇದ್ದರು.