ಮಂಡ್ಯ :ಸುಮಲತಾ ವಿರುದ್ಧ ಪರೋಕ್ಷ ಅಸಮಾಧಾನ ಹೊರಹಾಕಿದ ನಿಖಿಲ್
ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದು ಇಡೀ ರಾಜ್ಯವೇ ತಲೆ ತಗ್ಗಿಸುವ ವಿಚಾರ. ಕಾನೂನಿನಲ್ಲಿ ತಿದ್ದುಪಡಿ ತಂದು ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಕ್ರಮ ವಹಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಆಗ್ರಹಿಸಿದರು.
ಮಳವಳ್ಳಿ (ಅ.15): ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದು ಇಡೀ ರಾಜ್ಯವೇ ತಲೆ ತಗ್ಗಿಸುವ ವಿಚಾರ. ಕಾನೂನಿನಲ್ಲಿ ತಿದ್ದುಪಡಿ ತಂದು ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಕ್ರಮ ವಹಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಶುಕ್ರವಾರ ಆಗ್ರಹಿಸಿದರು.
ಪಟ್ಟಣದಲ್ಲಿ ಹತ್ಯೆಯಾದ ಬಾಲಕಿ ನಿವಾಸಕ್ಕೆ ಭೇಟಿ ನೀಡಿದ ನಿಖಿಲ್ (Nikil Kumaraswamy ) ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯಕ್ತಿಕ ಪರಿಹಾರ ನೀಡಿದರು. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಪಕ್ಷಾತೀತವಾಗಿ ಹೋರಾಟ ಮಾಡಬೇಕಿದೆ. ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ಹೇಳಿದರು.
ಈ ಘಟನೆ ನನ್ನ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ. ಮಗಳನ್ನು ಕಳೆದುಕೊಂಡ ತಂದೆ ತಾಯಿ (Parents) ಗೋಳು ಯಾರಿಗೂ ಬಾರದಿರಲಿ. ನೂರುಕಾಲ ಬಾಳಿ ಬದುಕಬೇಕಿದ್ದ ಮಗಳನ್ನು ಕಳೆದುಕೊಂಡ ಪೋಷಕರು ಮತ್ತು ಇಡೀ ಕುಟುಂಬದ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ. ಇದೊಂದು ಪೈಶಾಚಿಕ ಕೃತ್ಯ. ಆರೋಪಿ ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕು ಎಂದರು.
ಹೋರಾಟ ಅಗತ್ಯ:
ಆರೋಪಿ ಜೈಲಿನಲ್ಲಿದ್ದರೆ ಐದಾರು ವರ್ಷ ಊಟ, ತಿಂಡಿ ಹಾಕುತ್ತಾರೆ. ನಂತರ ಮತ್ತೆ ಹೊರ ಬರುತ್ತಾನೆ. ಆದ್ದರಿಂದ ಈ ವಿಚಾರವಾಗಿ ಯಾರು ರಾಜಕೀಯ ಮಾಡಬಾರದು. ಹೀನ ಕೃತ್ಯ ನಡೆಸಿರುವ ಆರೋಪಿಗೆ ಗಲ್ಲು ಶಿಕ್ಷೆಯಾಗಲು ಪಕ್ಷಾತೀತವಾಗಿ ಹೋರಾಟ ಅಗತ್ಯವಾಗಿದೆ ಎಂದು ಕರೆ ನೀಡಿದರು.
ಜನ ಪ್ರತಿನಿಧಿ ಎನಿಸಿಕೊಂಡವರಿಗೆ ಜವಾಬ್ದಾರಿ ಜೊತೆಗೆ ನೊಂದವರ ಜೊತೆಯಲ್ಲಿ ಇರಬೇಕು. ಕೇವಲ ಅಧಿಕಾರ ಅನುಭವಿಸುವುದಕ್ಕೆ ಮಾತ್ರ ಇರಬಾರದು. ಕಷ್ಟದಲ್ಲಿರುವವರ ನೆರವಿಗೆ ಬಾರದವರು ಜನ ಪ್ರತಿನಿಧಿಯಾಗಿ ಏನು ಪ್ರಯೋಜನ?. ಜನರ ಕಷ್ಟಕ್ಕೆ ಸ್ಪಂದಿಸುವ ಮನಸ್ಸಿರಬೇಕು ಎಂದು ಸಂಸದರ ಹೆಸರೇಳದೆ ಕಿಡಿಕಾರಿದರು.
