ರಾಮನಗರ (ನ.12): ಮಂಡ್ಯದಲ್ಲಿ ಕಳೆದುಕೊಂಡಿದ್ದನ್ನು ರಾಮನಗರದಲ್ಲಿ ಪಡೆಯುವ ಪ್ಲಾನ್ ನಿಖಿಲ್ ಮಾಡುತ್ತಿದ್ದಾರೆ. ಅಲ್ಲಿ ಸಲ್ಲದವರು ಇಲ್ಲಿ ಸಲ್ಲುವರೇ..? 
 
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸೋತ ನಿಖಿಲ್ ಮುಂದಿನ ರಾಜಕೀಯ ಭವಿಷ್ಯ ರಾಮನಗರದಲ್ಲಿ ಕಟ್ಟಿಕೊಳ್ಳಲು ಪ್ಲಾನ್ ಮಾಡಲಾಗುತ್ತಿದೆ. 

ತನ್ನ ತಾತ ಮತ್ತು ತಂದೆಗೆ ರಾಜಕೀಯ ನೆಲೆ ಕೊಟ್ಟ ಜಾಗದಲ್ಲಿಯೇ ಬೇರೂರಲು ನಿಖಿಲ್ ಪ್ಲಾನ್ ಮಾಡುತ್ತಿದ್ದು, ರಾಮನಗರ ಕ್ಷೇತ್ರದಲ್ಲಿ ನಿಖಿಲ್ ಗೆ ಸದ್ದಿಲ್ಲದೇ ರಾಜಕೀಯ ವೇದಿಕೆ  ಸಿದ್ಧವಾಗುತ್ತಿದೆ.  

ರಾಮನಗರದ ಬಿಡದಿಯಲ್ಲಿ ವಾಸಕ್ಕೆ ಮನೆ ಸಿದ್ಧವಾಗ್ತಿದೆ! ಪತ್ನಿ ರೇವತಿಯ ಮೇಲುಸ್ತುವಾರಿಯಲ್ಲಿ ನೂತನ ಮನೆ ನಿರ್ಮಾಣ ಕಾರ್ಯ ನಡೆದಿದೆ! ರಾಮನಗರದ ಅನೇಕ ಕಾರ್ಯಕ್ರಮಗಳಲ್ಲಿ ನಿಖಿಲ್ ಹಾಜರಿ ಎದ್ದುಕಾಣ್ತಿದೆ!

'ನಿಖಿಲ್ ಕುಮಾರಸ್ವಾಮಿ ವಿರುದ್ಧ ಗರಂ : ಅನಿತಾ ವಿರುದ್ಧವೂ ಅಸಮಾಧಾನ' .

ಕಾರ್ಯಕರ್ತರ ಜೊತೆ ಬೆರೆಯುವ ಯಾವುದೇ ಅವಕಾಶಗಳನ್ನೂ ಮಿಸ್ ಮಾಡಿಕೊಳ್ಳುತ್ತಿಲ್ಲ ನಿಖಿಲ್ ಕುಮಾರಸ್ವಾಮಿ. ಉದ್ಘಾಟನಾ ಕಾರ್ಯಕ್ರಮಗಳಿಗೆ ತಪ್ಪದೇ ಹಾಜರಾಗುತ್ತಿದ್ದಾರೆ. ಕ್ಷೇತ್ರದಲ್ಲಿ ಕಾರ್ಯಕರ್ತರ ಮನೆಯ ಶುಭ ಸಮಾರಂಭಗಳಲ್ಲೂ ನಿಖಿಲ್ ಹಾಜರಾತಿ ಕಾಣಿಸುತ್ತಿದೆ. 

ಸ್ವತಃ ಶಾಸಕಿ ಅನಿತಾ ಕುಮಾರಸ್ವಾಮಿ ಹಾಜರಾಗಬೇಕಿದ್ದ ಅನೇಕ ಖಾಸಗಿ ಕಾರ್ಯಕ್ರಮಗಳಲ್ಲೂ ನಿಖಿಲ್ ಉಪಸ್ಥಿತಿ ಕಂಡು ಬರುತ್ತಿದ್ದು, ಅನಿತಾ ಕುಮಾರಸ್ವಾಮಿಗೆ ರಾಜಕಾರಣ ಸಾಕಾಗಿದ್ದು, ಮುಂದಿನ ಬಾರಿ ಮಗ ನಿಖಿಲ್‌ಗೆ ಕ್ಷೇತ್ರ ಬಿಟ್ಟುಕೊಡಲು ತಯಾರಿ ನಡೆಯುತ್ತಿದೆ. 

ಪತಿ ಹಾಗೂ ಕುಟುಂಬದ ಮಾತಿಗೆ ಕಟ್ಟುಬಿದ್ದು ಚುನಾವಣಾ ರಾಜಕಾರಣಕ್ಕೆ ಬಂದಿದ್ದ ಅನಿತಾ ಕುಮಾರಸ್ವಾಮಿ ಇದೀಗ ಮಗನಿಗೆ ಪಟ್ಟಕಟ್ಟಲು ಸಿದ್ಧರಾಗಿದ್ದಾರೆ.  ಹೀಗಾಗಿಯೇ ರಾಮನಗರ ಕ್ಷೇತ್ರದ ಬಗ್ಗೆ ಹೆಚ್ಚು ಆಸಕ್ತಿ ವಹಿಸಲು ಸೂಚನೆ ನೀಡಿದ್ದು, ರಾಮನಗರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರಾ ನಿಖಿಲ್ ಕುಮಾರಸ್ವಾಮಿ ಎನ್ನುವ ಪ್ರಶ್ನೆ ಮೂಡಿದೆ.