ಕೇರಳದಲ್ಲಿ ಮಾರಣಾಂತಿಕ ನಿಫಾ ಸೋಂಕು ಪತ್ತೆಯಾಗಿ ಬಾಲಕನೋರ್ವ ಸಾವಿಗೀಡಾದ ಪ್ರಕರಣ ಕೇರಳಕ್ಕೆ ಹೊಂದಿಕೊಂಡ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ವಿಶೇಷ ನಿಗಾ 

 ಮಂಗಳೂರು (ಸೆ.08): ಕೇರಳದಲ್ಲಿ ಮಾರಣಾಂತಿಕ ನಿಫಾ ಸೋಂಕು ಪತ್ತೆಯಾಗಿ ಬಾಲಕನೋರ್ವ ಸಾವಿಗೀಡಾದ ಪ್ರಕರಣದ ಬೆನ್ನಲ್ಲೇ ಕೇರಳಕ್ಕೆ ಹೊಂದಿಕೊಂಡ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ವಿಶೇಷ ನಿಗಾ ಇರಿಸುವಂತೆ ರಾಜ್ಯ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ಕೇರಳದಿಂದ ಕರ್ನಾಟಕಕ್ಕೆ ನಿತ್ಯವೂ ಸಾವಿರಾರು ಮಂದಿ ಪ್ರಯಾಣಿಸುವುದರಿಂದ ತಕ್ಷಣದಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಿಫಾ ಸಂಶಯಿತ ಪ್ರಕರಣಗಳು ಅಥವಾ ಲಕ್ಷಣಗಳು ಯಾರಲ್ಲಾದರೂ ಕಂಡುಬಂದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

ನಿಪಾಕ್ಕೆ ಬಲಿಯಾದ ಬಾಲಕನ ಸಂಪರ್ಕಕ್ಕೆ ಬಂದವರು ವೈರಸ್‌ನಿಂದ ಬಚಾವ್‌

ತಲಪಾಡಿಯಲ್ಲಿ ನಿಗಾ: ಕೋವಿಡ್‌ ಸೋಂಕಿನ ನಡುವೆ ಈಗ ನಿಫಾ ಆತಂಕ ಮೂಡಿರುವುದರಿಂದ ಕೇರಳ- ಕರ್ನಾಟಕ ನಡುವಿನ ಮುಖ್ಯ ಹಾಗೂ ನೇರ ರಸ್ತೆಯಾದ ತಲಪಾಡಿ ಗಡಿಯಲ್ಲಿ ತಪಾಸಣೆ ಚುರುಕುಗೊಳಿಸಲಾಗಿದೆ. ಶಂಕಿತ ವ್ಯಕ್ತಿಗಳ ಥರ್ಮಲ್‌ ಸ್ಕಾ್ಯನಿಂಗ್‌ ಮೂಲಕ ದೇಹದ ಉಷ್ಣಾಂಶ ತಪಾಸಣೆ ನಡೆಸಲಾಗುತ್ತಿದೆ.

ನಿಫಾ ಸೋಂಕಿತರಿಗೆ ತೀವ್ರ ತೆರನಾದ ಜ್ವರ, ಏಕಾಏಕಿ ಪ್ರಜ್ಞೆ ತಪ್ಪುವುದು ಇತ್ಯಾದಿ ಲಕ್ಷಣಗಳಿರುವುದರಿಂದ ಅಂಥ ರೋಗ ಲಕ್ಷಣಗಳು ಇರುವವರನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಗಡಿ ಜಿಲ್ಲೆಗಳಲ್ಲಿ ಹೈ ಅಲರ್ಟ್‌: ರಾಜ್ಯ ಸರ್ಕಾರ ಎಲ್ಲ ಜಿಲ್ಲೆಗಳಿಗೆ ನಿಫಾ ಕಟ್ಟೆಚ್ಚರ ಕುರಿತಾಗಿ ಸೂಚನೆ ರವಾನಿಸಿದ್ದು, ಮುಖ್ಯವಾಗಿ ದ.ಕ., ಉಡುಪಿ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ವಿಶೇಷ ನಿಗಾ ವಹಿಸಲು ಆದೇಶಿಸಿದೆ. ಯಾರೇ ಶಂಕಿತರು ಕಂಡುಬಂದರೂ ತಕ್ಷಣ ಮಾಹಿತಿ ನೀಡುವುದರೊಂದಿಗೆ, ಅವರ ಸ್ಯಾಂಪಲ್‌ನ್ನು ಪರೀಕ್ಷೆಗಾಗಿ ಕಳುಹಿಸಿಕೊಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್‌ ಕುಮಾರ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ನಿಫಾ ಮೊದಲ ಪ್ರಕರಣ ಪತ್ತೆಯಾದ ಕೂಡಲೆ ಕೇರಳದ ಎಲ್ಲ ಗಡಿ ಜಿಲ್ಲೆಗಳಲ್ಲಿ ಎಚ್ಚರ ವಹಿಸುವಂತೆಯೂ, ಶಂಕಿತ ಸೋಂಕಿತರ ಮೇಲೆ ವಿಶೇಷ ಕಣ್ಗಾವಲು ಇರಿಸುವಂತೆ ಕೇಂದ್ರ ಆರೋಗ್ಯ ಇಲಾಖೆಯೂ ಸೂಚನೆ ಹೊರಡಿಸಿತ್ತು.