ಎಂಪಿ, ಎಂ ಎಲ್ ಎ, ಮಿನಿಷ್ಟರ್ ಎಂದು ಇರಬಾರದು. ಅದೇ ರಾಜಕಾರಣ ಅಲ್ಲ. ನೊಂದವರ ಜೊತೆಗೆ ನಾವು ನಿಲ್ಲಬೇಕು. ಇದೇ ಧರ್ಮ. ಅದನ್ನು ಮಾಡಲಿಲ್ಲ ಅಂದರೆ ಹೇಗೆ ಎಂದು ಪ್ರಶ್ನೆ ಮಾಡಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕ ಡಾ.ಕೆ.ಅನ್ನದಾನಿ ಸದನದಲ್ಲಿ ಧ್ವನಿ ಎತ್ತಿ ಬಾಲಕಿಯ ಕುಟುಂಬಕ್ಕೆ ನ್ಯಾಯ ಕೊಡಿಸಲಿದ್ದಾರೆ ಎಂದು ಭರವಸೆ ನೀಡಿದರು.
ಆರೋಪಿಗೆ ಶೂಟ್ ಮಾಡಿ ಸಾಯಿಸಿ:
ಆರೋಪಿಯನ್ನು ಗಲ್ಲಿಗೇರಿಸಬೇಕು ಅಥವಾ ಶೂಟ್ ಮಾಡಿ ಸಾಯಿಸಬೇಕು. ಇಂತಹ ದೌರ್ಜನ್ಯ ಮತ್ತೆ ಮುಂದಿನ ದಿನಗಳಲ್ಲಿ ಮರುಕಳಿಸಬಾರದು. ಹೆಣ್ಣು ಮಕ್ಕಳ ಮೇಲೆ ಕೈ ಹಾಕಲು ಎದುರುವಂತಾಗಬೇಕು. ಸರ್ಕಾರಗಳು ತಕ್ಷಣ ಕ್ರಮ ಕೈಗೊಂಡು ಕಾಮುಕನನ್ನು ಗಲ್ಲಿಗೇರಿಸಿ ಇದರಿಂದ ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಬಾಲಕಿಯ ಪೋಷಕರು ಕಣ್ಣೀರು ಹಾಕುತ್ತಾ ನಿಖಿಲ್ ಮುಂದೆ ಅಳಲನ್ನು ತೋಡಿಕೊಂಡರು.
ಇದೇ ವೇಳೆ ಶಾಸಕ ಡಾ.ಕೆ.ಅನ್ನದಾನಿ, ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಜೆಡಿಎಸ್ ಯುವ ಘಟಕ ಜಿಲ್ಲಾಧ್ಯಕ್ಷ ರವಿಕಂಸಾಗರ, ಜೆಡಿಎಸ್ ತಾಲೂಕು ಅಧ್ಯಕ್ಷ ವಿಶ್ವನಾಥ್, ಪುರಸಭೆ ಉಪಾಧ್ಯಕ್ಷ ಪ್ರಶಾಂತ್, ಸದಸ್ಯರಾದ ನಂದಕುಮಾರ್, ಸಿದ್ದರಾಜು, ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಮುಖಂಡರಾದ ವಡ್ಡರಹಳ್ಳಿ ಶಿವನಂಜು, ಮಲ್ಲೇಶ್, ಸತೀಶ್, ಪುತ್ತೇಂಡೆ ನಾಗರಾಜು ಸೇರಿದಂತೆ ಇತರರು ಇದ್ದರು.
ಕಾನೂನಿನಲ್ಲಿ ತಿದ್ದುಪಡಿ ತರಬೇಕು: ನಿಖಿಲ್
- ಬಾಲಕಿ ಅತ್ಯಾಚಾರಗೈದು, ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ
- ಬಾಲಕಿ ಕುಟುಂಬಸ್ಥರಿಗೆ ಸಾಂತ್ವನ, ವೈಯಕ್ತಿಕ ಪರಿಹಾರ ವಿತರಣೆ