'ನನ್ನ ತಾಯಿ ಪರವಾಗಿ ಕೆಲಸ ಮಾಡುತ್ತಿದ್ದೇನೆ : ದುರುದ್ದೇಶ ಇಲ್ಲ'
ನನ್ನ ತಾಯಿ ಶಾಸಕಿ ಆಗಿರುವ ಕಾರಣ ನಾನಿಲ್ಲಿ ಕೆಲಸ ಮಾಡುತ್ತಿದ್ದೇನೆ ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣ (ಜ.23): ಯಾರೂ ಮಂತ್ರಿಯಾದರೂ, ಏನಾದರೂ ಅಷ್ಟೇ ಕಾರ್ಯಕರ್ತರ ಹಿತಕ್ಕೆ ಧಕ್ಕೆ ಆಗಲು ಬಿಡುವುದಿಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಂದೆ ಕುಮಾರಸ್ವಾಮಿಯ ಹಾದಿಯಲ್ಲಿಯೇ ಪರೋಕ್ಷವಾಗಿ ಸಚಿವ ಸಿ.ಪಿ.ಯೋಗೇಶ್ವರ್‌ಗೆ ಟಾಂಗ್ ನೀಡಿದರು.
ನಿಖಿಲ್ ಕುಮಾರಸ್ವಾಮಿ ಜನ್ಮದಿನದ ಪ್ರಯುಕ್ತ ದೊಡ್ಡಮಳೂರಿನಲ್ಲಿ ಅವರ ಅಭಿಮಾನಿಗಳ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಯಕರ್ತರ ಬೆನ್ನಿಗೆ ಪಕ್ಷವಿದ್ದು ಯಾವುದೇ ಕಾರಣಕ್ಕೂ ಅಂಜಬೇಡಿ. ಹಾಸನ ನಮ್ಮ ಕುಟುಂಬದ ಜನ್ಮಭೂಮಿಯಾದರೇ, ರಾಮನಗರ ಜಲ್ಲೆ ನಮ್ಮ ಕರ್ಮಭೂಮಿ. ಜಿಲ್ಲೆಯಿಂದ ಸ್ಪರ್ಧಿಸಿದ ಕುಮಾರಸ್ವಾಮಿ ಇಲ್ಲಿಂದಲೇ ಎರಡು ಬಾರಿ ಗೆದ್ದು ಎರಡು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು, ಈ ನೆಲದ ಋುಣ ನಮ್ಮ ಕುಟುಂಬದ ಮೇಲಿದೆ. ಅದನ್ನು ತೀರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ನಿಖಿಲ್ ಕುಮಾರಸ್ವಾಮಿಗೆ ರೇವತಿ ಕೊಟ್ಟ ಫಸ್ಟ್ ಬರ್ತಡೇ ಗಿಫ್ಟ್; 'ನೋ ಸರ್ಪ್ರೈಸ್'! .
ರಾಮನಗರದಲ್ಲಿ ನಮ್ಮ ತಾಯಿ ಅನಿತಾ ಕುಮಾರಸ್ವಾಮಿಯವರು ಶಾಸಕರಾಗಿದ್ದು ಅವರ ಪರವಾಗಿ ಪಕ್ಷ ಸಂಘಟಿಸುವ ಕೆಲಸ ಮಾಡುತ್ತಿದ್ದೇನೆಯೇ ಹೊರತು, ಮತ್ಯಾವುದೇ ಉದ್ದೇಶ ಇಟ್ಟುಕೊಂಡು ಜಿಲ್ಲೆಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ರಾಮನಗರದಿಂದ ಸ್ಪರ್ಧಿಸುವ ವಿಚಾರವನ್ನು ಅಲ್ಲಗೆಳೆದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ. ಜಯಮುತ್ತು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ವಿದ್ಯಾರ್ಥಿ ಘಟಕದ ಅಧ್ಯಕ್ಷ ಆಶಿಷ್, ಗ್ರಾಪಂ ಸದಸ್ಯ ಅಭಿಷೇಕ್, ಯುವ ಘಟಕದ ಅಧ್ಯಕ್ಷ ವಿನೋದ್ ಮುಂತಾದವರು ಇದ್ದರು.